ರಾಜ್ಯ ಸುದ್ದಿ

ಶ್ರೀ ಶಿವಕುಮಾರ ಸ್ವಾಮೀಜಿಯವರ ಅಂತ್ಯಕ್ರಿಯೆಗೆ ಶ್ರೀಮಠದಲ್ಲಿ ಸಕಲ ಸಿದ್ಧತೆ

ತುಮಕೂರು: ನಿನ್ನೆ ಲಿಂಗೈಕ್ಯರಾದ ಸಿದ್ದಗಂಗಾ ಶ್ರೀ ಶಿವಕುಮಾರ ಸ್ವಾಮೀಜಿಯವರ ಅಂತ್ಯಕ್ರಿಯೆ ಇಂದು ನೆರವೇರಲಿದ್ದು, ಮಠದ ಆವರಣದಲ್ಲಿನ ಕ್ರಿಯಾ ಸಮಾಧಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ. ಸುತ್ತೂರು ಶ್ರೀಗಳು ಹಾಗೂ ಮಠದ ಕಿರಿಯ ಶ್ರೀ ಸಿದ್ದಲಿಂಗ ಸ್ವಾಮೀಜಿ ಸೇರಿದಂತೆ ಐವರು ಸ್ವಾಮೀಜಿಗಳ ನೇತೃತ್ವದಲ್ಲಿ ಸಂಜೆ 4.30ಕ್ಕೆ ಅಂತಿಮ ವಿಧಿವಿಧಾನ ನಡೆಸಲಾಗುತ್ತದೆ ಎಂದು ತಿಳಿದುಬಂದಿದ್ದು, ರಾಜ್ಯ ಸರ್ಕಾರದಿಂದ ಸಕಲ ಸರ್ಕಾರಿ ಗೌರವಗಳೊಂದಿಗೆ ವೀರಶೈವ ಆಗಮೋಕ್ತ ವಿಧಿವಿಧಾನದ ಪ್ರಕಾರ ನಡೆದಾಡುವ ದೇವರನ್ನು ಬೀಳ್ಕೊಡಲಾಗುತ್ತದೆ.
ಇನ್ನು ಶಿವಕುಮಾರ ಸ್ವಾಮೀಜಿ ಅವರ ಕ್ರಿಯಾಸಮಾಧಿಗೂ ಮುನ್ನ ಒಂದಷ್ಟು ಧಾರ್ಮಿಕ- ವಿಧಿ ವಿಧಾನಗಳು ನಡೆಯಲಿದ್ದು, ಶ್ರೀಗಳ ಅಂತ್ಯಕ್ರಿಯೆ ಕಾರ್ಯಗಳು ಬೆಳಗ್ಗೆ 8 ಗಂಟೆಯಿಂದಲೇ ಆರಂಭವಾಗಲಿದೆ. ಮೊದಲಿಗೆ ಪಾರ್ಥಿವ ಶರೀರದ ಶುದ್ಧೀಕರಣ ಮಾಡಲಾಗು ತ್ತದೆ. ನಂತರ ಕಲಶ ಪೂಜೆ, ಅಷ್ಟದಿಕ್ಪಾಲಕರ ಪೂಜೆ, ಪುಣ್ಯ, ನಂದಿಪೂಜೆ. ಪಂಚಕಳಸ ಪೂಜೆ, ಸಪ್ತರ್ಶಿ ಪೂಜೆ ಸೇರಿದಂತೆ ವಿವಿಧ ಪೂಜೆಗಳನ್ನು ಸಂಪ್ರದಾಯದಂತೆ ನಡೆಸಲಾಗುತ್ತದೆ. ಆ ಬಳಿಕ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ.
ಸಂಜೆ ಗೋಸಲ ಸಿದ್ದೇಶ್ವರ ವೇದಿಕೆಯಿಂದ ಮಠದ ಬೀದಿಯಲ್ಲಿ ಸ್ವಾಮೀಜಿಯವರ ಮೆರವಣಿಗೆ ನಡೆಸಿ ಗದ್ದುಗೆ ಭವನಕ್ಕೆ ಕರೆತರಲಾಗುತ್ತದೆ. ಅಲ್ಲಿ ಗದ್ದುಗೆಗಾಗಿ ಸಿದ್ಧಪಡಿಸಿದ ಹೊಂಡದಲ್ಲಿ ಶ್ರೀಗಳನ್ನು ಕೂರಿಸಲಾಗುತ್ತದೆ. ಇದಕ್ಕೂ ಮೊದಲು ಎರಡು ಕ್ವಿಂಟಾಲ್ ವಿಭೂತಿ, ಉಪ್ಪು ಹಾಕಲಾಗುತ್ತದೆ. ಸ್ವಾಮೀಜಿ ಸಮಾಧಿ ಮಾಡಿದ ಬಳಿಕ ಲಿಂಗ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಒಟ್ಟು ಐದು ಮಂದಿ ಸ್ವಾಮೀಜಿಗಳ ನೇತೃತ್ವದಲ್ಲಿ ಕ್ರಿಯಾ ವಿಧಿಗಳು ನೆರವೇರಲಿದೆ. ಒಟ್ಟು 30 ಮಂದಿ ತಂಡ ಈ ಕ್ರಿಯಾವಿಧಿಯಲ್ಲಿ ಪಾಲ್ಗೊಳ್ಳಲ್ಲಿದ್ದಾರೆ ಎಂದು ಮಠದ ಮೂಲಗಳು ತಿಳಿಸಿವೆ.

About the author

ಕನ್ನಡ ಟುಡೆ

Leave a Comment