ಸಿನಿ ಸಮಾಚಾರ

ವಿಲನ್‌ ಸಿನಿಮಾಕ್ಕೆ ಬೇಕಿದ್ದರೆ ಕತ್ತರಿ ಹಾಕಲಿ: ಕಿಚ್ಚ ಸುದೀಪ್‌

ಬೆಂಗಳೂರು/ಹರಿಹರ: ಗುರುವಾರ ತೆರೆಕಂಡ “ದಿ ವಿಲನ್‌’ ಚಿತ್ರದಲ್ಲಿ ನಾನು ಶಿವಣ್ಣನವರಿಗೆ ಹೊಡೆದು ಅವಮಾನಿಸಿರುವುದಾಗಿ ಶಿವಣ್ಣ ಆಭಿಮಾನಿಗಳು ತಪ್ಪು ಭಾವಿಸಿದ್ದಾರೆ. ಚಿತ್ರದಲ್ಲಿ ಅಂತಹ ಸನ್ನಿವೇಶವಿದ್ದು, ಅದಕ್ಕೆ ತಕ್ಕಂತೆ ಶಿವಣ್ಣ ಮತ್ತು ನಾನು ಅಭಿನಯಿಸಿದ್ದೇವೆ. ಚಿತ್ರದ ಸನ್ನಿವೇಶಗಳಲ್ಲಿ ಯಾರು ಯಾರನ್ನೇ ಹೊಡೆದರೂ ಅಭಿಮಾನಿಗಳು ತಪ್ಪು ತಿಳಿದುಕೊಳ್ಳಬಾರದು ಎಂದು ಚಿತ್ರನಟ ಕಿಚ್ಚ ಸುದೀಪ್‌ ಹೇಳಿದರು.

ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಗುರುಪೀಠಕ್ಕೆ ಶುಕ್ರವಾರ ಭೇಟಿ ನೀಡಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಚಿತ್ರರಂಗದಲ್ಲಿ ಕಳೆದ ಮೂವತ್ತೆçದು ವರ್ಷಗಳಿಂದ ಇರುವ ಶಿವಣ್ಣನವರು ಸಿನಿಮಾ, ಚಿತ್ರಕಥೆ ಎಲ್ಲವನ್ನು ಪರಿಶೀಲಿಸಿ ಚಿತ್ರದಲ್ಲಿ ನಟಿಸಿದ್ದಾರೆ. ನಾನೂ ಸಹ ಚಿತ್ರದ ಸನ್ನಿವೇಶಕ್ಕೆ ತಕ್ಕಂತೆ ಅಭಿನಯಿಸಿದ್ದೇನೆ.ಇದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ. ಶಿವಣ್ಣ ಅಭಿಮಾನಿಗಳಿಗೆ ಬೇಸರವಾಗಿದ್ದರೆ ನಿರ್ದೇಶಕರ ಬಳಿ ಶಿವಣ್ಣನವರು ಮಾತನಾಡಿ ಆ ದೃಶ್ಯವನ್ನು ಚಿತ್ರದಿಂದ ತೆಗೆಸಲಿ ಎಂದರು.

ಮದಕರಿ ನಾಯಕರ ಬಗ್ಗೆ ಸಿನಿಮಾ ಮಾಡೋದು ಪಕ್ಕಾ: “ಗಂಡುಗಲಿ ವೀರ ಮದಕರಿ ನಾಯಕ’ ಸಿನಿಮಾದಲ್ಲಿ ನಟ ದರ್ಶನ್‌, ಮದಕರಿ ಪಾತ್ರ ಮಾಡುತ್ತಿರುವುದನ್ನು ಕಲಾವಿದನಾಗಿ ನಾನು ಸ್ವಾಗತಿಸುತ್ತೇನೆ.ನಾನು ಕೂಡ ಮದಕರಿ ನಾಯಕರ ಕುರಿತು ಸಿನಿಮಾ ಮಾಡುತ್ತೇನೆ. ನಮ್ಮ ಸಿನಿಮಾದ ಚಿತ್ರೀಕರಣ ಮಾರ್ಚ್‌ ಅಥವಾ ಏಪ್ರಿಲ್‌ ತಿಂಗಳಲ್ಲಿ ಪ್ರಾರಂಭವಾಗಲಿದೆ ಎಂದರು. ಇದೇ ವೇಳೆ, ಪ್ರಸನ್ನಾನಂದ ಶ್ರೀಗಳಿಗೆ ಸುದೀಪ್‌ ಮದಕರಿ ನಾಯಕರ ಭಾವಚಿತ್ರ ನೀಡಿ ಸತ್ಕರಿಸಿದರು.

ನರ್ತಕಿ ಎದುರು ಪ್ರತಿಭಟನೆ: ಈ ಮಧ್ಯೆ, ಶಿವರಾಜಕುಮಾರ್‌ ಮತ್ತು ಸುದೀಪ್‌ ಅಭಿನಯದ “ದಿ ವಿಲನ್‌’ ಚಿತ್ರ ಬಿಡುಗಡೆಯಾದ ಎಲ್ಲಾ ಕೇಂದ್ರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದ್ದು, ಮೊದಲ ದಿನವೇ ಸುಮಾರು 20 ಕೋಟಿ ರೂ.ಗಳಿಸಿದೆ. ಇದೊಂದು ದಾಖಲೆ ಎಂದು ವಿತರಕ ಜಾಕ್‌ ಮಂಜು ತಿಳಿಸಿದ್ದಾರೆ.

ಶಿವಮೊಗ್ಗದಲ್ಲಿ ಚಿತ್ರಮಂದಿರದ ಎದುರು ಅಭಿಮಾನಿಗಳು ಕುರಿ ಕಡಿದು, ಪೋಸ್ಟರ್‌ಗಳಿಗೆ ಸಮರ್ಪಣೆ ಮಾಡಿದರು. ಇದರ ನಡುವೆಯೇ, ಚಿತ್ರದಲ್ಲಿ ಶಿವರಾಜಕುಮಾರ್‌ ಅವರ ಪಾತ್ರಕ್ಕೆ ನಿರೀಕ್ಷಿತ ಮಟ್ಟದಲ್ಲಿ ನಿರ್ದೇಶಕ ಪ್ರೇಮ್‌ ಅವರು ಪ್ರಾಮುಖ್ಯತೆ ನೀಡಿಲ್ಲ, ಅವರ ಪಾತ್ರಕ್ಕೆ ಆದ್ಯತೆ ನೀಡದೆ ಅವರನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ,ಶಿವರಾಜಕುಮಾರ್‌ ಅಭಿಮಾನಿಗಳು ಬೆಂಗಳೂರಿನ “ನರ್ತಕಿ’ ಚಿತ್ರಮಂದಿರದ ಎದುರು ಪ್ರತಿಭಟನೆ ನಡೆಸಿದರು. ನಿರ್ದೇಶಕ ಪ್ರೇಮ್‌ ವಿರುದ್ದ ಧಿಕ್ಕಾರ ಕೂಗಿದರು. ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಈ ನಡುವೆ,ಪ್ರೇಮ್‌ ಕೂಡಲೇ ಕ್ಷಮೆಯಾಚಿಸಬೇಕು.
ಇಲ್ಲವಾದಲ್ಲಿ, ಶನಿವಾರ ನಿರ್ದೇಶಕ ಪ್ರೇಮ್‌ ಅವರ ಮನೆ ಮುಂದೆ ಪ್ರತಿಭಟಿಸುವುದಾಗಿ ಅಭಿಮಾನಿಗಳು ಎಚ್ಚರಿಸಿದ್ದಾರೆ.

 

About the author

ಕನ್ನಡ ಟುಡೆ

Leave a Comment