ಅಹಮದಾಬಾದ್: ವಿಶ್ವದಲ್ಲೇ ಅತಿ ಎತ್ತರದ್ದು ಎಂಬ ಖ್ಯಾತಿ ಪಡೆದ 182 ಮೀಟರ್ ಎತ್ತರದ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ‘ಏಕತೆಯ ಪ್ರತಿಮೆ’ಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಲೋಕಾರ್ಪಣೆಗೊಳಿಸಿದರು.
ಪ್ರತಿಮೆಗೆ ಕುಂಭಾಭಿಷೇಕ:
ಪ್ರಧಾನಿ ಮೋದಿ ಹಾಗೂ ಇತರ ಗಣ್ಯರು ಪ್ರತಿಮೆಗೆ ಕುಂಭಾಭಿಷೇಕ ಮಾಡುವ ಮೂಲಕ ಅದನ್ನು ಲೋಕಾರ್ಪಣೆ ಮಾಡಿದರು. ಇದಕ್ಕೆ ಮೊದಲು ಸಾಂಕೇತಿಕವಾಗಿ ಮಣ್ಣು ಹಾಗೂ ನರ್ಮದಾ ನದಿ ನೀರನ್ನು ಮೋದಿ ಅವರು ಕಲಶಕ್ಕೆ ಅರ್ಪಿಸಿದರು. ಬಳಿಕ ಲಿವರ್ ಒತ್ತುವ ಮೂಲಕ ಪ್ರತಿಮೆಯ ಮೇಲೆ ಅಭಿಷೇಕಕ್ಕೆ ಚಾಲನೆ ನೀಡಿದರು. ಬಳಿಕ ಪ್ರತಿಮೆಯ ಪೀಠದ ಬಳಿಗೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಆಗಸದಲ್ಲಿ ತಿರಂಗಾ ಚಿತ್ತಾರ: ಪ್ರತಿಮೆ ಅನಾವರಣ ವೇಳೆ ವಾಯುಪಡೆಯ ಎರಡು ವಿಮಾನಗಳು ಪ್ರತಿಮೆಯ ಮೇಲೆ ಹಾರಾಟ ನಡೆಸುವ ಬಣ್ಣಗಳ ಮೂಲಕ ಆಗಸದಲ್ಲಿ ತಿರಂಗಾದ ಚಿತ್ತಾರ ಮೂಡಿಸಿದವು. ಜತೆಗೆ ವಿಮಾನಗಳ ಮೂಲಕ ಪುಷ್ಪಾರ್ಚನೆಯೂ ನೆರವೇರಿತು.
* ಭಾರತದ ಇತಿಹಾಸದಲ್ಲೇ ನೆನಪಿಡಬೇಕಾದ ದಿನವಿದು. ಯಾವೊಬ್ಬ ಭಾರತೀಯನೂ ಈ ದಿನವನ್ನು ಮರೆಯಲಾರ: ಪ್ರಧಾನಿ ಮೋದಿ
* ಸರ್ದಾರ್ ಪಟೇಲರ ದೂರದೃಷ್ಟಿಯ ಕೊಡುಗೆ ಇಲ್ಲದಿದ್ದರೆ ಇಂದು ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ನೇರ ರೈಲು ಸಂಪರ್ಕ ಸಾಧ್ಯವಾಗುತ್ತಿರಲಿಲ್ಲ: ಪ್ರಧಾನಿ ಮೋದಿ
* ಏಕತೆಯ ಪ್ರತಿಮೆಯ ನಿರ್ಮಾಣಕ್ಕಾಗಿ ದೇಶದ ಎಲ್ಲೆಡೆಯಿಂದ ಲಕ್ಷಾಂತರ ರೈತರು ಇಲ್ಲಿಗೆ ಬಂದು ಒಗ್ಗೂಡಿದರು. ತಮ್ಮ ಉಪಕರಣಗಳನ್ನು ನೀಡಿದರು. ತಮ್ಮ ಮಣ್ಣಿನ ಪಾಲನ್ನೂ ನೀಡಿದರು. ಹೀಗೆ ಒಂದು ಬೃಹತ್ ಆಂದೋಲನವನ್ನು ಜಾರಿಗೊಳಿಸಲಾಯಿತು: ಪ್ರಧಾನಿ ಮೋದಿ.
* ನಾನು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಈ ಪ್ರತಿಮೆಯ ಸ್ಥಾಪನೆಯ ಕನಸು ಕಂಡಿದ್ದೆ. ಅದು ಈಗ ಸಾಕಾರವಾಗಿದೆ: ಪ್ರಧಾನಿ ಮೋದಿ.