ರಾಜ್ಯ ಸುದ್ದಿ

ಸಚಿವೆ ಜಯಮಾಲಾ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರಿಂದಲೇ ಬಹಿರಂಗ ಆಕ್ರೋಶ

ಉಡುಪಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಜಯಮಾಲಾ ನಗರದಲ್ಲಿದ್ದರೂ ಕೂಡ ಗಾಂಧಿ ಜಯಂತಿ ಆಚರಣೆ ಕಾರ್ಯಕ್ರಮಕ್ಕೆ ಬಾರದ ಪ್ರಸಂಗ ನಡೆಯಿತು. ಈ ಬಗ್ಗೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವೆ ಜಯಮಾಲಾ ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.”ಗಾಂಧೀಜಿಯವರನ್ನು ನೆನಪಿಸಿಕೊಳ್ಳಲು ನಿರ್ದಿಷ್ಟ ಸ್ಥಳ, ಸಮಯ ಬೇಕೆಂದೇನಿಲ್ಲ. ಪ್ರತಿಯೊಂದು ಕಡೆಯಲ್ಲಿಯೂ ಮಹಾತ್ಮಾ ಗಾಂಧಿಯವರನ್ನು ನೆನಪಿಸಿಕೊಳ್ಳಬಹುದು ಎಂದ ಸಚಿವೆ ಜಯಮಾಲಾ ಇತರ ಸಂಸದರು ಮತ್ತು ಜಿಲ್ಲಾ ನಾಯಕರ ಅನುಪಸ್ಥಿತಿ ಬಗ್ಗೆ ಕೂಡ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ರಾಜ್ಯದಲ್ಲಿ ರೈತರ ಆತ್ಮಹತ್ಯೆಗೆ ಕುರಿತಾದ ವಿಚಾರಕ್ಕೆ ಸಹ ಉಡಾಫೆಯ ಉತ್ತರ ನೀಡಿ ಆಕ್ರೋಶಕ್ಕೆ ಗುರಿಯಾದರು. ರೈತರ ಆತ್ಮಹತ್ಯೆಯ ಕುರಿತು ಸುದ್ದಿಗಾರರು ಪ್ರಶ್ನಿಸಿದಾಗ, ರಾಜ್ಯದಲ್ಲಿ ಎಷ್ಟು ಪರ್ಸಂಟೇಜ್ ಎಷ್ಟು ಜನ ರೈತರು ಹೋದರು? ಎಂದು ಮಾಧ್ಯಮಗಳನ್ನೇ ಮರು ಪ್ರಶ್ನೆ ಮಾಡಿದರು.

ಇದಲ್ಲದೇ ರೈತರದ್ದು ಯಾವ ಕಾರಣಕ್ಕೆ ಆತ್ಮಹತ್ಯೆ ಆಯ್ತೋ ಗೊತ್ತಿಲ್ಲ? ಒಂದೆರಡು ಆತ್ಮಹತ್ಯೆಯಾದಾಗ ಅದರ ಸಮೀಕ್ಷೆ ನಡೆಯಬೇಕು ಎನ್ನುವ ಮೂಲಕ ಉಡಾಫೆಯ ಉತ್ತರವನ್ನು ನೀಡಿದ್ದಾರೆ.ರೈತರಿಗೆ ಶಕ್ತಿಮೀರಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರ ಸಹಾಯ ಮಾಡಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ರಾಜ್ಯದ ಜನರಲ್ಲಿ ಸಹನೆಯಿಂದ ಇರುವಂತೆ ಬೇಡಿಕೊಂಡಿದ್ದಾರೆ. ಆತ್ಮಹತ್ಯೆ ಎಲ್ಲದಕ್ಕೂ ಪರಿಹಾರ ಅಲ್ಲ. ರಾಜ್ಯದ ಎಲ್ಲಾ ರೈತರು ಸಹನೆಯಿಂದ ಇರಬೇಕು ಎಂದು ಇದೇ ವೇಳೆ ಮನವಿಯನ್ನು ಮಾಡಿದರು.

ನಂತರ ಸಚಿವೆಯನ್ನು ಕಾಂಗ್ರೆಸ್ ಕಾರ್ಯಕರ್ತರು ಬಹಿರಂಗವಾಗಿ ತರಾಟೆಗೆ ತೆಗೆದುಕೊಂಡು ಭಾರೀ ಮುಜುಗರಕ್ಕೆ ಈಡು ಮಾಡಿದ ಪ್ರಸಂಗ ಕೂಡ ನಿನ್ನೆ ಉಡುಪಿಯಲ್ಲಿ ನಡೆದಿದೆ. ಸ್ವಪಕ್ಷೀಯರಿಂದಲೇ ಇರುಸುಮುರುಸು ಉಂಟಾಗಿದ್ದರಿಂದ ಅಲ್ಲಿ ನಿಲ್ಲಲಾರದೆ ಜಯಮಾಲಾ ಸ್ಥಳ ಬಿಟ್ಟು ತೆರಳಿದ ಪ್ರಸಂಗ ಕೂಡ ನಡೆಯಿತು. ಭಾರತ್ ಬಂದ್ ವೇಳೆ ಪೊಲೀಸರು ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ನಡೆದ ಘರ್ಷಣೆ ಹಿನ್ನಲೆಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದು, ಬಂದ್ ವೇಳೆ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಪೊಲೀಸರ ಲಾಠಿ ಚಾರ್ಜ್ ಪ್ರಕರಣ ಮುಂದಿಟ್ಟು, ಸಚಿವೆ ಜಯಮಾಲಾ ಅವರ ವಿರುದ್ದ ಕಿಡಿ ಕಾರಿದರು.

ಲಾಠಿ ಚಾರ್ಜ್ ಆದಾಗ ಜಯಮಾಲಾ ಅವರು ಕಾರ್ಯಕರ್ತರ ಕಷ್ಟ ಕೇಳಿಲ್ಲ. ಕನಿಷ್ಠ ಪಕ್ಷ ಆಸ್ಪತ್ರೆಗೆ ದಾಖಲಾದವರ ಆರೋಗ್ಯ ಕೂಡ ವಿಚಾರಿಸಿಲ್ಲ. ಆದರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರ ಮನೆಯಲ್ಲಿ ಗಣಪತಿ ಇಟ್ಟಾಗ ಊಟ ಮಾಡಲು ಹೋಗಿದ್ದೀರಿ ಎಂದು ಯುವ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಡಿಸಿದ್ದಾರೆ.ಕಾರ್ಯಕರ್ತರನ್ನು ಸಚಿವೆ ಜಯಮಾಲಾ ಸಮಾಧಾನ ಪಡಿಸಲು ಮುಂದಾದರೂ  ಕಾರ್ಯಕರ್ತರು ನ್ಯಾಯಕ್ಕಾಗಿ ಆಗ್ರಹಿಸಿ  ಪಟ್ಟು ಹಿಡಿದಾಗ ಸಚಿವೆ ಸಿಟ್ಟಾದರು. ಮಾಧ್ಯಮಗಳನ್ನು ಮುಂದಿಟ್ಟುಕೊಂಡು ಹೆದರಿಸಲು ಬರಬೇಡಿ, ಈ ರೀತಿಯ ವರ್ತನೆಯಿಂದ ನನಗೆ ತುಂಬಾ ಕೋಪ ಬರುತ್ತದೆ ಎಂದು ಹೇಳಿ ತಮ್ಮ ಕಾರು ಹತ್ತಿ ಅಲ್ಲಿಂದ ಹೊರಟುಹೋದರು.

About the author

ಕನ್ನಡ ಟುಡೆ

Leave a Comment