ರಾಜ್ಯ ಸುದ್ದಿ

ವಿಷ ಪ್ರಸಾದ ದುರಂತ; ಬಿದರಳ್ಳಿ ಗ್ರಾಮವೊಂದರಲ್ಲೇ 7 ಮಂದಿ ದುರ್ಮರಣ, ಸಾವಿನ ಸಂಖ್ಯೆ 18ಕ್ಕೆ ಏರಿಕೆ

ಚಾಮರಾಜನಗರ: ಚಾಮರಾಜನಗರ ವಿಷ ಪ್ರಸಾದ ದುರಂತಕ್ಕೆ ಬಲಿಯಾದವರ ಸಂಖ್ಯೆ 18ಕ್ಕೆ ಏರಿಕೆಯಾಗಿದ್ದು, ಬಿದರಳ್ಳಿ ಗ್ರಾಮವೊಂದರಲ್ಲೇ 7 ಮಂದಿ ದುರ್ಮರಣ ಹೊಂದಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಮಾಧ್ಯಮವೊಂದು ವರದಿ ಮಾಡಿದ್ದು, ಸುಳ್ವಾಡಿ ಮಾರಮ್ಮ ದೇವಿಯ ವಿಷ ಪ್ರಸಾದಕ್ಕೆ ಬಲಿಯಾದವರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಬಿದರಳ್ಳಿ ಗ್ರಾಮವೊಂದರಲ್ಲೇ 7 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟಾರೆ ಇಲ್ಲಿವರೆಗೂ 18 ಮಂದಿ ಮೃತಪಟ್ಟಿದ್ದು, 80ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದಾರೆ. ಇನ್ನು ಬಿದರಳ್ಳಿ ಗ್ರಾಮದ ಮೃತರನ್ನು ಪಾಪಣ್ಣ(70 ವರ್ಷ), ಅನಿತಾ(12ವರ್ಷ), ಶಾಂತರಾಜು(25 ವರ್ಷ), ಗೋಪಿಯಮ್ಮ(40 ವರ್ಷ), ಅಣ್ಣಯಪ್ಪತಮಡಿ(45 ವರ್ಷ), ರಾಚಯ್ಯ (35 ವರ್ಷ), ಕೃಷ್ಣನಾಯಕ್(50 ವರ್ಷ), ಶಿವು(35 ವರ್ಷ), ದೊಡ್ಡ ಮಾದಯ್ಯ(42 ವರ್ಷ), ಶಕ್ತಿ ವೇಲು(45 ವರ್ಷ), ಅವಿನಾಶ್(7 ವರ್ಷ)  ಎಂದು ಗುರುತಿಸಲಾಗಿದೆ. ಮೈಸೂರಿನ ಕೆ. ಆರ್.ಆಸ್ಪತ್ರೆ, ಜೆಎಸ್‍ಎಸ್ ಹಾಗೂ ಅಪೋಲೋ ಆಸ್ಪತ್ರೆಗಳಲ್ಲೂ 40 ಕ್ಕೂ ಹೆಚ್ಚು ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಅಸ್ವಸ್ಥರ ಸಂಖ್ಯೆ ಹೆಚ್ಚುತ್ತಲೇ ಇದೆ. ಇಬ್ಬರು ಮಕ್ಕಳು ಸೇರಿ 13 ಮಂದಿಯನ್ನು ವೆಂಟಿಲೇಟರ್ ನಲ್ಲಿ ಇಡಲಾಗಿದೆ. ಆಸ್ಪತ್ರೆಯಲ್ಲಿ ಅಸ್ವಸ್ಥರು ಸಾವು ಬದುಕಿನ ಮಧ್ಯೆ ನರಳಾಡುತ್ತಿದ್ದಾರೆ. ತಮ್ಮವರನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಈ ದುರಂತ ಒಂದು ಕಡೆಯಾದರೆ ಬದುಕುಳಿದವರಿಗೆ ಚಿಕಿತ್ಸೆ ಕೊಡಿಸುವುದೇ ಸವಾಲಾಗಿ ಪರಿಣಮಿಸಿದೆ. ಕೊಳ್ಳೇಗಾಲ ತಾಲೂಕಾಸ್ಪತ್ರೆ ಕುಂದುಕೊರತೆಗಳ ಆಗರವಾಗಿದೆ. ಇಲ್ಲಿ ಯಾವುದೇ ಸೌಲಭ್ಯವಿಲ್ಲ, ಸರಿಯಾದ ಚಿಕಿತ್ಸೆ ಕೊಡುತ್ತಿಲ್ಲ ಅಂತ ಅಸ್ವಸ್ಥರ ಸಂಬಂಧಿಕರು ವೈದ್ಯರೊಂದಿಗೆ ಗಲಾಟೆ ಮಾಡಿದ್ದಾರೆ. ಬಳಿಕ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 8 ರೋಗಿಗಳಲ್ಲಿ ಐವರನ್ನು ಶಿಫ್ಟ್ ಮಾಡಲಾಗಿದ್ದು, ಇನ್ನು 3 ಮಂದಿ ಇಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ.

About the author

ಕನ್ನಡ ಟುಡೆ

Leave a Comment