ರಾಜ್ಯ ಸುದ್ದಿ

ಹಂಪಿ ಸ್ಮಾರಕ ಧ್ವಂಸ ಪ್ರಕರಣ : ಕರ್ನಾಟಕ ಪೊಲೀಸರಿಂದ ಮೂವರ ಬಂಧನ

ಬಳ್ಳಾರಿ: ವಿಶ್ವ ವಿಖ್ಯಾತ ಹಂಪಿ ಗಜ ಶಾಲೆ ಹಿಂಭಾಗದ ವಿಷ್ಣು ದೇವಾಲಯದ ಮಂಟಪದ ಕಲ್ಲುಗಂಬಗಳನ್ನು ಬೀಳಿಸಿದ್ದ ಮೂವರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.
ಕಳೆದ ವಾರ  ನಾಲ್ವರು ಯುವಕರು ವಿಷ್ಣುದೇವಾಲಯದ ಸ್ತಂಭಗಳನ್ನು ಬೀಳಿಸುತ್ತಿದ್ದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದನ್ನು ಗಮನಿಸಿ ಎಚ್ಚೆತ್ತ ಪೊಲೀಸರು ತನಿಖೆ ಕೈಗೊಂಡು ಅವರ ಪೈಕಿ ಮೂವರು ಯುವಕರನ್ನು ವಶಕ್ಕೆ ಪಡೆದಿದ್ದಾರೆ ಎಂದು ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ. ವಿಚಾರಣೆ ವೇಳೆ ಆರೋಪಿಗಳು ತಾವೇ ಈ ಕೃತ್ಯ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಯುವಕರ ಹೇಳಿಕೆಗೂ ಘಟನೆಗೂ ತಾಳೆಯಾಗುತ್ತಿರುವುದರಿಂದ ಆ ಯುವಕರೇ ಆರೋಪಿಗಳು ಎನ್ನುವುದು ಬಹುತೇಕ ಖಚಿತವಾಗಿದೆ.
ಕೃತ್ಯದ ಬಳಿಕ ಯುವಕರು ಬಿಹಾರದಲ್ಲಿ ತಲೆ ಮರೆಸಿಕೊಂಡಿದ್ದಾರೆ ಎಂದು ತಿಳಿದುಬಂದಿದ್ದು ಎರಡು ತಂಡಗಳಾಗಿ ಪೊಲೀಸರು ಬಿಹಾರಕ್ಕೆ ತೆರಳಿದ್ದರು. ಸರ್ಕಾರ ಆರೋಪಿಗಳ ಪತ್ತೆಗೆ ಮೂರು ತಂಡಗಳನ್ನು ರಚನೆ ಮಾಡಿ ತನಿಖೆ ಚುರುಕುಗೊಳಿಸಿತ್ತು. ಬೆಂಗಳೂರು ಮತ್ತು ಮುಂಬಯಿಗೂ ತೆರಳಿದ್ದ ಪೊಲೀಸರು ಆರೋಪಿಗಳ ಪತ್ತೆಗೆ ಹುಡುಕಾಟ ನಡೆಸಿದ್ದರು.
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ, ಹಂಪಿ ವಿಶ್ವಪರಂಪರೆ ನಿರ್ವಹಣಾ ಪ್ರಾಧಿಕಾರ ಹಾಗೂ ಪೊಲೀಸ್ ಇಲಾಖೆಗಳು ಹಂಪಿಯ ಸ್ಮಾರಕಗಳ ಕಾವಲಿಗೆ ಹೆಚ್ಚಿನ ಭಧ್ರತೆ ಕೈಗೊಂಡಿದೆ.

About the author

ಕನ್ನಡ ಟುಡೆ

Leave a Comment