ರಾಷ್ಟ್ರ ಸುದ್ದಿ

ವಿಜಯ್‌ ಮಲ್ಯ ಒಬ್ಬರೇ ಅಲ್ಲ, 58 ಆರ್ಥಿಕ ಅಪರಾಧಿಗಳನ್ನು ದೇಶಕ್ಕೆ ಕರೆತರಲು ಕೇಂದ್ರ ಸರಕಾರ ಯತ್ನ

ಹೊಸದಿಲ್ಲಿ: ವಿಜಯ್ ಮಲ್ಯ, ನೀರವ್‌ ಮೋದಿ, ಮೆಹುಲ್ ಚೋಕ್ಸಿ, ನಿತಿನ್‌ ಹಾಗೂ ಚೇತನ್ ಸಂದೇಸಾರಾ, ಲಲಿತ್ ಮೋದಿ ಹಾಗೂ ಯುರೋಪಿಯನ್‌ ಮಧ್ಯವರ್ತಿ ಗಿಡೋ ರಾಲ್ಫ್‌ ಹಶ್ಚೆ ಹಾಗೂ ಕಾರ್ಲೋ ಗೆರೋಸಾ ಸೇರಿ 58 ಆರ್ಥಿಕ ಅಪರಾಧಿಗಳನ್ನು ಕರೆತರಲು ಮನವಿ ಮಾಡಲಾಗಿದೆ. ಈ ಪೈಕಿ ಸರಕಾರ ಹಾಗೂ ಸಿಬಿಐ, ಇಡಿ, ಡಿಆರ್‌ಐನಂತಹ ತನಿಖಾ ದಳಗಳು ಸದ್ಯ 16 ಮಂದಿಯನ್ನು ವಿವಿಧ ದೇಶಗಳಿಂದ ಗಡೀಪಾರು ಮಾಡಲು ಪ್ರಯತ್ನ ನಡೆಸುತ್ತಿದೆ ಎಂದು ಲೋಕಸಭೆಯಲ್ಲಿ ವಿದೇಶಾಂಗ ಸಚಿವಾಲಯ ಬುಧವಾರ ಮಾಹಿತಿ ನೀಡಿದೆ.

ಗೆರೋಸಾ ಗಡೀಪಾರಿಗಾಗಿ ನವೆಂಬರ್ 2017 ಹಾಗೂ ಹಶ್ಚೆ ಗಡೀಪಾರಿಗಾಗಿ ಜನವರಿ 2018ರಂದು ಮನವಿ ಮಾಡಲಾಗಿತ್ತು. ಆದರೆ, ಅದನ್ನು ಇಟಲಿಯನ್ ಅಧಿಕಾರಿಗಳು ವಾಪಸ್ ಕಳಿಸಿದ ಕಾರಣ ಅಕ್ಟೋಬರ್ ತಿಂಗಳಲ್ಲಿ ಮತ್ತೆ ಮನವಿ ಮಾಡಲಾಗಿದೆ. ವಿವಿಐಪಿ ಚಾಪರ್ ಹಗರಣದಲ್ಲಿ ಈಗಾಗಲೇ ಕ್ರಿಶ್ಚಿಯನ್‌ ಮೈಕೆಲ್‌ನನ್ನು ಗಡೀಪಾರು ಮಾಡಲಾಗಿದೆ. ಆದರೆ, ಹಗರಣದ ಕಳಚಿದ ಕೊಂಡಿಗಳನ್ನು ಸೇರಿಸಲು ಗೆರೋಸಾ ಹಾಗೂ ಹಶ್ಚೆ ಪ್ರಮುಖ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಇನ್ನೊಂದೆಡೆ, ನೀರವ್‌ ಮೋದಿ ವಿರುದ್ಧ ಈಗಾಗಲೇ ಇಂಟರ್‌ಪೋಲ್‌ ರೆಡ್‌ ನೋಟಿಸ್‌ ಹೊರಡಿಸಲಾಗಿದೆ. ಅಲ್ಲದೆ, ಯುಕೆಗೆ ಎರಡು ಬಾರಿ ಗಡೀಪಾರಿಗೆ ಮನವಿ ಮಾಡಿಕೊಂಡಿದ್ದು, ವಜ್ರ ಉದ್ಯಮಿ ವಿರುದ್ಧ ಯುಎಇ ಸರಕಾರಕ್ಕೂ ಮನವಿ ಸಲ್ಲಿಸಲಾಗಿದೆ ಎಂದು ವಿದೇಶಾಂಗ ಇಲಾಖೆ ಮನವಿ ಮಾಡಿದೆ. ಅಲ್ಲದೆ, ನೀರವ್ ಸಹೋದರ ನೀಶಲ್‌ ಹಾಗೂ ನಿಕಟ ಸಹಾಯಕ ಸುಭಾಷ್ ಪರಬ್ ಯುಎಇಗೆ ಭೇಟಿ ನೀಡುವ ಸಾಧ್ಯತೆ ಹಿನ್ನೆಲೆ ಅಲ್ಲಿನ ಸರಕಾರಕ್ಕೂ ಗಡೀಪಾರಿಗೆ ಮನವಿ ನೀಡಿದ್ದೇವೆ. ಜತೆಗೆ, ನೀಶಲ್‌ಗೆ ಬೆಲ್ಜಿಯಂ ಸರಕಾರಕ್ಕೂ ಮನವಿ ಮಾಡಿದ್ದು, ಪರಬ್‌ಗೆ ಈಜಿಪ್ಟ್‌ಗೆ ಮನವಿ ಸಲ್ಲಿಸಲಾಗಿದೆ. ಇದೇ ರೀತಿ, ಚೋಕ್ಸಿಯನ್ನು ಗಡೀಪಾರು ಮಾಡಲು ಆಂಟಿಗುವಾಗೆ ಎರಡು ಬಾರಿ ಮನವಿ ಸಲ್ಲಿಸಲಾಗಿದೆ. ಇತ್ತೀಚೆಗೆ ಇಂಟರ್‌ಪೋಲ್‌ ಸಹ ನೋಟಿಸ್ ನೀಡಿದ್ದು, ಈ ಮೂಲಕ ಅಂತಾರಾಷ್ಟ್ರೀಯ ಭ್ರಷ್ಟ ಎಂದು ಗುರುತಿಸಲಾಗಿದೆ. ಐಪಿಎಲ್‌ ಮಾಜಿ ಕಮೀಷನರ್‌ ಲಲಿತ್‌ ಮೋದಿ ವಿಚಾರದಲ್ಲೂ ತನಿಖೆ ನಡೆಯುತ್ತಿದೆ. ಹೀಗೆ ಹಲವು ಆರ್ಥಿಕ ಅಪರಾಧಿಗಳನ್ನು ಹಲವು ರೀತಿಯಲ್ಲಿ ಕರೆತರಲು ಯತ್ನ ನಡೆಯುತ್ತಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಇನ್ನು, ಸ್ಟೆರ್ಲಿಂಗ್ ಬಯೋಟೆಕ್‌ ಕಂಪನಿ ಮೂಲಕ ಬ್ಯಾಂಕ್‌ಗಳಿಗೆ 5 ಸಾವಿರ ಕೋಟಿ ರೂ. ವಂಚಿಸಿರುವ ಚೇತನ್, ನಿತಿನ್ ಹಾಗೂ ದೀಪ್ತಿ ಸಂದೇಸಾರಾ ಕುಟುಂಬ ಹಾಗೂ ಹಿತೇಶ್‌ಕುಮಾರ್‌ ಪಟೇಲ್‌ ವಿರುದ್ಧ ರೆಡ್‌ ಕಾರ್ನರ್ ನೋಟಿಸ್‌ ಕಳಿಸಿವ ಕಾನೂನು ಪ್ರಕ್ರಿಯೆ ನಡೆಯುತ್ತಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ. ಮಾಜಿ ಮದ್ಯ ದೊರೆ ವಿಜಯ್ ಮಲ್ಯ ಗಡೀಪಾರಿಗೆ ಯುಕೆ ಕೋರ್ಟ್ ಈಗಾಗಲೇ ಕಳೆದ ವಾರ ಆದೇಶ ನೀಡಿದೆ. ಇದೆ ರೀತಿ ದೇಶದ ಇತರೆ ಆರೋಪಿಗಳನ್ನು ಲುಕ್‌ ಔಟ್‌ ಸರ್ಕ್ಯುಲರ್‌ಗಳು, ರೆಡ್‌ ಕಾರ್ನರ್ ನೋಟಿಸ್ ಹಾಗೂ ಗಡೀಪಾರಿಗೆ ಮನವಿಗಳನ್ನು ಸಲ್ಲಿಸಿದ್ದೇವೆ ಎಂದು ಕೇಂದ್ರ ರಾಜ್ಯ ಖಾತೆ ಸಚಿವ ಹಾಗೂ ನಿವೃತ್ತ ಜನರಲ್‌ ವಿ.ಕೆ.ಸಿಂಗ್ ಸಂಸತ್ತಿನಲ್ಲಿ ತಿಳಿಸಿದ್ದಾರೆ.

About the author

ಕನ್ನಡ ಟುಡೆ

Leave a Comment