ರಾಜಕೀಯ

ವೈಮಾನಿಕ ದಾಳಿ ವಿಚಾರದಲ್ಲಿ ಬಿಎಸ್ ವೈ ಮಾತ್ರವಲ್ಲ ಇಡೀ ಮೋದಿ ಸರ್ಕಾರವೇ ರಾಜಕೀಯ ಮಾಡುತ್ತಿದೆ: ಸಿಎಂ ಕುಮಾರಸ್ವಾಮಿ

ಬೆಂಗಳೂರು: ಬಿಎಸ್ ಯಡಿಯೂರಪ್ಪ ಮಾತ್ರವಲ್ಲ. ಇಡೀ ನರೇಂದ್ರ ಮೋದಿ ಸರ್ಕಾರವೇ ಸೈನಿಕರ ಸಾವಿನಲ್ಲೂ ರಾಜಕೀಯ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಗುರುವಾರ ಆರೋಪಿಸಿದ್ದಾರೆ. ಇಂದು ನಗರದಲ್ಲಿ, ಪಾಕಿಸ್ತಾನದ ಉಗ್ರ ನೆಲೆಗಳ ಮೇಲೆ ಭಾರತ ನಡೆಸಿದ ವೈಮಾನಿಕ ದಾಳಿಯಿಂದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಲಾಭವಾಗಲಿದೆ ಎಂಬ ಬಿಎಸ್ ವೈ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ, ನಮ್ಮ ಯೋಧರ ಪತ್ನಿಯರು ವಿಧವೆಯರಾಗುತ್ತಿದ್ದಾರೆ, ಎಷ್ಟೋ ಕುಟುಂಬಗಳು ತಮ್ಮ ಪುತ್ರನನ್ನು ಕಳೆದುಕೊಳ್ಳುತ್ತಿವೆ. ಆದರೆ ಬಿಜೆಪಿಯವರು ಯೋಧರ ಸಾವಿನಲ್ಲೂ ರಾಜಕೀಯ ಮಾಡುತ್ತಿದ್ದಾರೆ. ಇದು ನಾಚಿಕೆಗೇಡಿನ ವಿಚಾರ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂದಿರಾ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಅವಧಿಯಲ್ಲೂ ಯುದ್ಧ ನಡೆದಿದೆ. ಆದರೆ ಅವರು ಯಾರೂ ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲಿಲ್ಲ ಎಂದರು. ನಮ್ಮ ಯೋಧರು ಗಡಿಯಲ್ಲಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಪಾಕಿಸ್ಥಾನಕ್ಕೆ ಪ್ರತ್ಯುತ್ತರ ನೀಡುತ್ತಿದ್ದಾರೆ. ಆದರೆ ಈ ಬಿಜೆಪಿಯವರು ತಾವೇ ಗಡಿಯಲ್ಲಿ ಕಾದಾಡಿ ದೇಶವನ್ನು ಕಾಪಾಡುತ್ತಿರುವ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಇದು ನಾಚಿಕೆಗೇಡಿನ ವಿಚಾರ ಎಂದು ಸಿಎಂ ಹೇಳಿದ್ದಾರೆ.

About the author

ಕನ್ನಡ ಟುಡೆ

Leave a Comment