ರಾಜ್ಯ ಸುದ್ದಿ

ಶೇ.10 ಎನ್​ಆರ್​ಐ ಕೋಟಾ ಆರಂಭ: ಸಚಿವ ಡಿ.ಕೆ.ಶಿವಕುಮಾರ್

ಬೆಳಗಾವಿ: ರಾಜ್ಯದ ಸರ್ಕಾರಿ ಮೆಡಿಕಲ್ ಕಾಲೇಜು ಗಳಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದಲೇ ಅನಿವಾಸಿ ಭಾರತೀಯ (ಎನ್​ಆರ್​ಐ) ಕೋಟಾದಲ್ಲಿ ವೈದ್ಯಕೀಯ ಸೀಟುಗಳನ್ನು ಶೇ.10 ಹಂಚಿಕೆ ಮಾಡಲು ಸರ್ಕಾರ ನಿಯಮ ರೂಪಿಸಲಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ಪ್ರಕಟಿಸಿದರು.

ಪರಿಷತ್​ನಲ್ಲಿ ಬಿಜೆಪಿ ಸದಸ್ಯ ಎಸ್.ವಿ. ಸಂಕನೂರ್ ಪ್ರಶ್ನೆಗೆ ಉತ್ತರಿಸಿದ ಅವರು, ಎನ್​ಆರ್​ಐಗಳಿಗೆ ಮೆಡಿ ಕಲ್ ಸೀಟು ಹಂಚಿಕೆ ಮೂಲಕ ಆರ್ಥಿಕವಾಗಿ ಸರ್ಕಾರಿ ಮೆಡಿಕಲ್ ಕಾಲೇಜುಗಳನ್ನು ಬಲಪಡಿಸಬಹುದಾಗಿದೆ. ಎನ್​ಆರ್​ಐ ಕೋಟಾದಲ್ಲೂ ಕನ್ನಡಿಗ ಎನ್​ಆರ್​ಐಗಳಿಗೆ ಸೀಟು ಹಂಚಿಕೆ ಮಾಡಿ, ಹೆಚ್ಚುವರಿ ಸೀಟುಗಳನ್ನು ಇತರ ರಾಜ್ಯದ ಎನ್​ಆರ್​ಐಗಳಿಗೆ ನೀಡುವ ನಿಯಮ ರಚಿಸಲಾಗುವುದು ಎಂದರು. ಸರ್ಕಾರಿ ಮೆಡಿಕಲ್ ಕಾಲೇಜುಗಳಲ್ಲಿ ಪದವಿ ವರ್ಗಗಳಿಗೆ 50 ಸಾವಿರ ರೂ. ಹಾಗೂ ಸ್ನಾತಕ ಪದವಿಗಳಿಗೆ 3 ಲಕ್ಷ ರೂ. ಶುಲ್ಕ ವಿಧಿಸಲು ತೀರ್ವನಿಸಲಾಗಿದೆ. ಇದರಿಂದ ಕಾಲೇಜುಗಳಿಗೆ ಹೆಚ್ಚಿನ ಆದಾಯ ನಿರೀಕ್ಷಿಸಲಾಗಿದೆ ಎಂದು ಡಿಕೆಶಿ ತಿಳಿಸಿದರು.

ಎನ್​ಪಿಎಸ್​ಗೆ ಆಗ್ರಹ: ಎನ್​ಪಿಎಸ್ ಯೋಜನೆಯಲ್ಲಿ ಪಿಂಚಣಿ ನೀಡುವ ಸೌಲಭ್ಯ 12 ವರ್ಷಗಳ ಹಿಂದೆಯೇ ಆರಂಭವಾಗಿದ್ದರೂ ಸರ್ಕಾರಿ ಮೆಡಿಕಲ್ ಕಾಲೇಜುಗಳ ಪ್ರಾಧ್ಯಾಪಕರು ಮತ್ತು ಸಿಬ್ಬಂದಿಗೆ ಈ ಸವಲತ್ತು ನೀಡುತ್ತಿಲ್ಲ. ಹೀಗಾಗಿ ಈ ನೌಕರರ ಭವಿಷ್ಯ ತೂಗುಯ್ಯಾಲೆಯಲ್ಲಿದೆ ಎಂದು ಎಸ್.ವಿ.ಸಂಕನೂರ್ ಹೇಳಿದರು. ಇದಕ್ಕೆ ದನಿಗೂಡಿಸಿದ ಆಯನೂರು ಮಂಜುನಾಥ್, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಲ್ಲೇ ಹೀಗೆ ತಾರತಮ್ಯ ಮಾಡುತ್ತಿರುವುದು ಸರಿಯಲ್ಲ ಎಂದರು. ಇದಕ್ಕುತ್ತರಿಸಿದ ಸಚಿವ ಡಿ.ಕೆ.ಶಿವಕುಮಾರ್, ಈ ಸಂಬಂಧ ಆರ್ಥಿಕ ಇಲಾಖೆಗೆ ಹಲವಾರು ಬಾರಿ ಕೋರಿಕೆ ಸಲ್ಲಿಸಿದರೂ ಒಪ್ಪಿಗೆ ದೊರೆತಿಲ್ಲ. ಹೀಗಾಗಿ ಸಂಪನ್ಮೂಲ ಕ್ರೋಡೀಕರಣಕ್ಕೆ ಒತ್ತು ನೀಡಬೇಕಿದ್ದು, ಎನ್​ಆರ್​ಐ ಕೋಟಾ ಆರಂಭಿಸಿ ಸರ್ಕಾರಿ ಮೆಡಿಕಲ್ ಕಾಲೇಜುಗಳನ್ನು ಆರ್ಥಿಕವಾಗಿ ಬಲಪಡಿಸಲಾಗುವುದು ಎಂದರು.

About the author

ಕನ್ನಡ ಟುಡೆ

Leave a Comment