ರಾಷ್ಟ್ರ ಸುದ್ದಿ

ಸಂಸತ್ತಿನಲ್ಲಿ ರಫೇಲ್ ಗದ್ದಲ: ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ,ಲೋಕಸಭೆ ಹಾಗೂ ರಾಜ್ಯಸಭೆ ಕಲಾಪ ಮುಂದೂಡಿಕೆ

ನವದೆಹಲಿ: ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದ ಕುರಿತಂತೆ ಸಂಸತ್ತಿನಲ್ಲಿ ಪ್ರತಿಪಕ್ಷಗಳು ಆಡಳಿತಾರೂಢ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದು, ತೀವ್ರ ಗದ್ದಲವುಂಟಾದ ಹಿನ್ನಲೆಯಲ್ಲಿ ಲೋಕಸಭೆ ಹಾಗೂ ರಾಜ್ಯಸಭೆ ಕಲಾಪವನ್ನು ಮಧ್ಯಾಹ್ನಕ್ಕೆ ಮುಂದೂಡಲಾಗಿದೆ.
ರಾಜ್ಯಸಭೆಯಲ್ಲಿ ಮಾತನಾಡಿರುವ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಜಾದ್ ಅವರು, ರಫೇಲ್ ಒಪ್ಪಂದ ಕುರಿತು ತಪ್ಪು ಅಫಿಡವಿಟ್ ನೀಡುವ ಮೂಲಕ ಸರ್ಕಾರ ಸಂಸತ್ತನ್ನು ತಪ್ಪು ಹಾದಿಗೆಳೆಯುತ್ತಿದೆ. ಹಕ್ಕುಚ್ಯುತಿಯನ್ನು ಒಪ್ಪಿಕೊಳ್ಳಬೇಕು. ಸರ್ಕಾರ ಸುಪ್ರೀಂಕೋರ್ಟ್’ನ್ನೂ ತಪ್ಪು ಹಾದಿಗೆಳೆದಿದೆ. ಆಡಳಿತಾರೂಢ ಸರ್ಕಾರ ಇಡೀ ದೇಶವನ್ನು ತಪ್ಪು ಹಾದಿಗೆಳೆದಿದೆ ಎಂದು ಹೇಳಿದರು. ಬಿಜೆಪಿ ರಾಜ್ಯಸಭಾ ಸದಸ್ಯ ವಿಜಯ್ ಗೋಯಲ್ ಅವರು ಮಾತನಾಡಿ, ರಫೇಲ್ ಹಾಗೂ ಸಿಖ್ ಗಳೆ ಕುರಿತಂತೆ ಕಾಂಗ್ರೆಸ್ ವಿರುದ್ಧ ಸುಪ್ರೀಂಕೋರ್ಟ್ ತೀರ್ಪು ನೀಡಿದ್ದು, ಇದೀಗ ಕಾಂಗ್ರೆಸ್ ಚರ್ಚೆಯಿಂದ ಪಲಾಯನ ಮಾಡುತ್ತಿದೆ ಎಂದು ಹೇಳಿದರು.
ಕೇಂದ್ರ ಸಚಿವ ಕಿರಣ್ ರಿಜುಜು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿ, ಕಾಂಗ್ರೆಸ್ ಸದಸ್ಯರು ಸಂಸತ್ತಿನ ಪ್ರಶ್ನಾವಳಿ ಅವಧಿಯನ್ನು ನಾಶಪಡಿಸುತ್ತಿದೆ. ಸರ್ಕಾರ ಉತ್ತಮ ಕಾರ್ಯಗಳಿಗೆ ಅಡ್ಡಿಯುಂಟು ಮಾಡಲು ವಿರೋಧ ಪಕ್ಷಗಳು ಈ ರೀತಿ ಮಾಡುತ್ತಿವೆ ಎಂಬುದು ಎಲ್ಲರಿಗೂ ಅರ್ಥವಾಗುತ್ತಿದೆ. ಆದರೆ, ಪ್ರಶ್ನಾವಳಿ ಅವಧಿಯನ್ನು ನಾಶ ಮಾಡುತ್ತಿದ್ದೇವೆಂಬುದು ಅವರಿಗೆ ಅರ್ಥವಾಗುತ್ತಿಲ್ಲ. ಸಚಿವರನ್ನು ಪ್ರಶ್ನೆ ಮಾಡಲು ಸಂಸದರಿಗೆ ಪ್ರಶ್ನಾವಳಿ ಅವಧಿ ಅತ್ಯಂತ ಮುಖ್ಯವಾದದ್ದು. ಇದು ಅತ್ಯಂತ ಆಸಕ್ತಿದಾಯಕವೂ ಆಗಿರುತ್ತದೆ ಎಂದು ಹೇಳಿದರು.
ಬಳಿಕ ಮಾತನಾಡಿದ ಸಭಾಪತಿ ವೆಂಕಯ್ಯ ನಾಯ್ಡು ಅವರು, ಸಲ್ಲಿಸಲಾಗಿರುವ ಎಲ್ಲಾ ವಿಚಾರಗಳನ್ನು ಅವುಗಲ ಪ್ರಾಮುಖ್ಯತೆ ಹಾಗೂ ಆದ್ಯತೆಯ ಮೇರೆಗೆ ಚರ್ಚೆ ನಡೆಸಲಾಗುತ್ತದೆ ಎಂದರು. ಆದರೂ ಪಟ್ಟು ಬಿಡದ ಕೆಲ ಕಾಂಗ್ರೆಸ್ ನಾಯಕರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಲು ಆರಂಭಿಸಿದರು. ತೀವ್ರ ಗದ್ದಲವುಂಟಾದ ಹಿನ್ನಲೆಯಲ್ಲಿ ಕಲಾಪವನ್ನು ಮಧ್ಯಾಹ್ನಕ್ಕೆ ಮುಂದೂಡಲಾಯಿತು.
ಇದರಂತೆ ಲೋಕಸಭೆಯಲ್ಲಿಯೂ ರಫೇಲ್ ಹಾಗೂ ಕಾವೇರಿ ವಿಚಾರ ಕುರಿತಂತೆ ತೀವ್ರ ಗದ್ದಲವುಂಟಾದ ಹಿನ್ನಲೆಯಲ್ಲಿ ಕಲಾಪವನ್ನು ಮಧ್ಯಾಹ್ನಕ್ಕೆ ಮುಂದೂಡಲಾಗಿದೆ.

About the author

ಕನ್ನಡ ಟುಡೆ

Leave a Comment