ಅಂಕಣಗಳು ಸುದ್ದಿ

ವೀರಶೈವರೂ ಹಿಂದುಗಳು: ಎಸ್.ಎಲ್.ಭೈರಪ್ಪ

ಮೈಸೂರು: ಜಗಜ್ಯೋತಿ ಬಸವಣ್ಣನಿಗೆ ಭಕ್ತಿ ಸಲ್ಲಿಸಬೇಕೇ ಹೊರತು ಅವರು ಸುಧಾರಿಸಲು ಹೆಣಗಿದ ಮೂಲಧರ್ಮವನ್ನೇ ತ್ಯಜಿಸಲು ವೀರಶೈವರು ಹೊರಡುವುದು ಸೂಕ್ತವಲ್ಲ ಎಂದು ಖ್ಯಾತಿ ಕಾದಂಬರಿಕಾರ ಎಸ್.ಎಲ್.ಭೈರಪ್ಪ ಅಭಿಪ್ರಾಯಪಟ್ಟಿದ್ದಾರೆ.

ಹಿಂದು ಎಂದರೆ ವೈದಿಕ, ಬೌದ್ಧ, ಜೈನ ಹಾಗೂ ಇವುಗಳ ಶಾಖೆಗಳು. ಕೆಲವು ಮುಖ್ಯ ಅಂಶಗಳಲ್ಲಿ ಇವುಗಳು ಪರಸ್ಪರ ವಿರೋಧಿಗಳಾದರೂ ಸಾವಿರಾರು ವರ್ಷಗಳ ಪರಸ್ಪರ ಚರ್ಚೆ ವಾಗ್ವಾದ ಕೊಡುಕೊಳ್ಳುವಿಕೆಗಳಿಂದ ಒಂದು ಸಮಾನ ಸಂಸ್ಕೃತಿ ಬೆಳೆಸಿದವು. ಇವುಗಳಲ್ಲಿ ಶೈವ, ವೀರಶೈವ, ವೈಷ್ಣವ ಮೊದಲಾದ ಹಲವು ಶಾಖೆಗಳಿವೆ. ಈ ವಾಹಿನಿಗಳಲ್ಲಿ ಪರಸ್ಪರ ವಿರೋಧವನ್ನು ಹೆಚ್ಚಿಸಿ ತಾವು ಮುಖ್ಯವಾಹಿನಿಗೆ ಸೇರಿದವರೇ ಅಲ್ಲ ಎಂಬ ನಂಬಿಕೆಯನ್ನು ಹುಟ್ಟಿಸಿ ಬೆಳೆಸುವುದು ಕ್ರೈಸ್ತ ರ್ಚಚಿನ ಒಂದು ತಂತ್ರ. ಬ್ರಿಟಿಷ್ ಸರ್ಕಾರವೂ ಚರ್ಚ್​ನ ಜತೆ ಕೈ ಜೋಡಿಸಿತ್ತು. ಒಡಕು ಹೆಚ್ಚಿದಷ್ಟೂ ಸಾಮ್ರಾಜ್ಯವು ಸುರಕ್ಷಿತ ಎಂಬುದು ಅದರ ದೂರದೃಷ್ಟಿ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಸುರಕ್ಷಿತವಾಗಿ ಉಳಿಸಲು ಹಿಂದು ಸಮಾಜದ ಒಂದು ಪ್ರಮುಖ ಶಾಖೆಯಾದ ವೀರಶೈವ ಲಿಂಗಾಯತವನ್ನು ಮುಖ್ಯ ವೃಕ್ಷದಿಂದ ಬೇರ್ಪಡಿಸುವುದು ಚರ್ಚ್​ನ ವಿಧಾನಕ್ಕೂ ಕಾಂಗ್ರೆಸಿಗೆ ಅಭ್ಯಸ್ಥವಾದ ರಾಜಕೀಯ ತಂತ್ರಕ್ಕೂ ಸಮಾನವಾಗಿ ಹೊಂದಿಕೆಯಾಗುತ್ತದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಜಕೀಯದಲ್ಲಿ ಜಾಗೃತವಾಗಿರುವ ವೀರಶೈವ ಸಮುದಾಯವು ಬಿ.ಎಸ್.ಯಡಿಯೂರಪ್ಪ ಪರ ನಿಂತಿರುವುದು, ಇವುಗಳಿಗೆ ತಕ್ಕ ಪ್ರತಿತಂತ್ರವಾಗಿ ಸಿದ್ದರಾಮಯ್ಯ ವೀರಶೈವ- ಲಿಂಗಾಯತರು ತಾವು ಹಿಂದುಗಳೇ ಅಲ್ಲವೆಂಬ ಚಳವಳಿಗೆ ಜೀವ ಕೊಡುವ ಉಪಾಯ ಮಾಡಿದ್ದಾರೆಂಬ ವದಂತಿ ಹರಡಿದೆ. ಸಿಎಂ ಎಷ್ಟು ನಿರಾಕರಿಸಿದರೂ ಜನ ನಂಬುತ್ತಿಲ್ಲ. ಇದು ನಿಜವಿದ್ದರೆ ಇದರ ಕರ್ತೃ ಕೇವಲ ಸಿದ್ದರಾಮಯ್ಯ ಅವರಲ್ಲ. ಹೈಕಮಾಂಡ್ ಮಟ್ಟದಲ್ಲಿ ರೂಪಿತವಾಗಿರುತ್ತದೆ ಎಂಬುದು ಹಲವರ ಊಹೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ಅಹಿಂದ ಶಬ್ದವು ಅಲ್ಪಸಂಖ್ಯಾತರು, ಹಿಂದುಳಿದವರು ಮತ್ತು ದಲಿತರು ಎಂಬುದರ ಸಂಕ್ಷಿಪ್ತರೂಪ ಎಂದು ಹೇಳಿದರೂ ಅದು ಹಿಂದು ಅಲ್ಲದ, ಹಿಂದು ವಿರೋಧಿ ಎಂಬ ಅರ್ಥ ಧ್ವನಿಸುತ್ತದೆ ಎಂಬುದು ಸಿಎಂಗೆ ಹೊಳೆದಿಲ್ಲವೆ? ಅವರ ಹಿಂಬಾಲಕರಾದ ಲೇಖಕರು ಮತ್ತು ಪತ್ರಕರ್ತರಿಗೆ ತಿಳಿದಲ್ಲವೆ? ಮುಖ್ಯಮಂತ್ರಿಗಳು ಹಿಂದು ವಿರೋಧಿ ಎಂಬ ಆಲೋಚನೆಯಲ್ಲಿ ಮುಚ್ಚುಮರೆ ಮಾಡುತ್ತಿಲ್ಲ ಎಂದು ಇದರ ಅರ್ಥವೆ? ಎಂದು ಪ್ರಶ್ನಿಸಿದ್ದಾರೆ.

ಬಸವಣ್ಣನವರ ಕ್ರಾಂತಿಕಾರಿ ಸುಧಾರಣೆಗಳಲ್ಲಿ ಕಾಯಕದ ಘನತೆ ಮತ್ತು ಅಂತರ್ಜಾತಿ ವಿವಾಹ. ಆ ಕಾಲದಲ್ಲಿ ಬಸವಣ್ಣ ಮಾಡಲು ಹೊರಟ ಅಂತರ್ಜಾತಿ ವಿವಾಹಗಳು ಹಿಂಸಾತ್ಮಕ ಪ್ರತಿಕ್ರಿಯೆಯನ್ನು ಬಡಿದೆಬ್ಬಿಸಿತು. ಇಂಥ ಪ್ರತಿಕ್ರಿಯೆ ಈಗಲೂ ಗ್ರಾಮೀಣ ಪ್ರದೇಶದಲ್ಲಿದೆ. ನಗರಗಳಲ್ಲಿ ಸಹೋದ್ಯೋಗಿಗಳು ಜಾತಿ ಮೀರಿ ಮದುವೆಯಾಗುವುದು ತೀರ ಅಪರೂಪವಾಗಿಲ್ಲ. ಗ್ರಾಮಾಂತರ ಪ್ರದೇಶದಲ್ಲೂ ಈ ಪ್ರವೃತ್ತಿ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿದೆ. ಜಾತಿ ವಿನಾಶದ ಈ ಪ್ರಮುಖ ಬೆಳೆವಣಿಗೆಯನ್ನು ವೀರಶೈವ ಮಠಗಳು, ವೀರಶೈವ ಸಮಾಜವು ತೀವ್ರಗೊಳಿಸುವ ಮೂಲಕ ಬಸವಣ್ಣನಿಗೆ ಭಕ್ತಿಯನ್ನು ಸಲ್ಲಿಸಬೇಕು ಎಂದಿದ್ದಾರೆ.

ಹಿಂದುಗಳು ಚಾತುರ್ವರ್ಣವನ್ನು ಅನುಸರಿಸುತ್ತಾರೆ; ಲಿಂಗಾಯತವು ಅದನ್ನು ತಿರಸ್ಕರಿಸುತ್ತದೆ; ಆದ್ದರಿಂದ ನಾವು ಹಿಂದುಗಳಲ್ಲ ಎಂದು ಕೆಲವರು ಹೇಳುತ್ತಿದ್ದಾರೆ. ಗುಣ ಕರ್ಮ ವಿಭಾಗಶಃ ಎಂಬುದನ್ನು ವಿದ್ವಾಂಸರು ಎಷ್ಟು ಹೇಳಿದರೂ ಮೊಂಡ ಎಡಪಂಥೀಯರು ಚಾತುರ್ವರ್ಣದ ಹಳೆಯ ಅರ್ಥವನ್ನೇ ಭಜಿಸುತ್ತಿರುವುದು ಅರ್ಥವಾಗುತ್ತದೆ. ಆದರೆ, ವಿದ್ಯಾವಂತರಾದ ಲಿಂಗಾಯತ ಉರುಫ್ ವೀರಶೈವರು ಇದನ್ನು ಪಠಿಸುವುದು ಸೋಜಿಗವೆನ್ನಿಸುತ್ತದೆ.

ಕಸುಬಿನ ಆಧಾರಿತ ಜಾತಿ ವಿಂಗಡಣೆಯು ವೀರಶೈವರಲ್ಲಿ ಇನ್ನೂ ಉಳಿದಿಲ್ಲವೆ? ಅವರಲ್ಲಿ ಪರಸ್ಪರ ವಿವಾಹವು ಆಚರಣೆಯಲ್ಲಿದೆಯೆ? ದೀಕ್ಷೆ ತೆಗೆದುಕೊಂಡ ವೀರಶೈವ ಹಿರಿಯರು ಬೇರೆಯವರ ಮನೆಯಲ್ಲಿ ಊಟ ಮಾಡುತ್ತಾರೆಯೆ? ಹಿಂದಿನ ಸ್ಥಗಿತ ಸಮಾಜದಲ್ಲಿ ಬಸವಣ್ಣನ ಜಾತಿರಹಿತ ಸಮಾಜವು ಪೂರ್ಣವಾಗಿ ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.

ಬಸವಣ್ಣನಂಥ ರಚನಾತ್ಮಕ ಸುಧಾಕರನ ಭಕ್ತರೆಂದು ಹೇಳಿಕೊಳ್ಳುವವರಿಗೆ ಅಲ್ಲ. ವೇದವಿರೋಧ, ಚಾತುರ್ವರ್ಣ ವಿರೋಧಗಳ ನಡುವೆ ವ್ಯತ್ಯಾಸವಿದೆ. ಚಾತುರ್ವಣದ ಗತಿ ಮುಗಿಯುತ್ತಿದೆ. ಪ್ರಮುಖ ವೀರಶೈವ ಮಠಗಳೆಲ್ಲ ಸಂಸ್ಕೃತ ಮತ್ತು ವೇದಪಾಠ ಶಾಲೆ ನಡೆಸುತ್ತಿವೆ. ನಾಮಕರಣ, ಗೃಹಪ್ರವೇಶ, ವಿವಾಹ ಮೊದಲಾದ ಕರ್ಮ ಮಾಡಿಸುವ ಪುರೋಹಿತರನ್ನು ತಯಾರು ಮಾಡುತ್ತಿವೆ. ಬ್ರಾಹ್ಮಣ ಪುರೋಹಿತರು ಹೇಳುವ ಮಂತ್ರಗಳಿಗೂ ಕೈಕರಣಗಳಿಗೂ ಈ ಪುರೋಹಿತರು ಹೇಳುವ ಮಂತ್ರ, ಕೈಕರಣಗಳಿಗೂ ಮೂಲಾಂಶಗಳಲ್ಲಿ, ತತ್ತ್ವಲ್ಲಿ ಹೆಚ್ಚು ವ್ಯತ್ವಾಸವಿಲ್ಲ. ಬಸವಣ್ಣನ ಮೂಲತತ್ತ್ವ ಇಂದಿನ ಸಮಾಜದಲ್ಲಿ ಸಕ್ರಿಯವಾಗಿಸುವುದು ವೀರಶೈವ-ಲಿಂಗಾಯತರ ಮಾತ್ರವಲ್ಲ ಸಮಸ್ತ ಹಿಂದುಗಳ ಧ್ಯೇಯವಾಗಬೇಕು ಎಂದಿದ್ದಾರೆ.

About the author

ಕನ್ನಡ ಟುಡೆ

Leave a Comment