ದೇಶ ವಿದೇಶ

ಶರಣಾಗತಿ ಸಂಕೇತವಾಗಿ ಬ್ರಿಟಿಷರಿಗೆ ಒಪ್ಪಿಸಲಾಗಿತ್ತೇ ಕೊಹಿನೂರ್

ಲೂಧಿಯಾನಾ: ಅಮೂಲ್ಯ ರತ್ನ ಕೊಹಿನೂರ್ ವಜ್ರಕ್ಕೆ ಸಂಬಂಧಿಸಿದಂಥ ವಿವಾದ ಮುಗಿಯುವ ಲಕ್ಷಣಗಳೇ ಕಾಣುತ್ತಿಲ್ಲ. ಕೊಹಿನೂರ್ ಬ್ರಿಟಿಷರ ಪಾಲಾಗಿದ್ದು ಹೇಗೆ ಎಂಬ ಬಗ್ಗೆ ಕೇಂದ್ರ ಸರಕಾರದ ಹೇಳಿಕೆಗೆ ವ್ಯತಿರಿಕ್ತ ಅಭಿಪ್ರಾಯ ನೀಡಿರುವ ಕೇಂದ್ರ ಪ್ರಾಚ್ಯ ವಸ್ತು ಸರ್ವೇರಕ್ಷಣಾ ಇಲಾಖೆ  ಶರಣಾಗತಿಯ ಸಂಕೇತವಾಗಿ ಇದನ್ನು ಬ್ರಿಟಿಷರಿಗೆ ಒಪ್ಪಿಸಲಾಗಿತ್ತು ಎನ್ನುವುದರ ಮೂಲಕ ವಿವಾದ ಮತ್ತೆ ಜೀವ ಪಡೆದಿದೆ. ಮಾಹಿತಿ ಹಕ್ಕು ಕಾರ್ಯಕರ್ತ ರೋಹಿತ್ ಸಬರ್ವಾಲ್ ಎಂಬುವವರು ಸಲ್ಲಿಸಿದ್ದ ಅರ್ಜಿಗೆ ಉತ್ತರಿಸಿರುವ ಇಲಾಖೆ ಲಾಹೋರ್ ಮಹಾರಾಜ ಕೊಹಿನೂರ್ ವಜ್ರವನ್ನು ಇಂಗ್ಲೆಂಡಿನ ವಿಕ್ಟೋರಿಯಾ ರಾಣಿಗೆ ನೀಡಿದ್ದರು ಎಂದಿದೆ.

ಏಪ್ರಿಲ್ 2016ರಲ್ಲಿ  ಸರಕಾರ ಕೊಹಿನೂರ್‌ನನ್ನು ಬ್ರಿಟಿಷರು ಬಲವಂತವಾಗಿ ಕಿತ್ತುಕೊಂಡಿಲ್ಲ ಅಥವಾ ಕಳವು ಮಾಡಿಲ್ಲ. ಬದಲಾಗಿ ಪಂಜಾಬ್ ಅನ್ನು ಆಳುತ್ತಿದ್ದ ಮಹಾರಾಜ ರಣಜಿತ್ ಸಿಂಗ್ ಉತ್ತರಾಧಿಕಾರಿಗಳು ಇದನ್ನು ಈಸ್ಟ್ ಈಂಡಿಯಾ ಕಂಪನಿಗೆ ಉಡುಗೊರೆಯಾಗಿ ನೀಡಿದ್ದರು. ಆಂಗ್ಲೋ- ಸಿಖ್ ಯುದ್ಧದ ವೆಚ್ಚಕ್ಕೆ”ಸ್ವಯಂಪ್ರೇರಿತ ಪರಿಹಾರ” ವಾಗಿ ಇದನ್ನು ಹಸ್ತಾಂತರಿಸಲಾಗಿತ್ತು ಎಂದು ಸುಪ್ರೀಂ ಕೋರ್ಟ್‌ಗೆ ಹೇಳಿತ್ತು. ಆದರೆ ಪ್ರಾಚ್ಯ ವಸ್ತು ಇಲಾಖೆ ಸರಕಾರದ ಹೇಳಿಕೆಗೆ ವಿರುದ್ಧವಾಗಿ ಉತ್ತರ ನೀಡಿದೆ.

ಕೊಹಿನೂರ್ ಇಂಗ್ಲೆಂಡ್‌ಗೆ ವರ್ಗಾಯಿಸಲ್ಪಟ್ಟಿದ್ದು ಹೇಗೆ ಎಂದು ಪ್ರಶ್ನಿಸಿ ಸಬರ್ವಾಲ್ ಅರ್ಜಿ ಸಲ್ಲಿಸಿದ್ದರು. ನನಗೆ ನನ್ನ ಅರ್ಜಿಯನ್ನು ಯಾರಿಗೆ ಸಲ್ಲಿಸಬೇಕೆಂಬ ಅರಿವಿರಲಿಲ್ಲ. ಹೀಗಾಗಿ ನಾನು ಪ್ರಧಾನ ಮಂತ್ರಿ ಕಾರ್ಯಾಲಯಕ್ಕೆ ಅದನ್ನು ಕಳುಹಿಸಿದ್ದೆ. ಅವರದನ್ನು ಪುರಾತತ್ವ ಇಲಾಖೆಗೆ ವರ್ಗಾಯಿಸಿದರು ಎಂದಿದ್ದಾರೆ ಸಬರ್ವಾಲ್. ಕೊಹಿನೂರ್ ವಜ್ರ ಭಾರತದಿಂದ ಇಂಗ್ಲೆಂಡ್‌ಗೆ ಉಡುಗೊರೆಯಾಗಿ ರೂಪದಲ್ಲಿ ಹೋಗಿತ್ತೇ ಅಥವಾ ವರ್ಗಾವಣೆಗೆ ಬೇರೆ ಏನಾದರೂ ಕಾರಣಗಳಿವೆಯೇ? ಎಂದು ಅರ್ಜಿಯಲ್ಲಿ ಪ್ರಶ್ನಿಸಲಾಗಿತ್ತು. ಅದಕ್ಕೆ ಉತ್ತರಿಸಿದ ಪುರಾತತ್ವ ಇಲಾಖೆ 1849ರಲ್ಲಿ ಮಹಾರಾಜ ದುಲೀಪ್ ಸಿಂಗ್ ಮತ್ತು ಲಾರ್ಡ್ ಡಾಲ್‌ಹೌಸಿ ನಡುವೆ ಲಾಹೋರ್ ಒಪ್ಪಂದವಾಯಿತು. ಆ ಸಂದರ್ಭದಲ್ಲಿ ಮಹಾರಾಜ ವಜ್ರವನ್ನು ಇಂಗ್ಲೆಂಡ್ ರಾಣಿಗೆ ಒಪ್ಪಿಸಿದ್ದರು. ಆ ಸಮಯದಲ್ಲಿ ಅಪ್ರಾಪ್ತರಾಗಿದ್ದ ದುಲೀಪ್ ಸಿಂಗ್ ಮನಃಪೂರ್ವಕವಾಗಿ ವಜ್ರವನ್ನು ಬ್ರಿಟಿಷರಿಗೆ ಒಪ್ಪಿಸಿರಲಿಲ್ಲ. ಬದಲಾಗಿ ಒಪ್ಪಂದದ ಅನ್ವಯ ನೀಡಿದ್ದರು , ಎಂದಿದೆ. ಇತ್ತೀಚಿಗೆ ನಾನೊಬ್ಬ ಬ್ರಿಟಿಷ್ ಪ್ರಜೆಯನ್ನು ಭೇಟಿಯಾಗಿದ್ದೆ. ಕೊಹಿನೂರ್ ನಮ್ಮ ರಾಣಿಗೆ ಬಂದ ಉಡುಗೊರೆ ಎಂದವರು ಹೇಳಿದ್ದರು. ಅದೇ ದಿನ ನಾನು ಈ ಕುರಿತು ಹೆಚ್ಚಿನ ಮಾಹಿತಿ ಸಂಗ್ರಹಿಸಲು ನಿರ್ಧರಿಸಿದೆ. ಮಹಾರಾಜ ದುಲೀಪ್ ಸಿಂಗ್ 9 ವರ್ಷದ ಬಾಲಕನಾಗಿದ್ದಾಗ ಬ್ರಿಟಿಷರು ಕೊಹಿನೂರ್ ವಜ್ರವನ್ನು ಅವನಿಂದ ತೆಗೆದುಕೊಂಡು ಹೋದರು ಎಂದು ಮಹಾರಾಜ ದುಲೀಪ್ ಸಿಂಗ್ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಕೋಠಿ ಬಸ್ಸಿಯನ್ ಮತ್ತು ಕವಿ ಗುರ್ಭಜನ್ ಸಿಂಗ್ ಗಿಲ್ ಸಹ ಹೇಳುತ್ತಲೇ ಬಂದಿದ್ದಾರೆ ಎಂದು ಸಬರ್ವಾಲ್ ಹೇಳಿದ್ದಾರೆ.

About the author

ಕನ್ನಡ ಟುಡೆ

Leave a Comment