ರಾಜ್ಯ ಸುದ್ದಿ

ವೀರಶೈವರನ್ನು ತುಳಿಯಲು ನಡೆಯುತ್ತಿದೆ ವ್ಯವಸ್ಥಿತ ಹುನ್ನಾರ: ಶಾಮನೂರು ಶಿವಶಂಕರಪ್ಪ

ದಾವಣಗೆರೆ: ವೀರಶೈವರನ್ನು ತುಳಿಯುವ ಕೆಲಸ ನಡೆಯುತ್ತಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷರೂ ಆಗಿರುವ ಕಾಂಗ್ರೆಸ್​ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಆರೋಪಿಸಿದರು.

ಹರಿಹರ ಹೊರವಲಯದ ಪಂಚಮಸಾಲಿ ಪೀಠದಲ್ಲಿ ಭಾನುವಾರ ಆಯೋಜಿಸಿದ್ದ, ಲಿಂ. ಜಗದ್ಗುರು ಡಾ. ಮಹಾಂತ ಶಿವಾಚಾರ್ಯ ಶ್ರೀಗಳ 81ನೇ ಜಯಂತ್ಯುತ್ಸವ ಹಾಗೂ ಪಂಚಮಸಾಲಿ ಸಮಾಜದ ನೂತನ ಶಾಸಕ, ಸಚಿವರಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ವೀರಶೈವರಲ್ಲಿ ಪಂಚಮಸಾಲಿ ಜನಾಂಗ 80 ಲಕ್ಷ, ಬಣಜಿಗರು 20 ಲಕ್ಷ ಜನಸಂಖ್ಯೆ ಇದೆ ಎನ್ನುತ್ತಾರೆ. ಎಲ್ಲ ವೀರಶೈವರು ಸೇರಿ 2 ಕೋಟಿ ಜನಸಂಖ್ಯೆ ಆಗುತ್ತದೆ. ಸರ್ಕಾರದ ಜನಗಣತಿ ಪ್ರಕಾರ ಈಗ ಆ ಸಂಖ್ಯೆ 80 ಲಕ್ಷಕ್ಕೆ ಇಳಿದಿದೆ. ಇದು ಹೇಗೆ ಸಾಧ್ಯ? ಇಲ್ಲಿ ವ್ಯವಸ್ಥಿತವಾಗಿ ವೀರಶೈವರನ್ನು ತುಳಿಯುವ ಹುನ್ನಾರ ನಡೆದಿದೆ ಎಂದರು. ಯಾವ ಸರ್ಕಾರವೇ ಆಗಿದ್ದರೂ ಸಮಾಜದ ವಿಷಯ ಬಂದಾಗ ನಾನು ಸಮಾಜದ ಹಿತ ಬಯಸುವವನು ಎಂದರು.

ಈ ಹಿಂದೆ ಸಿರಿಗೆರೆ ಮಠದ ಸ್ವಾಮೀಜಿಗಳು ಚುನಾವಣೆಗಳಲ್ಲಿ ಪ್ರಚಾರ ಮಾಡಿ 10ರಿಂದ 15 ಶಾಸಕರನ್ನು ಗೆಲ್ಲಿಸುತ್ತಿದ್ದರು. ಆ ಮೂಲಕ ಸರ್ಕಾರ ಅವರು ಹೇಳಿದ್ದನ್ನು ಕೇಳುವಂತೆ ಮಾಡಿದ್ದರು. ಈಗ ಆ ಸ್ಥಿತಿ ಇಲ್ಲ. ವಚನಾನಂದ ಶ್ರೀಗಳು ಅಂಥ ಕಾರ್ಯಕ್ರಮ ಹಮ್ಮಿಕೊಳ್ಳಲಿ ಎಂದರು.

ಪಂಚಮಸಾಲಿಗರಿಗೆ ಅನ್ಯಾಯ: ಜನಸಂಖ್ಯೆಗೆ ಅನುಗುಣವಾಗಿ ವೀರಶೈವ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಸಂಪುಟದಲ್ಲಿ ಸ್ಥಾನಮಾನ ಸಿಕ್ಕಿಲ್ಲ ಎಂದು ಶಾಸಕ ಮುರುಗೇಶ್ ನಿರಾಣಿ ಬೇಸರ ವ್ಯಕ್ತಪಡಿಸಿದರು. ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ, ವೀರಶೈವ ಲಿಂಗಾಯತ ಪಂಚಮಸಾಲಿ ಟ್ರಸ್ಟ್ ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿ, ಸಂಸದರಾದ ಜಿ.ಎಂ. ಸಿದ್ದೇಶ್ವರ, ಶಿವಕುಮಾರ್ ಉದಾಸಿ, ಶಾಸಕರಾದ ಡಾ. ಶಾಮನೂರು ಶಿವಶಂಕರಪ್ಪ, ಲಕ್ಷಿ್ಮೕ ಹೆಬ್ಬಾಳ್ಕರ್, ಸಿ.ಸಿ. ಪಾಟೀಲ್, ಕಳಕಪ್ಪ ಬಂಡಿ, ಬಸವರಾಜ್ ಬೊಮ್ಮಾಯಿ, ಪಂಚಮಸಾಲಿ ಸಮಾಜದ ರಾಜ್ಯಾಧ್ಯಕ್ಷ ನಾಗನಗೌಡ ಇತರರಿದ್ದರು.

ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ ಜಾತಿಯ ಮಠಗಳಿಗೆ ಸಹಾಯ ಮಾಡುತ್ತಾರೆ ಎಂಬ ಆರೋಪವಿದೆ. ಅವರು ಅಂಥ ಆರೋಪದಿಂದ ಹೊರಬರುವಂತೆ ಮಾಡಲು ಪ್ರಯತ್ನಿಸುತ್ತೇನೆ. ವೀರಶೈವ ಮಠಗಳಿಗೂ ಅನುದಾನ ಕೊಡುವಂತೆ ಮುಖ್ಯಮಂತ್ರಿ ಮನವೊಲಿಸಲಾಗುವುದು. -ಶಿವಾನಂದ ಪಾಟೀಲ್ ಸಚಿವ

 

 

 

About the author

ಕನ್ನಡ ಟುಡೆ

Leave a Comment