ರಾಜ್ಯ ಸುದ್ದಿ

ವಿಶ್ವ ಶೌಚಾಲಯ ದಿನ: ಗ್ರಾಮೀಣ ಕರ್ನಾಟಕ ಬಹಿರ್ದೆಸೆ ಮುಕ್ತ ಎಂದು ಘೋಷಿಸಿದ ಸರ್ಕಾರ

ಬೆಂಗಳೂರು:  ಗ್ರಾಮೀಣ ಕರ್ನಾಟಕವನ್ನು ಬಯಲು ಬಹಿರ್ದೆಸೆ ಮುಕ್ತವನ್ನಾಗಿ ಸರ್ಕಾರ ಇಂದು ಘೋಷಣೆ ಮಾಡಿತು.
ವಿಶ್ವ ಶೌಚಾಲಯ ದಿನಾಚರಣೆ ಅಂಗವಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವಿಕಾಸಸೌಧ ಹಾಗೂ ವಿಧಾನಸೌಧ ನಡುವೆ ಇರುವ ಮಹಾತ್ಮಾಗಾಂಧಿ ಪ್ರತಿಮೆ ಬಳಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಈ ಘೋಷಣೆ ಮಾಡಿದರು. ಆರೋಗ್ಯಕರ ಕರ್ನಾಟಕ ನಿರ್ಮಾಣದ ಹೆಜ್ಜೆ ಇಟ್ಟಿದ್ದು, ಗ್ರಾಮೀಣ ಭಾಗದಲ್ಲಿ ಬಯಲು ಬಹಿರ್ದೆಸೆ ಮುಕ್ತಗೊಳಿಸಲಾಗಿದೆ ಎಂದು ಘೋಷಣೆ ಮಾಡಿ, ನಂತರ ಸತ್ಯಮೇವ ಜಯತೆ ಎಂಬ ಭಿತ್ತಿಪತ್ರವನ್ನು ಕೂಡ ಬಿಡುಗಡೆ ಮಾಡಿದರು.ಸ್ವಚ್ಛ ಭಾರತ ಅಭಿಯಾನ ಅಡಿಯಲ್ಲಿ  ಶೌಚಾಲಯ ನಿರ್ಮಾಣದಲ್ಲಿ ಉತ್ತರ ಪ್ರದೇಶ, ಮಹಾರಾಷ್ಟ್ರ ಹೊರತುಪಡಿಸಿದರೆ ಕರ್ನಾಟಕ ಮೂರನೇ ಸ್ಥಾನದಲ್ಲಿದೆ.ನಂತರ ಮಾತನಾಡಿದ ಕುಮಾರಸ್ವಾಮಿ, ಪ್ರತಿ ಗ್ರಾಮಕ್ಕೂ ಜಲಧಾರೆ ಯೋಜನೆಯಡಿ ದಿನದ 24 ಗಂಟೆಯೂ ನೀರು ಒದಗಿಸಲು ಉದ್ದೇಶಿಸಲಾಗಿದೆ. ಸುಮಾರು 60ಸಾವಿರ ಕೋಟಿ ರೂ. ವೆಚ್ಚದ ಯೋಜನೆ ಇದಾಗಿದ್ದು, ಪ್ರತಿ ಹಳ್ಳಿಗೂ ಭೂ ಮೇಲ್ಮೈ ನೀರನ್ನು ಒದಗಿಸಲು ಉದ್ದೇಶಿಸಲಾಗಿದೆ ಎಂದರು.ಪ್ರತಿ ಕುಟುಂಬಕ್ಕೂ ಶೌಚಾಲಯ ಒದಗಿಸಬೇಕಿದೆ. ಹಾಗೆಯೇ ಪ್ರತಿ ಹಳ್ಳಿಗೂ ಕೂಡ ನೀರು ಒದಗಿಸಬೇಕು. ಪ್ರತಿ ಕುಟುಂಬವೂ ಶೌಚಾಲಯ ಬಳಸಿದಾಗ ಸತ್ಯಮೇವ ಜಯತೆ ಘೋಷಣೆಗೆ ನಿಜವಾದ ಅರ್ಥ ಸಿಗಲಿದೆ ಎಂದು ತಿಳಿಸಿದರು.ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ಕಳೆದ ನಾಲ್ಕರಿಂದ ಐದು ವರ್ಷಗಳ ಅವಧಿಯಲ್ಲಿ ಸ್ವಚ್ಛ ಭಾರತ ಅಭಿಯಾನದಡಿಯಲ್ಲಿ ಕೇಂದ್ರ ಹಾಗೂ ರಾಜ್ಯಸರ್ಕಾರದಿಂದ ರಾಜ್ಯಾದ್ಯಂತ 45 ಲಕ್ಷ ಶೌಚಾಗೃಹಗಳನ್ನು ನಿರ್ಮಿಸಲಾಗಿದೆ. ನಿಗದಿತ ಅವಧಿಗಿಂತಲೂ ಮುಂಚಿತವಾಗಿಯೇ ಗುರಿ ತಲುಪಲಾಗಿದೆ ಎಂದು ತಿಳಿಸಿದರು.

About the author

ಕನ್ನಡ ಟುಡೆ

Leave a Comment