ರಾಜ್ಯ ಸುದ್ದಿ

ಸಚಿವ ಸಂಪುಟ ವಿಸ್ತರಣೆಯಲ್ಲಿ ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಆದ್ಯತೆ: ದಿನೇಶ್‌ ಗುಂಡೂರಾವ್

ಹುಬ್ಬಳ್ಳಿ: ಡಿ. 22 ರಂದು ಸಚಿವ ಸಂಪುಟ ವಿಸ್ತರಣೆಯಾಗಲಿದೆ. ಉತ್ತರ ಕರ್ನಾಟಕದ ಆಕಾಂಕ್ಷಿಗಳಿಗೆ ಅನ್ಯಾಯವಾಗದಂತೆ ಸಂಪುಟ ವಿಸ್ತರಣೆಯಾಗಲಿದೆ. ಯಾರನ್ನೋ ಸಮಾಧಾನ ಪಡಿಸುವ ಉದ್ದೇಶದಿಂದ ಸಂಪುಟ ವಿಸ್ತರಣೆ ಮಾಡುತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್‌ ತಿಳಿಸಿದ್ದಾರೆ.

ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಸಚಿವ ಸಂಪುಟ ವಿಸ್ತರಣೆಯಾಗಲಿದೆ. ಉತ್ತರ ಕರ್ನಾಟಕ ಭಾಗಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡಲಾಗುವುದು. ಸಚಿವ ಸಂಪುಟ ವಿಸ್ತರಣೆ ಆಗಬಹುದು ಇಲ್ಲವೇ, ಸರ್ಜರಿನೂ ಆಗಬಹುದು. ಅದನ್ನು ಈಗಲೇ ಹೇಳುವುದಕ್ಕೆ ಆಗುವುದಿಲ್ಲ. 22ಕ್ಕೆ ಎಲ್ಲವೂ ಗೊತ್ತಾಗಲಿದೆ. ಕೆಲವರಿಗೆ ಮಂತ್ರಿಗಳಾಗಬೇಕು ಎಂಬ ಆಸೆ ಇದೆ. ಆದರೆ ಎಲ್ಲರೂ ಮಂತ್ರಿಗಳಾಗುವುದಕ್ಕೆ ಸಾಧ್ಯವಿಲ್ಲ ಎಂದರು.

ಪ್ರಾಂತ್ಯ, ಜಾತಿ ಜನಾಂಗದ ಮೇಲೆ ಪ್ರಾತಿನಿಧ್ಯ ನೀಡಲಾಗುವುದು. ರಾಜ್ಯದಲ್ಲಿ ಯಾವುದೇ ಅಸಮಾಧಾನವಿಲ್ಲ. ಎಲ್ಲರೂ ಒಗ್ಗಟ್ಟಾಗಿ ಮುಂದಿನ ಚುನಾವಣೆಗೆ ತಯಾರಾಗಲಿದ್ದೇವೆ. ಉತ್ತರ ಕರ್ನಾಟಕದ ಅಭಿವೃದ್ಧಿ ಸರ್ಕಾರದ ಜವಾಬ್ದಾರಿ. ಸಮ್ಮಿಶ್ರ ಸರ್ಕಾರ ಅಖಂಡ ಕರ್ನಾಟಕದ ಅಭಿವೃದ್ಧಿಗೆ ಶ್ರಮಿಸಲಿದೆ ಎಂದು ಹೇಳಿದರು.

ಶಾಸಕಾಂಗ ಸಭೆಗೆ ಶಾಸಕರ ಗೈರು ವಿಚಾರಕ್ಕೆ ಪ್ರತಿಕ್ರಿಯಿಸಿ, ಬಹಳಷ್ಟು ಶಾಸಕರು ಏನು ಗೈರಾಗುತ್ತಿಲ್ಲ. ಪ್ರತಿಯೊಂದು ಶಾಸಕಾಂಗ ಸಭೆಗೆ ಗೈರು ಹಾಜರಾಗಿರುತ್ತಾರೆ. ಹೀಗಾಗಿ ಬೇರೆ ಬೇರೆ ಕಾರಣಗಳಿಂದ ಕೆಲವು ಶಾಸಕರು ಹಾಜರಾಗಿಲ್ಲ ಅಷ್ಟೇ ಎಂದು ಸಮರ್ಥಿಸಿಕೊಂಡರು.

About the author

ಕನ್ನಡ ಟುಡೆ

Leave a Comment