ರಾಷ್ಟ್ರ ಸುದ್ದಿ

ಶಬರಿಮಲೆ ಆಯ್ತು, ಈಗ ವಾವರ್ ಮಸೀದಿ ಸರದಿ; ಪ್ರವೇಶಕ್ಕೆ ಯತ್ನಿಸಿದ ಮಹಿಳೆಯರ ಬಂಧನ

ಕೊಚ್ಚಿ: ವಿಶ್ವವಿಖ್ಯಾತ ಪವಿತ್ರ ಯಾತ್ರಾತಾಣ ಶಬರಿಮಲೆಗೆ ಮಹಿಳೆಯರ ಪ್ರವೇಶ ವಿರೋಧಿಸಿ ಹಿಂದೂ ಪರ ಸಂಘಟನೆಗಳ ಪ್ರತಿಭಟನೆ ಮಿತಿ ಮೀರಿರುವಂತೆಯೇ ಇತ್ತ ಅದೇ ಕೇರಳದಲ್ಲಿರುವ ಖ್ಯಾತ ವಾವರ್ ಮಸೀದಿಯೊಳಗೆ ಪ್ರವೇಶ ಮಾಡಲು ಯತ್ನಿಸಿದ ಮಹಿಳೆಯರನ್ನು ಬಂಧಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲ ಸಮೀಪದಲ್ಲಿನ ಎರುಮೇಲಿಯಲ್ಲಿರುವ ವಾವರ್ ಮಸೀದಿಗೆ ಭೇಟಿ ನೀಡಲು ಹೊರಟಿದ್ದ ಮೂವರು ಮಹಿಳೆಯರು ಸೇರಿದಂತೆ ಒಟ್ಟು ಆರು ಜನರನ್ನು ಬಂಧಿಸಲಾಗಿದೆ ತಿಳಿದುಬಂದಿದೆ. ಧಾರ್ಮಿಕ ಗುಂಪುಗಳ ನಡುವೆ ದ್ವೇಷ ಸೃಷ್ಟಿಸಲು ಈ  ಆರೂ ಜನ ಯತ್ನಿಸುತ್ತಿದ್ದರು ಎಂಬ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಸ್ತುತ ಬಂಧಿತ ಆರೂ ಮಂದಿಯನ್ನೂ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದ್ದು, ಎಲ್ಲಾ ಆರು ಜನರು ತಮಿಳುನಾಡಿನವರಾಗಿದ್ದು, ‘ಹಿಂದೂ ಮಕ್ಕಳ್ ಕಚ್ಚಿ’ ಪಕ್ಷದ ಸದಸ್ಯರು ಎಂದು ಕೇರಳ ಪೊಲೀಸರು ಮಾಹಿತಿ ನೀಡಿದ್ದಾರೆ.
ಶಬರಿಮಲೆಗೆ ಬರುವ ಮಾಲಾಧಾರಿಗಳು ಅಯ್ಯಪ್ಪ ದೇಗುಲಕ್ಕೆ ಭೇಟಿ ನೀಡುವ ಮೊದಲು ವಾವರ್‌ ಮಸೀದಿಗೆ ಬಂದು ಹೋಗುತ್ತಾರೆ. ಎರುಮೇಲಿ ನೈನಾರ್ ಜುಮಾ ಮಸೀದಿ ವಾವರ್‌ ಪಲ್ಲಿ (ಮಸೀದಿ) ಎಂದೂ ಪ್ರಸಿದ್ಧಿ. ವಾವರ್ ಅಯ್ಯಪ್ಪ ಸ್ವಾಮಿಯ ಜೊತೆಗಾರನಾಗಿದ್ದ ಎನ್ನಲಾಗಿದೆ.
ಮಹಿಳೆಯರಿಗೆ ಪ್ರವೇಶ ನಿರ್ಭಂಧವಿಲ್ಲ; ಮಸೀದಿ ಆಡಳಿತ ಮಂಡಳಿ ಸ್ಪಷ್ಟನೆ
ಇನ್ನು ಹಿಂದೂಪರ ಸಂಘಟನೆಯ ಕಾರ್ಯಕರ್ತರ ಮಸೀದಿ ಪ್ರವೇಶಕ್ಕೆ ಯತ್ನಿಸಿ ಸಿಕ್ಕಿಬಿದ್ದ ಬೆನ್ನಲ್ಲೇ ಎಚ್ಚೆತ್ತುಕೊಂಡ ಮಸೀದಿ ಆಡಳಿತ ಮಂಡಳಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ವಾವರ್ ಮಸೀದಿಯಲ್ಲಿ ಮಹಿಳೆಯರಿಗೆ ಯಾವುದೇ ರೀತಿಯ ನಿರ್ಬಂಧವಿಲ್ಲ. ಎಲ್ಲ ಸಮುದಾಯ ಹಾಗೂ ಎಲ್ಲ ವಯಸ್ಸಿನ ಜನರೂ ಇಲ್ಲಿಗೆ ಆಗಮಿಸಿ ಪ್ರಾರ್ಥನೆ ಸಲ್ಲಿಸುತ್ತಾರೆ. ಶಬರಿಮಲೆಗೆ ಆಗಮಿಸುವ ಭಕ್ತಾದಿಗಳು ಮೊದಲು ಇಲ್ಲಿಗೆ ಆಗಮಿಸಿ ಪ್ರಾರ್ಥನೆ ಸಲ್ಲಿಸಿ ಬಳಿಕ ಶಬರಿಮಲೆ ಸ್ವಾಮಿ ಅಯ್ಯಪ್ಪನಿಗೆ ದರ್ಶನ ಮಾಡುವುದು ವಾಡಿಕೆ ಎಂದು ಮಸೀದಿಯ ಆಡಳಿತಾಧಿಕಾರಿ ಪಿಹೆಚ್ ಶಹಜಹಾನ್ ಮಾಹಿತಿ ನೀಡಿದ್ದಾರೆ. ನವೆಂಬರ್‌ನಿಂದ–ಜನವರಿವರೆಗೆ ಶಬರಿಮಲೆಗೆ ಬರುವ ಅಯ್ಯಪ್ಪ ಯಾತ್ರಿಗಳು ವಾವರ್ ಮಸೀದಿಗೆ ಪ್ರವೇಶ ಮಾಡುವುದಿಲ್ಲ. ಆದರೆ ಅದಕ್ಕೆ ಸುತ್ತುಹಾಕಿ ಹೋಗುತ್ತಾರೆ. ಕಾಣಿಕೆ ಅರ್ಪಿಸಿ, ಹಣ್ಣುಕಾಯಿ ಒಡೆದು ಪ್ರಾರ್ಥಿಸುತ್ತಾರೆ.

About the author

ಕನ್ನಡ ಟುಡೆ

Leave a Comment