ರಾಜ್ಯ ಸುದ್ದಿ

ಶಿಕ್ಷಕರ ವರ್ಗಾವಣೆ ಸೇವಾವಧಿ ಇಳಿಕೆ

ಬೆಂಗಳೂರು: ಶಿಕ್ಷಕರ ವರ್ಗಾವಣೆಗೆ ಸಂಬಂಧಿಸಿದಂತೆ ನಾನಾ ವೃಂದಗಳ ವಲಯಗಳಲ್ಲಿನ ವರ್ಗಾವಣೆ ಸೇವಾವಧಿಯನ್ನು 5 ವರ್ಷಗಳಿಂದ 3 ವರ್ಷಗಳಿಗೆ ಇಳಿಸುವುದು ಹಾಗೂ ಕಡ್ಡಾಯ ವರ್ಗಾವಣೆಯಿಂದ ಕೆಲವೊಂದು ಪ್ರಕರಣಗಳಲ್ಲಿ ವಿನಾಯಿತಿ ನೀಡುವ ತೀರ್ಮಾನವನ್ನು ಸಚಿವ ಸಂಪುಟ ಸಭೆ ಗುರುವಾರ ಕೈಗೊಂಡಿದೆ.

ಶಿಕ್ಷಕರ ವರ್ಗಾವಣೆ ಸಮಸ್ಯೆ ತಗ್ಗಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಸಿವಿಲ್‌ ಸೇವೆಗಳ ಶಿಕ್ಷಕರ ವರ್ಗಾವಣೆ ನಿಯಂತ್ರಣ ತಿದ್ದುಪಡಿ ವಿಧೇಯಕ -2018” ವನ್ನು ಬೆಳಗಾವಿ ಅಧಿವೇಶನದಲ್ಲಿ ಮಂಡಿಸಲಾಗಿತ್ತಾದರೂ ವಿಧೇಯಕಕ್ಕೆ ಇನ್ನೂ ಅನುಮೋದನೆ ದೊರೆತಿಲ್ಲ. ಹೀಗಾಗಿ, ಸಚಿವ ಸಂಪುಟ ಸಭೆ ಈ ತೀರ್ಮಾನ ಕೈಗೊಂಡಿದೆ ಎಂದು ಸಂಪುಟ ಸಭೆ ಬಳಿಕ ಸಹಕಾರ ಸಚಿವ ಬಂಡೆಪ್ಪ ಕಾಶಂಪುರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಪತಿ- ಪತ್ನಿ ಪ್ರಕರಣದಲ್ಲಿ ಅವರ ಕುಟುಂಬದವರು ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಲ್ಲಿ ಕಡ್ಡಾಯ ವರ್ಗಾವಣೆಯಿಂದ ವಿನಾಯಿತಿ ನೀಡುವುದು, ಶಿಕ್ಷ ಕರ ಪತಿ ಅಥವಾ ಪತ್ನಿ ಸರಕಾರಿ ಅಥವಾ ಸಾರ್ವಜನಿಕ ಉದ್ಯಮದಲ್ಲಿ ಸೇವೆ ಸಲ್ಲಿಸುತ್ತಿದ್ದರೆ, ಅದೇ ಸ್ಥಳಕ್ಕೆ ವರ್ಗಾವಣೆ ಮಾಡಲು ಅವಕಾಶ ಕಲ್ಪಿಸುವ ಪ್ರಸ್ತಾವನೆಗೂ ಸಂಪುಟ ಒಪ್ಪಿಗೆ ನೀಡಿತು ಎಂದು ಹೇಳಿದರು.

ಮುಂದಿನ ಶೈಕ್ಷಣಿಕ ವರ್ಷ ಆರಂಭದ ವೇಳೆಗೆ ವಿದ್ಯಾರ್ಥಿಗಳಿಗೆ ಶಾಲಾ ಸಮವಸ್ತ್ರ ಪೂರೈಸಲು ನಿರ್ಧರಿಸಲಾಗಿದ್ದು, 1 ರಿಂದ 10ನೇ ತರಗತಿ ವರೆಗಿನ ಒಟ್ಟು 44.57 ಲಕ್ಷ ಮಕ್ಕಳಿಗೆ ಶಾಲಾ ಸಮವಸ್ತ್ರ ಪೂರೈಕೆ ಸಂಬಂಧ ಟೆಂಡರ್‌ ಪ್ರಕ್ರಿಯೆ ಆರಂಭಿಸಲು ಸಂಪುಟ ಸಭೆ ನಿರ್ಧರಿಸಿತು ಎಂದು ತಿಳಿಸಿದರು.

ಇದೇ ತಿಂಗಳು ಜಂಟಿ ಅಧಿವೇಶನ : ರಾಜ್ಯ ವಿಧಾನಮಂಡಲ ಜಂಟಿ ಅಧಿವೇಶನವನ್ನು ಇದೇ ತಿಂಗಳು ನಡೆಸಲು ಸಚಿವ ಸಂಪುಟ ತೀರ್ಮಾನ ಕೈಗೊಂಡಿದ್ದು, ದಿನಾಂಕವನ್ನು ಅಂತಿಮಗೊಳಿಸುವ ಅಧಿಕಾರವನ್ನು ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ನೀಡಲಾಗಿದೆ. ಒಂದೆರಡು ದಿನಗಳಲ್ಲಿ ಸಿಎಂ ನಿರ್ಧಾರ ಪ್ರಕಟಿಸಲಿದ್ದಾರೆ ಎಂದು ತಿಳಿಸಿದರು.

ಷಡಕ್ಷರಿಸ್ವಾಮಿ ಕೆಪಿಎಸ್ಸಿ ಹಂಗಾಮಿ ಅಧ್ಯಕ್ಷ : ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಸ್ಥಾನ ಖಾಲಿ ಉಳಿದಿದ್ದು, ಕಾಯಂ ಅಧ್ಯಕ್ಷರನ್ನು ನೇಮಕ ಮಾಡುವ ಅಧಿಕಾರವನ್ನು ಸಿಎಂಗೆ ಸಂಪುಟ ಸಭೆ ನೀಡಿದೆ. ಕಾಯಂ ಅಧ್ಯಕ್ಷರು ನೇಮಕಗೊಳ್ಳುವ ವರೆಗೆ ಹಾಲಿ ಸದಸ್ಯ ಷಡಕ್ಷರಸ್ವಾಮಿ ಅವರನ್ನು ಹಂಗಾಮಿ ಅಧ್ಯಕ್ಷರಾಗಿ ನೇಮಕ ಮಾಡಲು ಸಂಪುಟ ನಿರ್ಧರಿಸಿತು ಎಂದು ಬಂಡೆಪ್ಪ ಹೇಳಿದರು.

ಸಂಪುಟದ ಇನ್ನಿತರ ತೀರ್ಮಾನಗಳು :ಬೆಟ್ಟ ಕುರುಬ ಜಾತಿಯನ್ನು ರಾಜ್ಯದ ಪರಿಶಿಷ್ಟ ಪಂಗಡ ಪಟ್ಟಿಯ ‘ಕಾಡು ಕುರುಬ’ ಜಾತಿಗೆ ಸಮಾನಾಂತರವಾಗಿ ಸೇರಿಸಲು ಕೇಂದ್ರಕ್ಕೆ ಶಿಫಾರಸು,

ಗ್ರಾಮ ಪಂಚಾಯಿತಿಗಳಲ್ಲಿ ಗ್ರೇಡ್‌ -2 ಪಿಡಿಒ ಗಳಾಗಿ 2014ಕ್ಕೆ ಮುನ್ನ ನೇಮಕಗೊಂಡಿರುವ ಸುಮಾರು 1000 ಮಂದಿಗೆ ಎಸ್ಸೆಸ್ಸೆಲ್ಸಿ ಶೈಕ್ಷಣಿಕ ಅರ್ಹತೆ ಆಧರಿಸಿಯೇ ಬಡ್ತಿ,

ರಾಜ್ಯದ ವಿವಿಧ ಭಾಗಗಳಲ್ಲಿ ಖಾಸಗಿ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಒಟ್ಟು 60 ನಾಡ ಕಚೇರಿಗಳಿಗೆ ಸ್ವಂತ ಕಟ್ಟಡ,

2018 -19ನೇ ಸಾಲಿಗೆ ಐಸಿಡಿಎಸ್‌ ಯೋಜನೆಯಡಿ ಅಂಗನವಾಡಿ ಕೇಂದ್ರಗಳಿಗೆ 9.63 ಕೋಟಿ ರೂ. ವೆಚ್ಚದಲ್ಲಿ ಔಷಧಿ ಕಿಟ್‌,

2018 -19ನೇ ಸಾಲಿನಲ್ಲಿ ಐಸಿಡಿಎಸ್‌ ಯೋಜನೆಯಡಿ ಅಂಗನವಾಡಿ ಕೇಂದ್ರಗಳಿಗೆ 19.77 ಕೋಟಿ ರೂ. ವೆಚ್ಚದಲ್ಲಿ ಶಾಲಾ ಪೂರ್ವ ಶಿಕ್ಷಣ ಕಿಟ್‌,

ಹಾಸನ ಜಿಲ್ಲೆ ಶಾಂತಿಗ್ರಾಮದಲ್ಲಿ ಜೈಲು ನಿರ್ಮಾಣಕ್ಕೆ 40 ಎಕರೆ ಗೋಮಾಳ ಭೂಮಿ ಮಂಜೂರು,

ಆಲಮಟ್ಟಿ ಅಣೆಕಟ್ಟೆ 1ನೇ ಪ್ಯಾಕೇಜ್‌ಗೆ ಸಂಬಂಧಿಸಿದಂತೆ ಹೆಚ್ಚುವರಿ ವೆಚ್ಚ ಭರಿಸುವ ಸಂಬಂಧ 7.66 ಕೋಟಿ ರೂ. ಮೊತ್ತಕ್ಕೆ ಅನುಮೋದನೆ,

ವಿಜಯಪುರದ ತಿಕೋಟಾ ಮತ್ತು ಇತರ 23 ಗ್ರಾಮಗಳ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ 73.62 ಕೋಟಿ ರೂ.ಯೋಜನೆ,

ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದಿಂದ 94.80 ಕೋಟಿ ರೂ. ವೆಚ್ಚದಲ್ಲಿ ಒಟ್ಟು 88.321 ಎಕರೆ ಪ್ರದೇಶದಲ್ಲಿ ವಸತಿ ಯೋಜನೆ,

ಚಿಕ್ಕಮಗಳೂರು -ಬೇಲೂರು -ಸಕಲೇಶಪುರ ಹೊಸ ರೈಲ್ವೆ ಮಾರ್ಗ ಯೋಜನೆಗೆ 657.08 ಕೋಟಿ ರೂ. ಮಂಜೂರು,

500 ಕೃಷಿ ಉತ್ಪಾದಕರ ಸಂಘಗಳನ್ನು ರಚಿಸುವ ಸಂಬಂಧ ಬಜೆಟ್‌ ಘೋಷಣೆ ಅನುಷ್ಠಾನ,

ಕುವೆಂಪು ವಿವಿಗೆ ಸಿಂಗನಮನೆ ಮೀಸಲು ಅರಣ್ಯದಿಂದ ಪಡೆದುಕೊಳ್ಳಲಾಗಿದ್ದ ಭೂಮಿಗೆ ಬದಲಾಗಿ ಚಿಕ್ಕಮಗಳೂರು ಬಳಿಯ ಕೆಸವಿನಮನೆ ಗ್ರಾಮದ ಸುತ್ತಮುತ್ತಲಿನ 648 ಎಕರೆ ಭೂಮಿ ಅರಣ್ಯ ಇಲಾಖೆಗೆ ವರ್ಗ.

About the author

ಕನ್ನಡ ಟುಡೆ

Leave a Comment