ರಾಷ್ಟ್ರ ಸುದ್ದಿ

ಶಬರಿಮಲೆ: ಸಿಎಂ ಪಿಣರಾಯಿ ವಿಜಯನ್ ಗೂ ತಟ್ಟಿದ ಪ್ರತಿಭಟನೆ ಬಿಸಿ, ಮನೆಗೆ ಮುತ್ತಿಗೆ

ತಿರುವನಂತಪುರಂ: ಕೇರಳದ ಪವಿತ್ರ ಯಾತ್ರಾ ಸ್ಥಳ ಶಬರಿಮಲೆಯಲ್ಲಿ ಪ್ರತಿಭಟನೆ ಭುಗಿಲೆದ್ದಿರುವಂತೆಯೇ ಪ್ರತಿಭಟನೆಯ ಬಿಸಿ ಸ್ವತಃ ಸಿಎಂ ಪಿಣರಾಯಿ ವಿಜಯನ್ ಅವರಿಗೂ ತಟ್ಟಿದೆ. ಅಯ್ಯಪ್ಪ ದರ್ಶನಕ್ಕೆ ಆಗಮಿಸಿದ್ದ ಸುಮಾರು 70 ಮಂದಿ ಭಕ್ತರನ್ನು ಪೊಲೀಸರು ವಶಕ್ಕೆ ಪಡೆದಿರುವ ವಿಚಾರ ಕೇರಳದಲ್ಲಿ ಕಾಡ್ಗಿಚ್ಚಿನಂತೆ ಹರಿಡಿದ್ದು, ಬಿಜೆಪಿ, ಆರ್ ಎಸ್ಎಸ್ ಸೇರಿದಂತೆ ಹಲವು ಹಿಂದೂಪರ ಸಂಘಟನೆಗಳು ಕೇರಳದಾದ್ಯಂತ ಪ್ರತಿಭಟನೆ ನಡೆಸಿವೆ. ಇದೀಗ ಕಾರ್ಯಕರ್ತರ ಪ್ರತಿಭಟನೆ ಬಿಸಿ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರಿಗೂ ತಟ್ಟಿದ್ದು, ರಾಜಧಾನಿ ತಿರುವನಂತಪುರಂನಲ್ಲಿರುವ ಸಿಎಂ ಅಧಿಕೃತ ನಿವಾಸ ದಿ ಕ್ಲಿಫ್ ಹೌಸ್ ಗೆ ಪ್ರತಿಭಟನಾಕಾರರು ಮುತ್ತಿಗೆ ಹಾಕಿದ್ದಾರೆ. ಸಿಎಂ ನಿವಾಸದ ಪ್ರಾಂಗಣದಲ್ಲಿ ಸೇರಿರುವ ನೂರಾರು ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ. ಅಂತೆಯೇ ಇತ್ತ ಆರ್ ಎಸ್ಎಸ್ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದ್ದರೆ, ಕೇರಳ ಬಿಜೆಪಿ ಮುಖಂಡರು ಇಂದು ಕೇರಳ ರಾಜ್ಯಪಾಲ ಪಿ ಸದಾಶಿವಂರನ್ನು ಭೇಟಿ ಮಾಡಿ ಮನವಿ ಸಲ್ಲಿಕೆ ಮಾಡಲಿದ್ದಾರೆ.
ಇನ್ನು ಶನಿವಾರ ತಡರಾತ್ರಿ ಹಿಂದೂ ಐಕ್ಯವೇದಿ ಸಂಘಟನೆಯ ರಾಜ್ಯಾಧ್ಯತ್ರಕ್ಷೆ ಪಿ ಶಶಿಕಲಾರನ್ನು ಪೊಲೀಸರು ನಿಳಕ್ಕಲ್ ನಲ್ಲಿ ಬಂಧಿಸಿದ್ದರು. ಇದು ಹಿಂದೂಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿ ಪ್ರತಿಭಟನೆಗೆ ಕಾರಣವಾಗಿತ್ತು. ಇದೀಗ ಕಳೆದ ರಾತ್ರಿ ಸನ್ನಿಧಾನಂನಲ್ಲಿ ಯಾರೂ ತಂಗುವಂತಿಲ್ಲ ಎಂದು ಹೇಳಿ ಪೊಲೀಸರು 70 ಮಂದಿ ಭಕ್ತರನ್ನು ಬಂಧಿಸಿರುವುದು ಮತ್ತೆ ಶಬರಿಮಲೆಯಲ್ಲಿ ಪ್ರತಿಭಟನೆಗೆ ಕಾರಣವಾಗಿದೆ.

About the author

ಕನ್ನಡ ಟುಡೆ

Leave a Comment