ರಾಷ್ಟ್ರ ಸುದ್ದಿ

ಶಾಹಿದ್ ಅಫ್ರಿದಿ ಹೇಳಿಕೆ ಸತ್ಯ, ಪಾಕಿಸ್ತಾನವನ್ನೇ ನಿಭಾಯಿಸದವರು, ಕಾಶ್ಮೀರವನ್ನು ಹೇಗೆ ಸಂಭಾಳಿಸುತ್ತಾರೆ: ಗೃಹ ಸಚಿವ ರಾಜನಾಥ್ ಸಿಂಗ್

ನವದೆಹಲಿ: ಪಾಕಿಸ್ತಾನ ಸರ್ಕಾರದಿಂದ ಕಾಶ್ಮೀರದ ಕೇವಲ ನಾಲ್ಕೇ ನಾಲ್ಕು ಪ್ರಾಂತ್ಯಗಳನ್ನೂ ಸಂಭಾಳಿಸಲು ಸಾಧ್ಯವಿಲ್ಲ ಎಂದಿದ್ದ ಪಾಕ್ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಹೇಳಿಕೆಗೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಬೆಂಬಲ ಸೂಚಿಸಿದ್ದಾರೆ.
ಈ ಬಗ್ಗೆ ಛತ್ತೀಸ್ ಗಢದ ರಾಜಧಾನಿ ರಾಯ್ ಪುರ್ ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪಾಕಿಸ್ತಾನಕ್ಕೆ ನಿಜವಾಗಿಯೂ ಕಾಶ್ಮೀರ ಬೇಕಿಲ್ಲ. ಆದರೆ ರಾಜಕೀಯ ಉದ್ದೇಶದಿಂದ ಕಾಶ್ಮೀರ ವಿಚಾರವನ್ನು ಹಿಡಿದು ಜಗ್ಗಾಡುತ್ತಿದೆ. ಪಾಕಿಸ್ತಾನದ ಕ್ರಿಕೆಟಿಗ ಶಾಹಿದ್ ಅಫ್ರಿದಿ ಹೇಳಿಕೆ ಸರಿಯಾಗಿದೆ. ಪಾಕಿಸ್ತಾನವನ್ನೇ ಸರಿಯಾಗಿ ನಿಭಾಯಿಸದ ಅವರು ಕಾಶ್ಮೀರವನ್ನು ಹೇಗೆ ಸಂಭಾಳಿಸುತ್ತಾರೆ. ಕಾಶ್ಮೀರ ಎಂದೆಂದಿಗೂ ಭಾರತ ದೇಶದ ಅವಿಭಾಜ್ಯ ಅಂಗವಾಗಿರುತ್ತದೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ. ನಿನ್ನೆಯಷ್ಟೇ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ದುಬೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪಾಕಿಸ್ತಾನ ಕಾಶ್ಮೀರಕ್ಕಾಗಿ ಬೇಡಿಕೆ ಇಡಬಾರದು. ಪಾಕ್ ಗೆ ಕಾಶ್ಮೀರದ ನಾಲ್ಕೇ ನಾಲ್ಕು ಪ್ರಾಂತ್ಯಗಳನ್ನೂ ಆಳುವ ಶಕ್ತಿ ಇಲ್ಲ. ಅಲ್ಲದೆ ಕಾಶ್ಮೀರವನ್ನು ಸಮರ್ಥವಾಗಿ ಆಳುವ ತಾಕತ್ತು ಇಲ್ಲ. ಪಾಕಿಸ್ತಾನ ದೇಶವನ್ನು ಏಕೀಕರಿಸಲು ಹಾಗೂ ಉಗ್ರಗಾಮಿಗಳಿಂದ ಸುರಕ್ಷಿತವಾಗಿರಿಸುವಲ್ಲಿ ವಿಫಲವಾಗಿದೆ. ಇನ್ನು ಕಾಶ್ಮೀರದಲ್ಲಿ ಜನರು ಸಾಯುತ್ತಿದ್ದಾರೆ ಇವುಗಳನ್ನು ನೋಡುತ್ತಿದ್ದರೆ ಮನಸ್ಸಿಗೆ ನೋವುಂಟಾಗುತ್ತದೆ. ಪಾಕಿಸ್ತಾನಕ್ಕೆ ಕಾಶ್ಮೀರ ಬೇಡ. ಆಗಂತ ಭಾರತಕ್ಕೆ ಕಾಶ್ಮೀರವನ್ನು ಬಿಟ್ಟುಕೊಡುವುದು ಬೇಡ. ಕಾಶ್ಮೀರವನ್ನು ಸ್ವಾತಂತ್ರ ದೇಶ ಮಾಡಿ. ಅಲ್ಲಿನ ಜನರು ಸಾಯುವುದು ಬೇಡ. ಮನುಷ್ಯತ್ವ ಜೀವಂತವಾಗಿರಬೇಕು ಎಂದು ಹೇಳಿದ್ದರು.
ಶಾಹಿದ್ ಅಫ್ರಿದಿ ಹೇಳಿಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕ್ ಸರ್ಕಾರ ಹಾಗೂ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಮುಜುಗರ ಉಂಟು ಮಾಡಿದ್ದು, ಅಫ್ರಿದಿ ಹೇಳಿಕೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

About the author

ಕನ್ನಡ ಟುಡೆ

Leave a Comment