ದೇಶ ವಿದೇಶ ರಾಷ್ಟ್ರ

ವಿಶ್ವ ದಾಖಲೆ ಬರೆದ ಇಸ್ರೋ.

ಬಾಹ್ಯಾಕಾಶ ಕ್ಷೇತ್ರದಲ್ಲಿ ಜಾಗತಿಕವಾಗಿ ತನ್ನದೇ ಹೆಗ್ಗುರುತು ಮೂಡಿಸಿರುವ ಭಾರತದ ಹೆಮ್ಮೆಯ ಇಸ್ರೋ ಬುಧವಾರ, ಒಂದೇ ಉಡಾಹಕದ ಮೂಲಕ 104 ಉಪಗ್ರಹಗಳನ್ನು ವಿವಿಧ ಕಕ್ಷೆಗೆ ಸೇರಿಸಿ ವಿಶ್ವದಾಖಲೆ ಬರೆದಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಉಡಾವಣಾ ನೆಲೆಯಿಂದ ಬೆಳಗ್ಗೆ 9.28ಕ್ಕೆ ನಭಕ್ಕೆ ಚಿಮ್ಮಿದ ಪಿಎಸ್​ಎಲ್​ವಿ -ಸಿ37 ಉಡಾಹಕ, ನಿಗದಿತ ಅವಧಿಯಲ್ಲಿ ಎಲ್ಲ ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವಲ್ಲಿ ಯಶಸ್ವಿಯಾಯಿತು. ಈ ಮೂಲಕ 100ಕ್ಕೂ ಅಧಿಕ ಉಪಗ್ರಹಗಳನ್ನು ಒಂದೇ ಉಡಾಹಕದಲ್ಲಿ ಬಾಹ್ಯಾಕಾಶಕ್ಕೆ ಕಳಿಸಿದ ವಿಶ್ವದ ಏಕೈಕ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಈ ಮೂಲಕ, 2014ರಲ್ಲಿ ಏಕಕಾಲದಲ್ಲಿ 37 ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಕಳಿಸಿ ರಷ್ಯಾ ಸ್ಥಾಪಿಸಿದ್ದ ದಾಖಲೆ ಅಳಿಸಿದಂತಾಗಿದೆ.

ಶತ್ರುಗಳ ಮೇಲೆ ಹೈಟೆಕ್ ಕಣ್ಣು

ಈ ಉಡಾವಣೆಯಲ್ಲಿ ಭಾರತದ ಮೂರು ಉಪಗ್ರಹಗಳಿದ್ದು, ಇದರಿಂದ ದೇಶದ ಭದ್ರತಾ ವ್ಯವಸ್ಥೆ ಬಲಗೊಳಿಸಲು ಸಹಕಾರಿ ಯಾಗಲಿದೆ. ಭೂ ಸರ್ವೆಕ್ಷಣಾ ಉಪಗ್ರಹ ಮೂಲಕ ಶತ್ರುಪಡೆಯ ಸೇನಾನೆಲೆ ಹಾಗೂ ಅಲ್ಲಿನ ಚಟುವಟಿಕೆಗಳ ಮೇಲೆ ಭಾರತ ಕಣ್ಣಿಡಬಹುದಾಗಿದೆ. ಗಡಿಯಲ್ಲಿ ಪಾಕಿಸ್ತಾನ, ಚೀನಾ ಸೈನಿಕರ ಉಪಟಳ ನಿಯಂತ್ರಣಕ್ಕೂ ಇದರಿಂದ ಸಹಾಯ ವಾಗಲಿದೆ.

ಸ್ಮಾರ್ಟ್​ಸಿಟಿ ಮತ್ತಿತರ ಮಹತ್ವದ ಯೋಜನೆಗಳ ನಿರ್ವಹಣೆ ಯಲ್ಲೂ ಈ ಉಪಗ್ರಹಗಳು ಮಹತ್ವದ ಪಾತ್ರ ವಹಿಸಲಿವೆ.

 

180 ವಿದೇಶಿ ಉಪಗ್ರಹ

1999ರ ನಂತರ ಇಸ್ರೋ 180 ವಿದೇಶಿ ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದೆ. ಅಮೆರಿಕದ 114, ಕೆನಡಾದ 11, ಜರ್ಮನಿಯ 10, ಸಿಂಗಾ ಪುರದ 8, ಬ್ರಿಟನ್​ನ 6, ಅಲ್ಜೀರಿಯಾದ 4 ಸೆಟಲೈಟ್​ಗಳನ್ನು ಉಡಾವಣೆ ಮಾಡಿದೆ. ಇಂಡೋನೇಷ್ಯಾ, ಜಪಾನ್, ಸ್ವಿಜರ್ಲೆಂಡ್​ನ ತಲಾ 3, ಇಸ್ರೇಲ್, ನೆದರ್ಲೆಂಡ್, ಡೆನ್ಮಾರ್ಕ್, ಫ್ರಾನ್ಸ್, ಆಸ್ಟ್ರಿಯಾದ ತಲಾ 2, ಕೊರಿಯಾ, ಬೆಲ್ಜಿಯಂ, ಅರ್ಜೆಂಟೀನಾ, ಇಟಲಿ, ಟರ್ಕಿ, ಲಕ್ಸೆಂಬರ್ಗ್, ಯುಎಇ ಮತ್ತು ಕಜಕಿಸ್ತಾನದ ತಲಾ 1 ಉಪಗ್ರಹ ಉಡಾವಣೆ ಮಾಡಲಾಗಿದೆ.

ಪ್ರಧಾನಿ ಅಭಿನಂದನೆ

ಇಸ್ರೋದ ಮತ್ತೊಂದು ಮಹತ್ವದ ಹೆಜ್ಜೆ ನಮ್ಮ ದೇಶಕ್ಕೆ ಹೆಮ್ಮೆ ವಿಚಾರ. ವಿಜ್ಞಾನಿಗಳಿಗೆ ದೇಶಕ್ಕೆ ದೇಶವೇ ಸೆಲ್ಯೂಟ್ ಮಾಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ ಅಭಿನಂದಿಸಿದ್ದಾರೆ.

ಇಸ್ರೋ ಹಿರಿಮೆಗೆ ಮತ್ತೊಂದು ಗರಿ

104 ಉಪಗ್ರಹಗಳನ್ನು ಒಂದೇ ರಾಕೆಟ್ ಮೂಲಕ ಉಡಾವಣೆ ಮಾಡಿ ಇಸ್ರೋ ಮತ್ತೊಂದು ಮೈಲಿಗಲ್ಲು ನಿರ್ವಿುಸಿದೆ. 3 ದೇಶೀಯ ಮತ್ತು 101 ವಿದೇಶಿ ಉಪಗ್ರಹಗಳನ್ನು ಉಡಾವಣೆ ಮಾಡಿದ್ದು, ಇದರ ವಿಶೇಷತೆಗಳು, ಸೃಷ್ಟಿಯಾದ ದಾಖಲೆ ಮುಂತಾದವುಗಳ ವಿವರ ಇಲ್ಲಿದೆ.

ಶ್ರೀಹರಿಕೋಟಾ: ಒಂದೇ ಬಾರಿ 104 ಉಪಗ್ರಹಗಳ ಉಡಾವಣೆ ಮಾಡುವ ಮೂಲಕ ಇಸ್ರೋ ಹೊಸ ಇತಿಹಾಸ ಸೃಷ್ಟಿಸಿದೆ. ಬುಧವಾರ ಬೆಳಗ್ಗೆ 9.28ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಉಡ್ಡಯನ ಕೇಂದ್ರದಿಂದ ಪೋಲಾರ್ ಸೆಟಲೈಟ್ ಲಾಂಚ್ ವೆಹಿಕಲ್ ಪಿಎಸ್​ಎಲ್​ವಿ-ಸಿ37ನಲ್ಲಿ ರಾಕೆಟ್​ಗಳನ್ನು ನಭಕ್ಕೆ ಕಳುಹಿಸಲಾಗಿದೆ. ಮೊದಲ ಹಂತದಲ್ಲಿ ಕಾಟೋಸ್ಯಾಟ್-2 ಸೆಟಲೈಟ್ ಅನ್ನು ಕಕ್ಷೆಗೆ ತಲುಪಿಸಲಾಯಿತು. ನಂತರ ಭಾರತದ ಎರಡು ನ್ಯಾನೋ ಉಪಗ್ರಹಗಳು ಮತ್ತು ಕೊನೆಯ ಹಂತದಲ್ಲಿ ಉಳಿದ ಉಪಗ್ರಹ ಉಡಾವಣೆ ಮಾಡಲಾಯಿತು. ಇವೆಲ್ಲವೂ 30 ನಿಮಿಷಗಳ ಅಂತರದಲ್ಲಿ ನಡೆದಿದ್ದು, ಉಪಗ್ರಹಗಳು ಸೆಕೆಂಡಿಗೆ 7.5 ಕಿಲೋಮೀಟರ್​ಗಿಂತಲೂ ಹೆಚ್ಚಿನ ವೇಗದಲ್ಲಿ ಚಲಿಸಿ ಕಕ್ಷೆ ತಲುಪಿವೆ ಎಂದು ಇಸ್ರೋ ತಿಳಿಸಿದೆ. ಈ ಮೂಲಕ 28 ಗಂಟೆಗಳ ಕೌಂಟ್​ಡೌನ್ ಯಶಸ್ಸಿನೊಂದಿಗೆ ಅಂತ್ಯಗೊಂಡಿದೆ.

ದಾಖಲೆ ಪುಟ ಸೇರಿದ ಇಸ್ರೋ: 104 ಉಪಗ್ರಹಗಳನ್ನು ಏಕಕಾಲಕ್ಕೆ ಉಡಾವಣೆ ಮಾಡುವ ಮೂಲಕ ಅತಿ ಹೆಚ್ಚು ಸೆಟಲೈಟ್ ಉಡಾವಣೆ ಮಾಡಿದ ಕೀರ್ತಿಗೆ ಇಸ್ರೋ ಭಾಜನವಾಗಿದೆ. ಸದ್ಯ ಈ ಹೆಗ್ಗಳಿಕೆ ರಷ್ಯಾ ಪಾಲಿಗಿತ್ತು. 2014ರಲ್ಲಿ ರಷ್ಯಾ ಒಂದೇ ರಾಕೆಟ್ ಮೂಲಕ 37 ಉಪಗ್ರಹಗಳ ಉಡಾವಣೆ ಮಾಡಿತ್ತು. ಎರಡನೇ ಸ್ಥಾನದಲ್ಲಿ ಅಮೆರಿಕದ ನಾಸಾ ಇತ್ತು ಅದು 29 ಉಪಗ್ರಹಗಳ ಉಡಾವಣೆ ಮಾಡಿತ್ತು. 2015ರ ಜೂನ್​ನಲ್ಲಿ ಇಸ್ರೋ ಒಂದೇ ರಾಕೆಟ್ ಮೂಲಕ 20 ಉಪಗ್ರಹ ಉಡಾವಣೆ ಮಾಡಿ ಇಲ್ಲಿಯವರೆಗೂ ಮೂರನೇ ಸ್ಥಾನದಲ್ಲಿತ್ತು.

ಪಿಎಸ್​ಎಲ್​ವಿ ವಿಶೇಷತೆಗಳು: 39ನೇ ಉಡಾವಣೆಯೊಂದಿಗೆ ಪಿಎಸ್​ಎಲ್​ವಿ ವಿಶ್ವದ ಬಲಿಷ್ಠ ಸೆಟಲೈಟ್ ಲಾಂಚ್ ವೆಹಿಕಲ್​ಗಳಲ್ಲಿ ಒಂದೆಂದು ಗುರುತಿಸಿಕೊಂಡಿದೆ. 1993ರಿಂದ ಇಲ್ಲಿಯವರೆಗೆ ಪಿಎಸ್​ಎಲ್​ವಿ ಮೂಲಕ ಹಲವು ಭಾರತೀಯ ಮತ್ತು 180 ವಿದೇಶಿ ಸೆಟಲೈಟ್​ಗಳನ್ನು ನಭಕ್ಕೆ ಕಳುಹಿಸಲಾಗಿದೆ. ಸದ್ಯ 104 ಸೆಟಲೈಟ್ ಲಾಂಚ್ ಮಾಡುವುದಕ್ಕಾಗಿ ಪಿಎಸ್​ಎಲ್​ವಿಯ ನೂತನ ಎಕ್ಸ್​ಎಲ್ ವರ್ಷನ್ ಅನ್ನು ಬಳಸಿಕೊಳ್ಳಲಾಗಿತ್ತು. 2008ರ ಮಿಷನ್ ಚಂದ್ರಯಾನ ಮತ್ತು 2014ರ ಮಂಗಳಯಾನವನ್ನು ಕೂಡ ಇದರ ಮೂಲಕವೇ ಪೂರ್ಣಗೊಳಿಸಲಾಗಿತ್ತು.

1378 ಕೆಜಿ ತೂಕದ ಉಪಗ್ರಹ ಹೊತ್ತೊಯ್ದ ರಾಕೆಟ್

104 ಉಪಗ್ರಹಗಳನ್ನು ಕಕ್ಷೆಗೆ ತಲುಪಿಸಿದ ಪಿಎಸ್​ಎಲ್​ವಿ ರಾಕೆಟ್ ಒಟ್ಟು 1,378 ಕೆಜಿ ತೂಕದ ಉಪಗ್ರಹಗಳನ್ನು ಹೊತ್ತೊಯ್ದಿದೆ. ಇದರಲ್ಲಿ ಕಾಟೋಸ್ಯಾಟ್ ಉಪಗ್ರಹ ವೊಂದೇ 714 ಕೆಜಿ ತೂಕ ಹೊಂದಿತ್ತು. 103 ನ್ಯಾನೋ ಉಪಗ್ರಹಗಳ ಒಟ್ಟು ತೂಕ 664 ಕೆಜಿ ಇತ್ತು. ಭಾರತದ ಎರಡು ನ್ಯಾನೋ ಉಪಗ್ರಹಗಳಾದ ಐಎನ್​ಎಸ್ 1ಎ ಮತ್ತು ಐಎನ್​ಎಸ್ 1ಬಿ ತಲಾ ಮೂವತ್ತು ಕೆಜಿ ತೂಕ ಹೊಂದಿತ್ತು.

10 ವರ್ಷದಲ್ಲಿ 42 ಉಪಗ್ರಹ ಉಡಾವಣೆ

ಭಾರತದ ಪ್ರಥಮ ಉಪಗ್ರಹ ಆರ್ಯಭಟವನ್ನು 1975ರಲ್ಲಿ ಉಡಾವಣೆ ಮಾಡಲಾಗಿತ್ತು. ಇಲ್ಲಿಯವರೆಗೆ ಭಾರತದ ಒಟ್ಟು 86 ಉಪಗ್ರಹಗಳನ್ನು ನಭಕ್ಕೆ ಕಳುಹಿಸಲಾಗಿದ್ದು, 1975ರಿಂದ 2006ರ ಅವಧಿಯಲ್ಲಿ ಅಂದರೆ 31 ವರ್ಷಗಳಲ್ಲಿ 44 ಉಪಗ್ರಹ ಉಡ್ಡಯನ ಮಾಡಲಾಗಿತ್ತಷ್ಟೆ. ಆದರೆ ಕಳೆದ 10 ವರ್ಷಗಳ ಅವಧಿಯಲ್ಲಿ ಈ ಪ್ರಮಾಣದಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಕೇವಲ 10 ವರ್ಷಗಳಲ್ಲಿಯೇ 42 ಸೆಟಲೈಟ್ ಉಡಾವಣೆ ಮಾಡಲಾಗಿದೆ.

ಮಾರ್ಚ್​ನಲ್ಲಿ ಸಾರ್ಕ್ ಉಪಗ್ರಹ…

 ಮಾರ್ಚ್ ಮತ್ತು ಏಪ್ರಿಲ್​ನಲ್ಲಿ ಇಸ್ರೋ ಮತ್ತೆರಡು ಉಪಗ್ರಹಗಳ ಉಡಾವಣೆಗೆ ಚಿಂತನೆ ನಡೆಸಿದೆ ಎಂದು ಇಸ್ರೋ ಅಧ್ಯಕ್ಷ ಎ.ಎಸ್.ಕಿರಣ್ ಕುಮಾರ್ ತಿಳಿಸಿದ್ದಾರೆ. ಇದರ ತಯಾರಿ ಭರದಿಂದ ಸಾಗುತ್ತಿದ್ದು, ಜಿಎಸ್​ಎಲ್​ವಿ ಮಾರ್ಕ್ 2 ಸಾರ್ಕ್​ನ

ಸೆಟಲೈಟ್ ಹೊತ್ತೊಯ್ದರೆ, ಜಿಎಸ್​ಎಲ್​ವಿ ಮಾರ್ಕ್ 3 ಜಿಸ್ಯಾಟ್-19 ಉಪಗ್ರಹ ವನ್ನು ಉಡಾವಣೆ ಮಾಡಲಿದೆ. 2014ರ ನವೆಂಬರ್​ನಲ್ಲಿ ನೇಪಾಳದಲ್ಲಿ ನಡೆದ ಸಾರ್ಕ್ ಶೃಂಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಾರ್ಕ್ ಸೆಟಲೈಟ್​ನ ಉಡಾವಣೆ ಮಾಡುವುದಾಗಿ ತಿಳಿಸಿದ್ದರು. ಇದು ಟೆಲಿಕಮ್ಯೂನಿಕೇಷನ್ ಮತ್ತು ಟೆಲಿಮೆಡಿಸಿನ್ ಕ್ಷೇತ್ರದಲ್ಲಿ ಸಾರ್ಕ್ ರಾಷ್ಟ್ರಗಳಿಗೆ ಉಪಯುಕ್ತವಾಗಲಿದೆ. ಆದರೆ ಪಾಕಿಸ್ತಾನ ಈ ಯೋಜನೆಯಿಂದ ಹೊರಗುಳಿಯುವುದಾಗಿ ತಿಳಿಸಿದ್ದರಿಂದ ಸದ್ಯ ಸಾರ್ಕ್ ಸೆಟಲೈಟ್ ಅನ್ನು ದಕ್ಷಿಣ ಏಷ್ಯಾ ಸೆಟಲೈಟ್ ಎಂದು ಕರೆಯಲಾಗುತ್ತಿದೆ. ಜತೆಗೆ ಚಂದ್ರಯಾನ-2ಯೋಜನೆಯ ಬಗ್ಗೆಯೂ ಇಸ್ರೋ ತಯಾರಿ ನಡೆಸುತ್ತಿದ್ದು, 2018ರ ಮೊದಲ ತ್ರೖೆಮಾಸಿಕ ಅವಧಿಯಲ್ಲಿ ಲಾಂಚ್ ಮಾಡಲಾಗುವುದೆಂದು ಕಿರಣ್​ಕುಮಾರ್ ತಿಳಿಸಿದ್ದಾರೆ. ಇನ್ನು ಮಾನವ ಅಂತರಿಕ್ಷ ಯಾನದ ಯೋಜನೆ ಕುರಿತ ಪ್ರಶ್ನೆಗೆ ಉತ್ತರಿಸಿ, ಸದ್ಯಕ್ಕೆ ನಮ್ಮ ಆದ್ಯತೆ ಅದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕಾಟೋಸ್ಯಾಟ್ ಉಪಯೋಗ

ಕಾಟೋಸ್ಯಾಟ್-2 ಉಪಗ್ರಹದ ಕಾರ್ಯಾಚರಣೆ ಈ ಹಿಂದೆ ಉಡಾವಣೆ ಮಾಡಲಾಗಿದ್ದ ನಾಲ್ಕು ಕಾಟೋಸ್ಯಾಟ್ ಉಪಗ್ರಹಗಳನ್ನೇ ಹೋಲುತ್ತದೆ. ಇದರಿಂದ ರಿಮೋಟ್ ಸೆನ್ಸಿಂಗ್ ಸೇವೆ ದೊರೆಯಲಿದೆ. ಕಾಟೋಸ್ಯಾಟ್-2ನಿಂದ ಕಳುಹಿಸಲಾಗುವ ಚಿತ್ರಗಳು ಕರಾವಳಿ ಪ್ರದೇಶದ ಬಳಕೆ, ನಿಯಂತ್ರಣ, ರಸ್ತೆ ಸೇವೆಗಳ ಮೇಲೆ ನಿಗಾವಹಿಸುವುದು, ನೀರಿನ ಸರಬರಾಜು, ಭೂಮಿ ಬಳಕೆಯ ನಕ್ಷೆ ಮುಂತಾದ ಕಾರ್ಯಗಳಲ್ಲಿ ನೆರವು ನೀಡಲಿವೆ.

ಹಣಕಾಸಿನ ನೆರವಿಗಾಗಿಯೇ ಹುಟ್ಟಿದ ಸಂಸ್ಥೆ: ಇಸ್ರೋದ ವಾಣಿಜ್ಯ ಅಂಗ ಸಂಸ್ಥೆ ಅಂತರಿಕ್ಷ್ 24 ವರ್ಷಗಳ ಹಿಂದೆ ಇಸ್ರೋಗೆ ಹಣಕಾಸಿನ ನೆರವು ನೀಡಲೆಂದೇ ರಚನೆಯಾದ ಸಂಸ್ಥೆ. ಇದರ ಸ್ಥಾಪನೆ 1992ರ ಡಿಸೆಂಬರ್ 28ರಂದು ಆಗಿತ್ತು. ಈ ಕಂಪನಿ ಸುಮಾರು 3,000 ಕೋಟಿ ರೂಪಾಯಿ ಮೌಲ್ಯದ್ದಾಗಿದೆ.

4 ಪಟ್ಟು ಹೆಚ್ಚಾಯ್ತು ಆದಾಯ!

ಇಸ್ರೋದ ಸಹಯೋಗಿ ಸಂಸ್ಥೆ ಆಂಟ್ರಿಕ್ಸ್ ಕಾಪೋರೇಷನ್​ನ 2015ರಲ್ಲಿ 200 ಕೋಟಿ ರೂಪಾಯಿ ಲಾಭಗಳಿಸಿತ್ತು. ಅದು ಈ ವರ್ಷ 800 ಕೋಟಿ ರೂಪಾಯಿಗೆ ಏರಿಕೆ ಆಗಿದೆ. ಇಸ್ರೋದ ದಾಖಲೆ ಉಡಾವಣೆಯಿಂದ ಆಂಟ್ರಿಕ್ಸ್​ಗೆ ಸುಮಾರು 650 ಕೋಟಿ ರೂಪಾಯಿ ಅದಾಯ ಬಂದಿದೆ.

ಸಿಎಂ ಶುಭಾಶಯ

ಒಂದೇ ರಾಕೆಟ್ ಮೂಲಕ ಏಕಕಾಲಕ್ಕೆ 104 ಉಪಗ್ರಹಗಳನ್ನು ಅಂತರಿಕ್ಷಕ್ಕೆ ಯಶಸ್ವಿಯಾಗಿ ಉಡಾವಣೆ ಮಾಡಿ ಬಾಹ್ಯಾಕಾಶ ಚರಿತ್ರೆಯಲ್ಲಿ ಹೊಸ ದಾಖಲೆ ಸ್ಥಾಪಿಸಿದ ಇಸ್ರೋ ಸಾಧನೆ ಮತ್ತು ಸಾಹಸಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿನಂದನೆ ಸಲ್ಲಿಸಿದ್ದಾರೆ.

ಬಿಎಸ್​ವೈ ಹರ್ಷ

ಇಸ್ರೋ ಸಾಧನೆಯನ್ನು ಅಭಿನಂದಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ವಿಜ್ಞಾನ ಕ್ಷೇತ್ರದಲ್ಲಿ ಭಾರತವೇ ಅಗ್ರಗಣ್ಯ ರಾಷ್ಟ್ರ ಎಂಬುದನ್ನು ಈ ಸಾಧನೆ ಮತ್ತೊಮ್ಮೆ ಸಾಬೀತು ಮಾಡಿದೆ ಎಂದಿದ್ದಾರೆ.

 


About the author

ಕನ್ನಡ ಟುಡೆ

Leave a Comment