ರಾಷ್ಟ್ರ ಸುದ್ದಿ

ಶಬರಿಮಲೆ ರಕ್ಷಣೆಗೆ ಅಯೋಧ್ಯೆ ರೀತಿ ಪ್ರತಿಭಟನೆ ನಡೆಸುತ್ತೇವೆ: ವಿಶ್ವ ಹಿಂದೂ ಪರಿಷತ್

ನವದೆಹಲಿ: ಕೇರಳದ ಶಬರಿಮಲೆ ಅಯ್ಯಪ್ಪ ದೇಗುಲ ರಕ್ಷಣೆ ಮಾಡಲು ಅಯೋಧ್ಯೆ ರೀತಿಯಲ್ಲಿಯೇ ಪ್ರತಿಭಟನೆ ನಡೆಸುತ್ತೇವೆಂದು ವಿಶ್ವ ಹಿಂದೂ ಪರಿಷತ್ ಮಂಗಳವಾರ ಹೇಳಿದೆ. ಈ ಕುರಿತಂತೆ ಮಾತನಾಡಿರುವ ವಿಹೆಚ್’ಪಿ ಜಂಟಿ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಜೈನ್ ಅವರು, ಶಬರಿಮಲೆಗೆ ಮಹಿಳೆಯರ ಪ್ರವೇಶ ಕುರಿತು ಸುಪ್ರೀಂಕೋರ್ಟ್ ಆದೇಶ ಪಾಲನೆ ಮಾಡಲು ನಿರ್ಧರಿಸಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ತೀವ್ರವಾಗಿ ಕಿರಿಕಾರಿದ್ದಾರೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು, ಆದಿಲ್ ಶಾ ಹಾಗೂ ಔರಂಗ್’ಜೇಬ್ ರಂತೆ ಕಾರ್ಯನಿರ್ವಹಿಸುತ್ತಿದ್ದಾರೆಂದು ಹೇಳಿದ್ದಾರೆ. ಹಿಂದುಗಳ ನಂಬಿಕೆ ಹಾಗೂ ಸಂಪ್ರದಾಯಗಳಿಗೆ ಧಕ್ಕೆಯುಂಟು ಮಾಡಲಾಗುತ್ತಿದೆ. ಅಲ್ಲಿನ ಮುಖ್ಯಮಂತ್ರಿಗಳು ಕೇರಳವನ್ನು ಕಾಶ್ಮೀರದಂತೆ ಹಿಂದೂ ಮುಕ್ತ ರಾಜ್ಯವಾಗಿಸಲು ಹೊರಟಿದ್ದಾರೆ. ಶಬರಿಮಲೆ ವಿಚಾರದಲ್ಲಿ ಅವರ ವರ್ತನೆ ಹಾಗೆಯೇ ಇದೆ. ಸುಪ್ರೀಂಕೋರ್ಟ್ ಆದೇಶವನ್ನು ಪಾಲನೆ ಮಾಡಲು ಮುಂದಾಗುವ ಮೂಲಕ ಹಿಂದೂಗಳಿಗೆ ಪದೇ ಪದೇ ಕಿರುಕುಳ ನೀಡುತ್ತಿದ್ದಾರೆ. ಮಹಿಳೆಯರ ಹಕ್ಕು ರಕ್ಷಣೆ ಮಾಡುವ ಹೆಸರಿನಲ್ಲಿ ಮಹಿಳೆಯರನ್ನು ತೀವ್ರವಾಗಿ ನಿಂದಿಸುತ್ತಿದ್ದಾರೆಂದು ತಿಳಿಸಿದ್ದಾರೆ. ದೇಗುಲದ ಸುತ್ತಮುತ್ತಲು ಸೆಕ್ಷನ್ 144 ಯಾವ ಕಾರಣಕ್ಕೆ ಜಾರಿ ಮಾಡಲಾಗಿದೆ? ಸ್ಥಳದಲ್ಲಿ ಗಲಭೆ ನಡೆಯುವ ಸಾಧ್ಯತೆಗಳೇನಾದರೂ ಇದೆಯೇ? ಎಂದು ಪ್ರಶ್ನಿಸಿದ್ದಾರೆ.

About the author

ಕನ್ನಡ ಟುಡೆ

Leave a Comment