ರಾಷ್ಟ್ರ ಸುದ್ದಿ

ಸಂಸದರಿಗಿಂತ ಶಾಲಾ ಮಕ್ಕಳೇ ಉತ್ತಮ: ಸ್ಪೀಕರ್ ಸುಮಿತ್ರಾ ಮಹಾಜನ್ ಆಕ್ರೋಶ

ನವದೆಹಲಿ: ರಾಫೆಲ್‌ ವಿವಾದ ಮುಂದಿಟ್ಟುಕೊಂಡು ಪ್ರತಿಪಕ್ಷಗಳು ಮಂಗಳವಾರವೂ ಸಂಸತ್ತಿನಲ್ಲಿ ಗದ್ದಲ ನಡೆಸಿದ ಪರಿಣಾಮ ಕಲಾಪ ಆರಂಭವಾದ ಕೆಲವೇ ಗಂಟೆಗಳಲ್ಲಿ  ನಾಳೆಗೆ ಮುಂದೂಡಲಾಗಿದೆ. ಇದರಿಂದ ಆಕ್ರೋಶಗೊಂಡ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ‘ಸಂಸದರಿಗಿಂತ ಶಾಲಾ ಮಕ್ಕಳೇ ಉತ್ತಮ’ ಎಂದಿದ್ದಾರೆ.
ಇಂದು ಬೆಳಗ್ಗೆ ಲೋಕಸಭೆ ಆರಂಭವಾಗುತ್ತಿದ್ದಂತೆ ರಾಫೆಲ್ ವಿವಾದ ಪ್ರಸ್ತಾಪಿಸಿದ ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಕೋಲಾಹಲ ಸೃಷ್ಟಿಸಿದವು. ಇದರಿಂದ ಸ್ಪೀಕರ್ ಕೆಲಕಾಲ ಸದನವನ್ನು ಮುಂದೂಡಿದರು. ಪುನಾಃ ಮಧ್ಯಾಹ್ನ ಕಲಾಪ ಆರಂಭವಾದಲೂ ಕಾಂಗ್ರೆಸ್, ಎಐಎಡಿಎಂಕೆ ಮತ್ತು ಡಿಟಿಪಿ ಸಂಸದರು ಸದನದ ಬಾವಿಗೆ ನುಗ್ಗಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ತಾಳ್ಮೆ ಕಳೆದುಕೊಂಡ ಸ್ಪೀಕರ್, ‘ಏಕೆ ಇಷ್ಟೊಂದು ಗದ್ದಲ, ಗಲಾಟೆ ಮಾಡುತ್ತಿದ್ದೀರಿ ? ನಿಮಗಿಂತ ಶಾಲೆಯ ಮಕ್ಕಳೇ ವಾಸಿ’ ಎಂದರು.
‘ಭಾರತೀಯ ಸಂಸತ್ತಿನಲ್ಲಿ ಅದೇನು ನಡೆಯುತ್ತಿದೆ ಎಂದು ಹೊರ ದೇಶದವರು ಪ್ರಶ್ನಿಸುವುದನ್ನು ನಾನು ಕೇಳಿದ್ದೇನೆ. ನಿಮ್ಮ ಈ ರೀತಿಯ ಗದ್ದಲ, ಗಲಾಟೆ ಮತ್ತು ಅರಾಜಕ ವರ್ತನೆ ಹೊರಗಿನವರಿಗೆ ಕೆಟ್ಟ ಸಂದೇಶ ನೀಡುತ್ತದೆ ಎನ್ನುವುದನ್ನು ಮರೆಯಬೇಡಿ’ ಎಂದು ಮಹಾಜನ್‌ ಗದ್ದಲ ನಿರತ ಸಂಸದರಿಗೆ ಎಚ್ಚರಿಕೆ ನೀಡಿದರು. ರಾಫೆಲ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟಿಗೆ ಸುಳ್ಳು ಮಾಹಿತಿ ನೀಡಿದೆ. ಹೀಗಾಗಿ ರಾಫೆಲ್ ಹಗರಣವನ್ನು ಜೆಪಿಸಿ ತನಿಖೆಗೆ ಆದೇಶಿಸಬೇಕು ಎಂದು ಕಾಂಗ್ರೆಸ್‌ ಸಂಸದರು ಒತ್ತಾಯಿಸಿದರು. ಎಐಎಡಿಎಂಕೆ ಸಂಸದರು ಮೇಕೆದಾಟು ವಿಚಾರವಾಗಿ ಹಾಗೂ ಟಿಡಿಪಿ ಸಂಸದರು ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನದ ವಿಚಾರ ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

About the author

ಕನ್ನಡ ಟುಡೆ

Leave a Comment