ರಾಜ್ಯ ಸುದ್ದಿ

ಸಂಪುಟ ವಿಸ್ತರಣೆ ಮುಂದೂಡಿಕೆ ಸುಳಿವು ನೀಡಿದ ಡಿಸಿಎಂ ಜಿ.ಪರಮೇಶ್ವರ್‌

ಬೆಂಗಳೂರು: ಪಂಚರಾಜ್ಯಗಳ ಚುನಾವಣೆ ಪ್ರಚಾರದಲ್ಲಿ ಪಕ್ಷದ ವರಿಷ್ಠರು ಮುಳುಗಿರುವುದರಿಂದ ಬಹು ನಿರೀಕ್ಷಿತ  ಸಂಪುಟ ವಿಸ್ತರಣೆ ಮತ್ತೊಮ್ಮೆ ಮುಂದೂಡಿಕೆಯಾಗುವ ಸುಳಿವನ್ನು ಡಿಸಿಎಂ ಜಿ.ಪರಮೇಶ್ವರ್‌ ನೀಡಿದ್ದಾರೆ. ಈ ತಿಂಗಳ ಅಂತ್ಯದೊಳಗೇ ಸಂಪುಟ ವಿಸ್ತರಣೆಯಾಗಬಹುದು ಎಂದು ಹೇಳಲಾಗಿತ್ತು. ಇದಕ್ಕಾಗಿ ಸಚಿವ ಸ್ಥಾನದ ಆಕಾಂಕ್ಷಿಗಳೂ ಕಾಯುತ್ತಿದ್ದರು. ಜತೆಗೆ ನಿಗಮ ಮಂಡಳಿ ನೇಮಕವೂ ನಡೆಯುವುದಾಗಿ ಭಾವಿಸಲಾಗಿತ್ತು.

ಆದರೆ, ಈ ಬಗ್ಗೆ ಗುರುವಾರ ಪ್ರತಿಕ್ರಿಯಿಸಿರುವ ಡಿಸಿಎಂ, ”ಸಂಪುಟ ವಿಸ್ತರಣೆ ಸಂಬಂಧ ಈಗಾಗಲೇ ಚರ್ಚೆಯಾಗಿದೆ. ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಚುನಾವಣಾ ಪ್ರವಾಸದಲ್ಲಿದ್ದಾರೆ. ಅವರಿಂದ ಯಾವ ಸೂಚನೆ ಬರುತ್ತದೆ ಎಂದು ನೋಡಿಕೊಂಡು ಮುಂದುವರಿಯಲಾಗುವುದು,” ಎಂದಿದ್ದಾರೆ. ಕಾಂಗ್ರೆಸ್‌ನಲ್ಲಿ ಮಂತ್ರಿಮಂಡಲ ವಿಸ್ತರಣೆಗೆ ಒತ್ತಡವಿದ್ದರೂ ಜೆಡಿಎಸ್‌ನಲ್ಲಿ ಇಂತಹ ಯಾವ ಒತ್ತಡವೂ ಕಾಣುತ್ತಿಲ್ಲ. ಸಂಪುಟ ಸೇರುವವರ ಪಟ್ಟಿಯನ್ನು ತಯಾರಿಸಿ ಕೊಟ್ಟರೆ ನೂತನ ಸಚಿವರ ಪ್ರಮಾಣವಚನಕ್ಕೆ ಮುಹೂರ್ತ ನಿಗದಿ ಮಾಡಲು ಅಡ್ಡಿಯಿಲ್ಲವೆಂದು ಸಿಎಂ ಅಭಿಪ್ರಾಯ ತಿಳಿಸಿದ್ದಾರೆ. ಆದರೆ, ಯಾವುದೇ ಬಿಕ್ಕಟ್ಟು ಎದುರಾಗದಂತೆ ಸಂಪುಟ ವಿಸ್ತರಿಸುವಂತೆ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಕಿವಿಮಾತು ಹೇಳಿದ್ದಾರೆ. ಮಂತ್ರಿಮಂಡಲ ವಿಸ್ತರಿಸಿದರೆ ಇಕ್ಕಟ್ಟು ತಪ್ಪಿದ್ದಲ್ಲ ಎನ್ನುವುದು ಕಾಂಗ್ರೆಸ್‌ ನಾಯಕರಿಗೆ ಅರಿವಿದೆ. ಹಾಗಾಗಿಯೇ ಹೊಸ ಹೊಸ ನೆಪ ಹುಡುಕಿ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ಯತ್ನ ಮಾಡಲಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

About the author

ಕನ್ನಡ ಟುಡೆ

Leave a Comment