ರಾಜ್ಯ ಸುದ್ದಿ

ವಿಶ್ವದಾಖಲೆ ಬರೆದ ಹಚ್ಚೇವು ಕನ್ನಡದ ದೀಪ

ಬೆಂಗಳೂರು: ಬೃಹತ್‌ ಮೈದಾನದ ಒಂದು ಭಾಗದಲ್ಲಿ ಗಾಯಕರು, ಮತ್ತೊಂದು ಭಾಗದಲ್ಲಿ ನೃತ್ಯ ಕಲಾವಿದರು, ಇನ್ನೊಂದು ಭಾಗದಲ್ಲಿ ಡ್ರಾಯಿಂಗ್‌ ಮತ್ತು ಪೆನ್ಸಿಲ್‌ ಸ್ಕೆಚಿಂಗ್‌ ಕಲಾವಿದರು. ಬರೋಬ್ಬರಿ 530 ಮಂದಿ ಒಂದೇ ವೇದಿಕೆಯಲ್ಲಿ ‘ಹಚ್ಚೇವು ಕನ್ನಡದ ದೀಪ’ದ ಹಾಡು, ನೃತ್ಯ ಮತ್ತು ಚಿತ್ರಕಲೆಗಳನ್ನು ಪ್ರದರ್ಶಿಸುವ ಮೂಲಕ ವಿಶ್ವದಾಖಲೆ ದಾಖಲೆ ನಿರ್ಮಿಸಿದರು.

ಗಾಯಕರ ಗುಂಪೊಂದು ‘ಹಚ್ಚೇವು ಕನ್ನಡದ ದೀಪ’ ಗೀತೆಯನ್ನು ಸುಮಧುರವಾಗಿ ಹಾಡುತ್ತಿದ್ದರು. ನೃತ್ಯ ತಂಡವು ಈ ಹಾಡಿಗೆ ತಕ್ಕಂತೆ ನೃತ್ಯ ಮಾಡುತ್ತಿದ್ದರೆ, ಅತ್ತ ಚಿತ್ರಕಲಾವಿದರು ಪೆನ್ಸಿಲ್‌ ಮತ್ತು ಡ್ರಾಯಿಂಗ್‌ನೊಂದಿಗೆ ಕನ್ನಡ ಭವನೇಶ್ವರಿಯ ಚಿತ್ರ ಬಿಡಿಸುವ ಮೂಲಕ ಆಯಾ ತಂಡ ತಮ್ಮ ತಮ್ಮ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿತು.

ನವ ಬೆಂಗಳೂರು ಕ್ಲಬ್‌ ಮತ್ತು ವರ್ಲ್ಡ್‌ ಕೌನ್ಸಿಲ್‌ ಆಫ್‌ ಕನ್ನಡ ಸಹಯೋಗದೊಂದಿಗೆ ಕಲಾ ಸಂಭ್ರಮ ಕಾರ್ಯಕ್ರಮದ ಅಂಗವಾಗಿ ಜೋಗುಪಾಳ್ಯದ ಕಾರ್ಪೊರೇಷನ್‌ ಬಾಲಕರ ಹೈಸ್ಕೂಲ್‌ ಮೈದಾನದಲ್ಲಿ ವಿಶ್ವದಾಖಲೆಗಾಗಿ ಈ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸಂಜೆ 5.15ಕ್ಕೆ ಆರಂಭವಾದ ಕಲಾ ಸಂಭ್ರಮವು 5.45ರವರೆಗೆ ನಡೆಯಿತಾದರೂ. ಐದುಕಾಲು ನಿಮಿಷದವರೆಗೆ ‘ಹಚ್ಚೇವು ಕನ್ನಡದ ದೀಪ’ ಗಾಯನ ನಡೆಯಿತು.

”ಕಾರ್ಯಕ್ರಮಕ್ಕೆ ರಾಜ್ಯದ ಎಲ್ಲಾ ಭಾಗಗಳಿಂದ ಕಲಾವಿದರು ಆಗಮಿಸಿದ್ದರು. 4 ವರ್ಷದಿಂದ 70 ವರ್ಷದವರೆಗಿನವರು ಈ ವಿಶ್ವದಾಖಲೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕನ್ನಡ ಮತ್ತು ಸಂಸ್ಕೃತಿಯನ್ನು ಬಿಂಬಿಸುವುದು ಈ ದಾಖಲೆಯ ಉದ್ದೇಶ. ‘ಹಚ್ಚೇವು ಕನ್ನಡದ ದೀಪ’ ಕಾರ್ಯಕ್ರಮಕ್ಕೆ ಲಂಡನ್‌ನಿಂದ ಒಂದು ವಾರದಲ್ಲಿ ಅಧಿಕೃತ ಘೋಷಣೆ ಹೊರಬೀಳಲಿದೆ. ನಂತರ ಭಾಗವಹಿಸಿದ್ದ ಎಲ್ಲಾ ಕಲಾವಿದರಿಗೂ ಪ್ರಮಾಣ ಪತ್ರಗಳನ್ನು ವಿತರಿಸಿ, ಪ್ರೋತ್ಸಾಹಿಸಲಾಗುವುದು,” ಎಂದು ‘ವರ್ಲ್ಡ್‌ ಕೌನ್ಸಿಲ್‌ ಆಫ್‌ ಕನ್ನಡ’ ಸಂಘಟನೆಯ ಕಾರ್ಯದರ್ಶಿ ಡಾ. ಗಿರಿಶ್‌ ಕುಮಾರ್‌ ತಿಳಿಸಿದರು.

About the author

ಕನ್ನಡ ಟುಡೆ

Leave a Comment