ರಾಷ್ಟ್ರ ಸುದ್ದಿ

ಶಬರಿಮಲೆ ಸ್ತ್ರೀ ಪ್ರವೇಶ ವಿರುದ್ಧ ಮೇಲ್ಮನವಿ: ತುರ್ತು ವಿಚಾರಣೆಗೆ ‘ಸುಪ್ರೀಂ’ ನಕಾರ

ನವದೆಹಲಿ: ಎಲ್ಲಾ ವಯಸ್ಸಿನ ಸ್ತ್ರೀಯರು ಶಬರಿಮಲೆ ದೇವಸ್ಥಾನ ಪ್ರವೇಶಿಸಬಹುದು ಎಂಬ ಸುಪ್ರೀಂ ಕೋರ್ಟ್ ನ ತೀರ್ಪನ್ನು ಪುನರ್ ಪರಿಶೀಲಿಸುವಂತೆ ಸಲ್ಲಿಸಲಾಗಿದ್ದ ಮೇಲ್ಮನವಿ ಅರ್ಜಿಯ ತುರ್ತು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಮಂಗಳವಾರ ನಿರಾಕರಿಸಿದೆ.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, ನ್ಯಾಯಮೂರ್ತಿಗಳಾದ ಎಸ್ ಕೆ ಕೌಲ್ ಮತ್ತು ಕೆ ಎಂ ಜೋಸೆಫ್ ಅವರನ್ನೊಳಗೊಂಡ ನ್ಯಾಯಪೀಠ, ರಾಷ್ಟ್ರೀಯ ಅಯ್ಯಪ್ಪ ಭಕ್ತರ ಒಕ್ಕೂಟದ ಪರವಾಗಿ ಅದರ ಅಧ್ಯಕ್ಷೆ ಶೈಲಜಾ ವಿಜಯನ್ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ನ್ಯಾಯಾಲಯ ಪರಿಗಣಿಸಿದ್ದು ಆದರೆ ತುರ್ತು ವಿಚಾರಣೆ ನಡೆಸಲು ನಿರಾಕರಿಸಿದೆ.

ಯಾವುದೇ ಕೇಸಿನಲ್ಲಿ ಪುನರ್ ಪರಿಶೀಲನಾ ಅರ್ಜಿಯನ್ನು ನ್ಯಾಯಾಲಯದ ಕೋಣೆಯೊಳಗೆ ವಿಚಾರಣೆ ನಡೆಸಲು ಸಾಧ್ಯವಾಗುತ್ತದೆಯೇ ಹೊರತು ಮುಕ್ತ ನ್ಯಾಯಾಲಯದಲ್ಲಿ ಬಹಿರಂಗವಾಗಿ ಅಲ್ಲ ಎಂದು ಹೇಳಿರುವ ನ್ಯಾಯಪೀಠ ನ್ಯಾಯಾಲಯದ ಕೇಸುಗಳ ವಿಚಾರಣೆ ಪಟ್ಟಿಯಲ್ಲಿ ಈ ಅರ್ಜಿಯನ್ನು ಕೂಡ ಸೇರಿಸಲಾಗುವುದು ಎಂದು ಹೇಳಿದೆ. ಶೈಲಜಾ ವಿಜಯನ್ ಪರ ನ್ಯಾಯಾಲಯದಲ್ಲಿ ವಾದಿಸುತ್ತಿರುವ ವಕೀಲ ಮ್ಯಾಥ್ಯೂಸ್ ಜೆ ನೆಡುಂಪರ ಅರ್ಜಿಯಲ್ಲಿ ಅಕ್ಟೋಬರ್ 16ರಂದು ತೀರ್ಥಯಾತ್ರೆ ಇರುವುದರಿಂದ ಸುಪ್ರೀಂ ಕೋರ್ಟ್ ನ ತೀರ್ಪಿಗೆ ತಡೆ ತರಬೇಕೆಂದು ಒತ್ತಾಯಿಸಿದ್ದರು. ಅಯ್ಯಪ್ಪ ಭಕ್ತರ ಒಕ್ಕೂಟ ಮಾತ್ರವಲ್ಲದೆ ಕೇರಳದ ನಾಯರ್ ಸರ್ವಿಸ್ ಸೊಸೈಟಿ ಕೂಡ ಸುಪ್ರೀಂ ಕೋರ್ಟ್ ನ ಸೆಪ್ಟೆಂಬರ್ 28ರ ತೀರ್ಪಿಗೆ ತಡೆ ನೀಡಬೇಕೆಂದು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದೆ.

ಅರ್ಜಿಯನ್ನು ಪರಿಶೀಲಿಸಿದ ನ್ಯಾಯಾಲಯ ಈಗ ಕೋರ್ಟ್ ಗೆ ದಸರಾ ರಜೆ ಇರುವುದರಿಂದ ಅದು ಮುಗಿದ ನಂತರವಷ್ಟೇ ವಿಚಾರಣೆ ಕೈಗೆತ್ತಿಕೊಳ್ಳಲು ಸಾಧ್ಯ ಎಂದು ಹೇಳಿದೆ.ನಾಯರ್ ಸಮುದಾಯ ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ ಅರ್ಜಿಯಲ್ಲಿ, ಅಯ್ಯಪ್ಪ ದೇವರು ನೈಸ್ತಿಕ ಬ್ರಹ್ಮಚಾರಿಯಾಗಿರುವುದರಿಂದ 10ರಿಂದ 50 ವರ್ಷದೊಳಗಿನ ಮಹಿಳೆಯರು ಮತ್ತು ಯುವತಿಯರು ದೇವಾಲಯದೊಳಗೆ ಪ್ರವೇಶಿಸಿ ಪೂಜಿಸಲು ಸಾಧ್ಯವಾಗುವುದಿಲ್ಲ. ಮಹಿಳೆಯರು ಮಾತ್ರ ಅಯ್ಯಪ್ಪ ದೇವರನ್ನು ಪೂಜಿಸುವ ಪದ್ಧತಿ ಕೂಡ ಇಲ್ಲ ಎಂದು ಹೇಳಿದೆ.

About the author

ಕನ್ನಡ ಟುಡೆ

Leave a Comment