ಸಿನಿ ಸಮಾಚಾರ

ವಿಜಯಪುರ ಬಿಜೆಪಿಗೆ ಸದಾ ವಿಜಯಲಕ್ಷ್ಮಿ ತಂದು ಕೊಡುವ ಜಿಲ್ಲೆ: ತಾರಾ ಅನುರಾಧಾ

ವಿಜಯಪುರ: ವಿಜಯಪುರ ಜಿಲ್ಲೆ ಸದಾ ಬಿಜೆಪಿಗೆ ವಿಜಯಲಕ್ಷ್ಮಿ ತಂದು ಕೊಡುವ ಜಿಲ್ಲೆ. ಇಲ್ಲಿಯ ಜನ ಒಳ್ಳೆಯ ಹೃದಯವಂತರು. ಹಾಗಾಗಿ ಈ ಬಾರಿಯೂ ರಮೇಶ‌ ಜಿಗಜಿಣಗಿಯವರನ್ನು ವಿಜಯಲಕ್ಷ್ಮೀ ಕೈ ಹಿಡಿಯಲಿದ್ದಾಳೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯೆ, ಚಿತ್ರನಟಿ ತಾರಾ ಅನುರಾಧಾ ಹೇಳಿದರು. ಬಿಜೆಪಿ ಅಭ್ಯರ್ಥಿ ರಮೇಶ‌ ಜಿಗಜಿಣಗಿ ಪರವಾಗಿ ಪ್ರಚಾರ ಮಾಡಲು ವಿಜಯಪುರಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಜಿಗಜಿಣಗಿ ಉತ್ತಮ ಸ್ವಭಾವದ ವ್ಯಕ್ತಿ. ಅವರು ನನ್ನನ್ನು ಎಂದಿಗೂ ಹೆಸರಿನಿಂದ ಕರೆದಿಲ್ಲ. ಅಕ್ಕ ಎಂದು ಕರೆಯುತ್ತಾರೆ ಎಂದು ಜಿಗಜಿಣಗಿ ವ್ಯಕ್ತಿತ್ವವನ್ನು ಬಣ್ಣಿಸಿದರು. ಜಿಲ್ಲೆಯ ಮುಖ್ಯ ರಸ್ತೆ, ರಾಷ್ಟ್ರೀಯ ಹೆದ್ದಾರಿಗಳನ್ನು ಅಭಿವೃದ್ಧಿ ಪಡಿಸಿದ್ದಾರೆ.

ಮುನಿಸಿಪಾಲಿಟಿ ಮಾಡುವ, ರಾಜ್ಯ ಸರಕಾರ ಮಾಡುವ ಕೆಲಸಗಳನ್ನು ಇವರೇಕೆ ಮಾಡಬೇಕು. ಆದರೆ ಕೇಂದ್ರ ಮಂತ್ರಿಯಾಗಿ ಅವರು ಮಾಡಬೇಕಾದ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ ಎಂದರು. ಮೇಲಾಗಿ ಜಿಗಜಿಣಗಿಯವರು ನಮ್ಮ ಪಕ್ಷದ ನಾಯಕರಾಗಿದ್ದಾರೆ. ಮೋದಿ ಜಾರಿಗೊಳಿಸಿದ ಯೋಜನೆಯನ್ನು ಜಿಲ್ಲೆಯಲ್ಲಿ ಸಮರ್ಥವಾಗಿ‌ ಬಳಸುವ‌ ಮೂಲಕ ಫಲಾನುಭವಿಗಳಿಗೆ ಮುಟ್ಟಿಸಿದ್ದಾರೆ. ಕೇಂದ್ರದಲ್ಲಿ ರಮೇಶ್‌ ಜಿಗಜಿಣಗಿ ಬಗ್ಗೆ ಒಳ್ಳೆಯ ಅಭಿಪ್ರಾಯವಿದೆ. ಮತ್ತೊಮ್ಮೆ, ಮಗದೊಮ್ಮೆ ಮೋದಿ ಎನ್ನುವ ಕೂಗು ಎದ್ದಿದೆ. ಈ ಅಲೆ ವಿಜಯಪುರದಲ್ಲೂ ಇದೆ. ಹಾಗಾಗಿ ಈ ಬಾರಿ ಜಿಗಜಿಣಗಿ ಅವರ ಗೆಲವು ಸುಲಲಿತವಾಗಿದೆ ಎಂದರು. ಅಲ್ಲದೆ, ಮತದಾನದ ಅರಿವು ಮೂಡಿದ್ದು ಒಳ್ಳೆಯ ಬೆಳವಣಿಗೆ. ಹೀಗಾಗಿ ಈ ಬಾರಿ ಉತ್ತಮ ಮತದಾನವಾಗಲಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯೆ, ಚಿತ್ರನಟಿ ತಾರಾ ಅನುರಾಧಾ ವ್ಯಾಖ್ಯಾನಿಸಿದರು. ಇನ್ನು, ಮೋದಿ ಸಂಪೂರ್ಣ ಶಕ್ತಿ ಬಳಕೆ ಮಾಡಿಕೊಂಡು ವಿಜಯಪುರದಲ್ಲಿ ಜಿಗಜಿಣಗಿ ಗೆಲುವು ನಿಶ್ಚಿತ. ಅವರ ಗೆಲುವಿನ ಬಗ್ಗೆ ಅನುಮಾನವೇ ಇಲ್ಲ. ಅಲ್ಲದೆ, ಯತ್ನಾಳ ನಮ್ಮ ಜೊತೆಯಲ್ಲಿದ್ದಾರೆ. ಅವರೇ ಮೋದಿಗೆ ಮತ ಚಲಾಯಿಸಿ ಎಂದು ಹೇಳಿದ್ದಾರಲ್ಲ. ಅವರಿಗೆ ಬೇರೆ ಜಿಲ್ಲೆಯ‌ ಜವಾಬ್ದಾರಿ ಇರುವುದರಿಂದ ಇಲ್ಲಿಲ್ಲ. ಆದರೆ ಪಕ್ಷಕ್ಕಾಗಿಯೇ ಅವರು ಕೆಲಸ ಮಾಡುತ್ತಿದ್ದಾರೆ ಎಂದರು.

ಮಹಿಳೆಯರಿಗೆ ಕೇಂದ್ರದಲ್ಲಿ ಅನ್ಯಾಯವಾಗಿಲ್ಲ. 9 ಸಚಿವೆಯರು ಹಾಗು ರಕ್ಷಣಾ ಸಚಿವೆ ಮಾಡಿದ್ದು ಬಿಜೆಪಿ ಮಾತ್ರ ಎಂದರು. ದೇಶದಲ್ಲಿ ಜಿ.ಪಂ ಶೇ.50 ಮೀಸಲು ನೀಡಿದ್ದು ಬಿಜೆಪಿ. ಕಾಂಗ್ರೆಸ್, ಸೇರಿದಂತೆ ಉಳಿದ ಪಕ್ಷಕ್ಕಿಂತ ಬಿಜೆಪಿ ಹೆಚ್ಚು ಅವಕಾಶ ನೀಡಿದೆ. ಮುಂದಿನ ದಿನಗಳಲ್ಲಿ ಲೋಕಸಭಾ, ವಿಧಾನ ಸಭೆಯಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡುವ ಕಾರ್ಯ ಬಿಜೆಪಿ ಮಾಡುತ್ತದೆ ಎಂದು ಹೇಳಿದರು. ರಾಜ್ಯದಲ್ಲಿ ಮತದಾರರಲ್ಲಿ ಮತದಾನ ಜಾಗೃತಿ ಮೂಡಿದೆ. ಈ ಬಾರಿ ಶೇ. 80ಕ್ಕಿಂತಲೂ ಹೆಚ್ಚಿನ ಮತ ಆಗುವ ಸಾಧ್ಯತೆ ಇದೆ. ಮತದಾನ ಜಾಗೃತಿ ಶಾಲಾ, ಕಾಲೇಜು ಮೊದಲಾದ ಕಡೆ ಜಾಗೃತಿ ಮೂಡಿಸಲು ಸ್ವಯಂ ಮುಂದೆ ಬರುತ್ತಿದ್ದಾರೆ. ಇದು ಒಳ್ಳೆಯ ವಿಚಾರವಾಗಿದೆ ಎಂದು ಹೇಳಿದರು. ಜಿಲ್ಲಾಧ್ಯಕ್ಷೆ ಮಲ್ಲಮ್ಮ ಜೋಗೂರ, ಭಾರತಿ ಸೂರ್ಯವಂಶಿ, ಅಶ್ವಿನಿ ಪಟ್ಟಣಶೆಟ್ಟಿ, ರಜನಿ ಸಂಬಣ್ಣಿ, ಸುಮಂಗಲಾ ಕೋಟಿ, ಮಂಜುಳಾ ಅಂಗಡಿ ಮತ್ತಿತರರಿದ್ದರು.

 

About the author

ಕನ್ನಡ ಟುಡೆ

Leave a Comment