ರಾಜ್ಯ ಸುದ್ದಿ

ಶ್ರೀ ಶಿವಕುಮಾರ ಸ್ವಾಮೀಜಿಗಳನ್ನು ಮಠಕ್ಕೆ ವರ್ಗಾಯಿಸುವ ವಿಚಾರ; ಇನ್ನೂ ನಿರ್ಧಾರಕ್ಕೆ ಬಾರದ ಅಧಿಕಾರಿಗಳು

ತುಮಕೂರು: ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿಲ್ಲವಾದ್ದರಿಂದ ಮಠದ ಅಧಿಕಾರಿಗಳು ಮತ್ತು ವೈದ್ಯರು ಶ್ರೀಗಳಿಗೆ ಸಿದ್ದಗಂಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಬೇಕೆ ಅಥವಾ ಮಠಕ್ಕೆ ವರ್ಗಾಯಿಸಬೇಕೆ ಎಂಬ ಸಂದಿಗ್ಧತೆಯಲ್ಲಿ ಸಿಲುಕಿದ್ದಾರೆ.ನಿನ್ನೆ ಜಿಲ್ಲಾಡಳಿತದ ಅಧಿಕಾರಿಗಳು ಮಠದಲ್ಲಿ ಸಭೆ ನಡೆಸಿದ್ದರು. ಶಿವಕುಮಾರ ಸ್ವಾಮಿಗಳು ಯಾವಾಗಲೂ ಮಠದಲ್ಲಿಯೇ ಇರಲು ಇಚ್ಛಿಸುತ್ತಾರೆ ಎಂದು ಕಿರಿಯ ಶ್ರೀಗಳಾದ ಸಿದ್ದಲಿಂಗ ಸ್ವಾಮೀಜಿ ಹೇಳಿದರು.

ಆದರೆ ಇನ್ನೂ ಅವರನ್ನು ಆಸ್ಪತ್ರೆಯಲ್ಲಿ ಇರಿಸಿ ಚಿಕಿತ್ಸೆ ಮುಂದುವರಿಸುವುದೇ ಅಥವಾ ಮಠಕ್ಕೆ ಕರೆದುಕೊಂಡು ಹೋಗುವುದೇ ಎಂಬ ಬಗ್ಗೆ ನಿರ್ಧಾರವಾಗಿಲ್ಲ ಎಂದು ಹೇಳಿದರು.ಚೆನ್ನೈಯ ಡಾ ರೇಲಾ ಸಂಸ್ಥೆಯಲ್ಲಿ ಯಕೃತ್ತಿನ ಬೈಪಾಸ್ ಶಸ್ತ್ರಚಿಕಿತ್ಸೆಯಾದ ನಂತರ ಶ್ರೀಗಳನ್ನು ಮಠಕ್ಕೆ ವರ್ಗಾಯಿಸುವಂತೆ ಮಠದ ಭಕ್ತರು ಕೂಡ ಆಗಿರುವ ಡಾ ಶಿವಪ್ಪ ಸೂಚಿಸಿದ್ದರು. ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಮತ್ತು ಎಸ್ಪಿ ಕೋನಾ ವಂಶಿ ಕೃಷ್ಣ ಕೂಡ ನಿನ್ನೆ ಮಠಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲು ಅಧಿಕಾರಿಗಳು ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಎಸ್ಪಿ ಹೇಳಿದರು. ಶ್ವಾಸಕೋಶದಲ್ಲಿ ನೀರು ತುಂಬಿರುವುದರಿಂದ ಸಿದ್ದಗಂಗಾ ಶ್ರೀಗಳಿಗೆ ಇದೀಗ ಉಸಿರಾಟದಲ್ಲಿ ತೀವ್ರ ಸಮಸ್ಯೆಯುಂಟಾಗಿದೆ.

About the author

ಕನ್ನಡ ಟುಡೆ

Leave a Comment