ರಾಷ್ಟ್ರ ಸುದ್ದಿ

ಬಹುಕೋಟಿ ವಿವಿಐಪಿ ಚಾಪರ್ ಹಗರಣ: ಮತ್ತಿಬ್ಬರು ಆರೋಪಿಗಳು ದುಬೈನಿಂದ ಭಾರತಕ್ಕೆ ಗಡಿಪಾರು

ದುಬೈ: ಬಹುಕೋಟಿ ವಿವಿಐಪಿ ಚಾಪರ್ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರು ಆರೋಪಿಗಳನ್ನು ಯುಎಇ ಸರ್ಕಾರ ಭಾರತಕ್ಕೆ ಗಡಿಪಾರು ಮಾಡಿದೆ. ಮೂಲಗಳ ಪ್ರಕಾರ ಅಗಸ್ಟಾ ವೆಸ್ಟ್ ಲ್ಯಾಂಡ್​ ಹಗರಣದ ಮಧ್ಯವರ್ತಿ, ಆರೋಪಿ ಕ್ರಿಶ್ಚಿಯನ್​ ಮಿಶೆಲ್ ​ನನ್ನು ದುಬೈನಿಂದ ಗಡೀಪಾರು ಮಾಡಿದ ಸುಮಾರು ಎರಡು ತಿಂಗಳ ಬಳಿಕ ಬುಧವಾರ ಮತ್ತಿಬ್ಬರು ಆರೋಪಿಗಳನ್ನು ಯುಎಇದಿಂದ ಭಾರತಕ್ಕೆ ಕರೆತರಲಾಗಿದೆ. ಹಗರಣದ ಪ್ರಮುಖ ಆರೋಪಿಗಳು ಎನ್ನಲಾದ ದುಬೈ ಮೂಲದ ಅಕೌಂಟೆಂಟ್​ ರಾಜೀವ್​ ಸಕ್ಸೇನಾ ಹಾಗೂ ದೀಪಕ್​ ತಲ್ವಾರ್​ ಅವರನ್ನು ಯುಎಇ ಭಾರತಕ್ಕೆ ಹಸ್ತಾಂತರಿಸಿದ್ದು ಅವರನ್ನು ವಿಶೇಷ ವಿಮಾನದ ಮೂಲಕ ಜಾರಿನಿರ್ದೇಶನಾಲಯದ ಅಧಿಕಾರಿಗಳು, ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ಹಾಗೂ ರಿಸರ್ಚ್​ ಆ್ಯಂಡ್ ಅನಲಿಸಿಸ್​ ದಳದ ಅಧಿಕಾರಿಗಳು ಕರೆದುಕೊಂಡು ಬಂದಿದ್ದಾರೆ ಎಂದು ತಿಳಿದುಬಂದಿದೆ. ದುಬೈನಲ್ಲಿ ವಾಸವಾಗಿದ್ದ ಅಕೌಂಟೆಂಟ್ ರಾಜೀವ್ ಗೆ ಅಗಸ್ಟಾ ವೆಸ್ಟ್ ಲ್ಯಾಂಡ್​ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಾರಿ ನಿರ್ದೇಶನಾಲಯ ಹಲವು ಬಾರಿ ಅವರಿಗೆ ಸಮನ್ಸ್​ ನೀಡಿತ್ತು. ಆದರೆ ಅವರು ತನಿಖೆಗೆ ಸಹಕರಿಸಿರಲಿಲ್ಲ. ಈಗ ರಾಜೀವ್​ ಸಕ್ಸೇನಾ ವಿರುದ್ಧ ಜಾಮೀನು ರಹಿತ ವಾರಂಟ್​ ಜಾರಿ ಮಾಡಿದ್ದು ಬುಧವಾರ ದುಬೈನಿಂದ ಕರೆದುಕೊಂಡು ಬರಲಾಗಿದೆ.
ರಾಜೀವ್​ ಸಕ್ಸೇನಾ ಹಾಗೂ ಅವರ ಪತ್ನಿ ಶಿವಾನಿ ಸಕ್ಸೇನಾ ಮತ್ತು ಅವರ ದುಬೈ ಮೂಲದ ಸಂಸ್ಥೆ ಶೇರುಗಳ ವಿಚಾರದಲ್ಲಿ ಅಕ್ರಮ ನಡೆಸಿದ್ದು ಶಿವಾನಿ ಸಕ್ಸೇನಾ ಅವರನ್ನು 2017ರಲ್ಲಿ ಚೆನ್ನೈ ಏರ್ ಪೋರ್ಟ್​ನಲ್ಲಿ ಬಂಧಿಸಲಾಗಿತ್ತು. ಸದ್ಯ ಅವರು ಜಾಮೀನು ತೆಗೆದುಕೊಂಡು ಬಿಡುಗಡೆಯಾಗಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಇನ್ನು ಯುಪಿಎ ಆಡಳಿತವಿದ್ದಾಗ ದೀಪಕ್​ ತಲ್ವಾರ್​ ಅವರ ಆದಾಯ 1000ಕೋಟಿ ರೂಪಾಯಿ ಆಗಿತ್ತು. ಅದನ್ನು ಅವರು ಮರೆಮಾಚಿದ್ದರು. ಈ ಬಗ್ಗೆ ಕೆಲವು ತನಿಖಾ ದಳಗಳು ಪರಿಶೀಲನೆಗೆ ಪ್ರಾರಂಭಿಸಿದಾಗ ಅವರು ದುಬೈಗೆ ಪಲಾಯನ ಮಾಡಿದ್ದರು ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

About the author

ಕನ್ನಡ ಟುಡೆ

Leave a Comment