ರಾಜ್ಯ ಸುದ್ದಿ

ವಿಧಾನಸೌಧ ಬಳಿ ಸಿಕ್ಕ ಹಣ ಪ್ರಕರಣ: ಎಸಿಬಿಗೆ ವರ್ಗಾವಣೆ

ಬೆಂಗಳೂರು: ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ.ಪುಟ್ಟರಂಗಶೆಟ್ಟಿ ಕಚೇರಿ ಸಿಬ್ಬಂದಿ ಬಳಿ 25.76 ಲಕ್ಷ ರೂ ನಗದು ಹಣ ಪತ್ತೆಯಾದ ಪ್ರಕರಣವನ್ನು ಹೆಚ್ಚಿನ ತನಿಖೆಗಾಗಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ಗೆ ವರ್ಗಾಯಿಸಲಾಗಿದೆ. ಭದ್ರತಾ ಸಿಬ್ಬಂದಿ ತಪಾಸಣೆ ವೇಳೆ ಪತ್ತೆಯಾಗಿರುವುದು ಲಂಚದ ಹಣ ಇರಬಹುದು ಎನ್ನುವ ಅನುಮಾನದ ಮೇರೆಗೆ ಪ್ರಕರಣದ ತನಿಖೆಯನ್ನು ಎಸಿಬಿಗೆ ವರ್ಗಾಯಿಸಲಾಗಿದೆ.

ಸಚಿವರ ಕಚೇರಿಯಲ್ಲಿ ಟೈಪಿಸ್ಟ್‌ ಆಗಿದ್ದ ಮೋಹನ್‌ ಅವರ ಬಳಿ ಜ.4 ರಂದು ಹಣ ಪತ್ತೆಯಾಗಿತ್ತು. ಸೋಮವಾರ ಬೆಳಗ್ಗೆಯೂ ವಿಧಾನಸೌಧ ಠಾಣೆಗೆ ಆಗಮಿಸಿದ್ದ ಮೋಹನ್‌ ಹಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಕೇಳಿದ್ದ ಕೆಲವು ದಾಖಲೆಗಳನ್ನು ಒದಗಿಸಿದ್ದಾನೆ ಎಂದು ತಿಳಿದು ಬಂದಿದೆ. ಇದುವರೆಗಿನ ತನಿಖೆಯಲ್ಲಿ ಅಷ್ಟೂ ಹಣ ತನಗೇ ಸೇರಿದ್ದು ಎಂದೇ ವಿಚಾರಣೆಯಲ್ಲಿ ಆರೋಪಿ ಮೋಹನ್‌ ಹೇಳಿಕೆ ನೀಡಿದ್ದಾನೆ. ಆದರೆ, ಇಲಾಖೆಯ ಕೆಲವು ಯೋಜನೆಗಳ ಗುತ್ತಿಗೆ ಪಡೆಯುವ ಸಂಬಂಧ ಗುತ್ತಿಗೆದಾರರೇ ನೀಡಿರುವ ಹಣ ಎನ್ನುವ ಅನುಮಾನ ಇದೆ. ಈ ಬಗ್ಗೆ ಎಸಿಬಿ ತನಿಖೆ ಮುಂದುವರೆಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

About the author

ಕನ್ನಡ ಟುಡೆ

Leave a Comment