ಅಂಕಣಗಳು

ಸದಾ”ಶಿವ”ನಂತೆ ಡಾ.ಸಜನಾ

ಸದಾ’ಶಿವ’ನಂತೆ ತಾಳ್ಮೆ, ಸರಳತೆಯನ್ನು ಮೈಗೂಡಿಸಿಕೊಂಡಿದ್ದ ಡಾ.ಸ.ಜ.ನಾಗಲೋಟಿಮಠರ ಬದುಕು ಬಹಳ ಕಷ್ಟದಿಂದ ಕೂಡಿದ್ದು. ಕಣ್ಣ ಮುಂದೆ ತನ್ನ ತಂದೆಯನ್ನು ಕಳೆದುಕೊಂಡವನ ತಾಪ , ಮನೆಯ ಮಗನಾಗಿ ಮಾಡುವ ಕಾರ್ಯಗಳು ಯಾವಾಗಲೂ ಕಣ್ಣು ಚುಚ್ಚುತ್ತಿರುತ್ತವೆ. ಪ್ರತಿಭೆಯುಳ್ಳವರು ಪ್ರತಿಯೊಂದರಲ್ಲೂ ಪಾಸ್ ಆಗೇ ಆಗುತ್ತಾರೆ ಎಂಬುದಕ್ಕೆ ಡಾ.ಸ.ಜ.ನಾ ಅವರೇ ನಿದರ್ಶನ.ತನ್ನ ತಾಯಿಗೆ ಗರ್ಭಾಶಯದ ಕ್ಯಾನ್ಸರ್ ಇರುವುದು ದೃಢವಾದ ಮೇಲೆ ಆ ಜೀವ ಪಟ್ಟ ಕಷ್ಟಗಳು ಸಾವಿರಾರು. ಬೀದಿಗೆ ಬಂದ ಜೀವನ,ಆ ಕ್ಷಣ ಕಾಡುತ್ತಿದ್ದ ಅನಾಥಪ್ರಜ್ಞೆ ನಿಜಕ್ಕೂ ಒಂದು ಕ್ಷಣ ತಲ್ಲಣವನ್ನುಂಟು ಮಾಡುತ್ತದೆ. ಸ್ವಲ್ಪ ಕಲ್ಪನೆ ಮಾಡಿಕೊಳ್ಳಿ ಇರಲು ನೆಲೆ ಇಲ್ಲದಿದ್ದರೆ ನಮ್ಮ ಪರಿಸ್ಥಿತಿ ಏನು ಅಂತ ? ಆ ಜೀವ ಹೇಗೆ ಆ ಕ್ಷಣಗಳನ್ನು ಕಳೆಯಿತೋ ಎಂಬ ಪ್ರಶ್ನೆಗೆ ನಿರುತ್ತರ. ಅಂದು MBBS ಒಂದು ತಪಸ್ಸು, ಇಂದು ಅದು ಬೇರೆ ಸ್ವರೂಪ ಪಡೆದಿದೆ. ಅಂತ ತಪಸ್ಸಿನಲ್ಲಿ ಯಶಸ್ವಿಯಾದ ಸಜನಾರವರು ಬದುಕಿನುದ್ದಕ್ಕೂ ಹಲವು ಆಯಾಮಗಳನ್ನು ಕಂಡವರು. ಅವರ ವ್ಯಕ್ತಿತ್ವ ಹಾಗೂ ಸಾಧನೆಯನ್ನು ಹಾಳು ಮಾಡುವವರ ಗುಂಪಿಗೆ ಸದಾ ಹಿನ್ನಡೆಯಾಗುತ್ತಿದೆಯೆಂದರೆ ಅದಕ್ಕೆ ಮುಖ್ಯ ಕಾರಣ ಅವರ ಸರಳತೆ, ಯಾರನ್ನೂ ದ್ವೇಷಿಸದ ಅವರ ಮನಸ್ಸು. ವೈದ್ಯಕೀಯ ಲೋಕವೆಂದರೆ ಒಂದನ್ನು ಪಡೆದು ಇನ್ನೊಂದನ್ನು ಕಳೆದುಕೊಳ್ಳಬೇಕು ಎಂಬುದರ ಮಧ್ಯೆ ಎಲ್ಲರಿಗೂ ಬೇಕಾದವರು   ಡಾ.ಸ.ಜ.ನಾರವರು. ಸಂಘಟಿತ ಶಕ್ತಿ, ಆತ್ಮವಿಶ್ವಾಸ ,ಮಾಡೇ ತೀರುವೆ ಎಂಬ ದೃಢ ಸಂಕಲ್ಪ ಅವರ ಬದುಕನ್ನು ಉನ್ನತಿಗೊಯ್ದವು. ಹಲವು ವಿಚಾರಗಳ ಮಧ್ಯೆ ಸಾಹಿತ್ಯದ ನಂಟು ಅವರಿಗೆ ಸೋಕಿ ಕನ್ನಡ ಸಾಹಿತ್ಯ ಜಗತ್ತಿಗೆ “ಬಿಚ್ಚಿದ ಜೋಳಿಗೆ”ಯನ್ನು ಉಡುಗೊರೆಯಾಗಿ ಕೊಟ್ಟರು. ಇಂದು ಈ ಸಮಾಜದಲ್ಲಿ​ ಸ್ವಾರ್ಥಿಗಳೇ ತುಂಬಿದ ಹೊತ್ತಲ್ಲಿ

ಡಾ.ಸ.ಜ.ನಾರವರು ಇನ್ನೂ ನಮ್ಮ ಮಧ್ಯೆ ಇದ್ದಿದ್ದರೆ ಅವರಿಂದ ಏನಾದರೂ ಕಲಿಯಬಹುದಾಗಿತ್ತು. ನಮಗೂ ಅದೃಷ್ಟ ಇರಬೇಕು ಆ ಪುಣ್ಯಾತ್ಮನ ಜೊತೆ ಬೆರೆಯಲು. ಇಲ್ಲಿ ನನ್ನ ವೈಯಕ್ತಿಕ ವಿಚಾರವನ್ನು ಪ್ರಸ್ತಾಪಿಸುತ್ತಿದ್ದೇನೆ. ಇಲ್ಲಿಯವರೆಗೂ ಯಾರಿಗೂ ಹೇಳಿರಲಿಲ್ಲ.ಈ ಪುಸ್ತಕ ಓದಿದ ನಂತರ ಆ ಮಾತನ್ನು ಹೇಳಬೇಕೆನಿಸುತ್ತಿದೆ. ನಾನು ೫ನೇ ತರಗತಿಯಲ್ಲಿ ಇದ್ದ ಸಂದರ್ಭದಲ್ಲಿ ನನಗೆ ಕಿವಿ ನೋವು,ಸೋರುವುದು ಆದಾಗ ಕೆಲವೊಂದು ಸಮೀಪದ ವೈದ್ಯರುಗಳು ಆಪರೇಶನ್ ಮಾಡಬೇಕು ಅಂತ ಹೇಳ್ತಿದ್ರು.ನಮ್ಮದೂ ಆಗ ಬಡತನದ ಪರಿಸ್ಥಿತಿ. ನಮ್ಮಮ್ಮ ಒಂದು ಶಾಲೆಯಲ್ಲಿ​ಶಿಕ್ಷಕಿಯಾಗಿದ್ದ ವೇಳೆ ಆ ಶಾಲೆಯ ಸದಸ್ಯರಾಗಿದ್ದವರು ಡಾ.ಸ.ಜ.ನಾರವರ ತಂಗಿಯಾದ ಶ್ರೀಮತಿ ಶಾರದಾ.ಜಂ.ಕಾಡದೇವರರವರು. ಇವರಿಗೆ ನಮ್ಮಮ್ಮ ಕೇಳಿಕೊಂಡಾಗ ಡಾ.ಸ.ಜ.ನಾರವರ ತಂಗಿಯಾದ ಶ್ರೀಮತಿ ಶಾರದಾರವರು ಒಂದು ಪತ್ರ ಬರೆದು ನಮ್ಮ ಬಡತನದ ಬಗ್ಗೆ ಆ ಪತ್ರದಲ್ಲಿ ಉಲ್ಲೇಖಿಸಿ ಆ ಪತ್ರವನ್ನು ನನ್ನಣ್ಣನಿಗೆ ಕೊಡಿ ಅಂತ ಹೇಳಿದರು. ಆಗ ಅಂಜುತ್ತಾ ನಾನು,ನನ್ನಮ್ಮ ಬಾಗಲಕೋಟೆಯಲ್ಲಿ​ ಡಾ.ಸ.ಜ.ನಾರವರು ಇರುವ ಕಡೆಗೆ ಹೊರಟೆವು. ಅವರ ಚೆಂಬರ್ ಅನ್ನು ಪ್ರವೇಶಿಸಿದ್ದೆ ತಡ ಅಲ್ಲಿ ಶಾಂತ ಚಿತ್ತ ಸ್ವಭಾವ,ಸರಳತೆಯೇ ತಮ್ಮ ಆಭರಣದಂತೆ ಹಣೆಯ ಮೇಲೆ ವಿಭೂತಿ ಹಚ್ಚಿಕೊಂಡು ಕುಳಿತಿದ್ದರು. ಅವರನ್ನು ಆಗ ನಾ ನೋಡಿದ್ದು ಪದೇ ಪದೇ ನೆನಪಿಸಿಕೊಳ್ಳುತ್ತಿರುತ್ತೇನೆ. ಅವರ ಕೈಗೆ ಆ ಪತ್ರವನ್ನು ಕೊಟ್ಟಾಗ ಅವರು ಸಹಿ ಮಾಡಿ 4000 ರೂ ಬಿಲ್ ಆಗುವುದನ್ನು ತಪ್ಪಿಸಿ ಕೇವಲ 1800  ರೂ ಬಿಲ್ ಮಾಡಿ ನಮಗೆ ಸಹಾಯ ಮಾಡಿದರು. ಕಷ್ಟವೆಂದು ಬಂದವರಿಗೆ ತಾಯಿಯಾಗಿ,ಹಸಿದು ಬಂದವರಿಗೆ ಅನ್ನ ನೀಡಿ ಮಾನವೀಯತೆಗೆ ಒಂದು ಹೆಸರು ತಂದು ಕೊಟ್ಟ ಸಾತ್ವಿಕ ವ್ಯಕ್ತಿ ಡಾ.ಸ.ಜ.ನಾ. ನಾನು ಎಷ್ಟು ಜನ್ಮವೆತ್ತಿದರೂ ಅವರ ಋಣ ತೀರಿಸಲು ಸಾಧ್ಯವಿಲ್ಲ.

ಡಾ.ಸ.ಜ.ನಾರವರ ಬಗ್ಗೆ ಬರೆಯುವಷ್ಟು ದೊಡ್ಡವ ಹಾಗೂ ಪಕ್ವತೆ ನನ್ನಲಿಲ್ಲ

ಈ ಪುಸ್ತಕ ಓದುತ್ತಿದ್ದರೆ ಬರೆಯಬೇಕು ಅನಿಸುತ್ತದೆ. ಅದಕ್ಕೆ​ ಈ ಬರಹ . ಆ ಬದುಕು ತನಗಾಗಿ ಬದುಕದೇ ಮಾನವ ಕುಲದ ಏಳ್ಗೆಗಾಗಿ ಬದುಕಿದೆ. ವೈದ್ಯಕೀಯ ಕ್ಷೇತ್ರದ ಎಂದೂ ಮಾಸದ ಜೀವಧಾರೆ ಡಾ.ಸ.ಜ.ನಾ. ಶರಣ ಜೀವಿಯಂತೆ ಬದುಕಿದ ಡಾ.ಸ.ಜ.ನಾರವರು ಬಹಳ ದಿನ ಬದುಕಲಿಲ್ಲ. ತಮ್ಮ 66ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದರ ಪರಿಣಾಮ ನಾವುಗಳು ಅಮೋಘರತ್ನವೊಂದನ್ನು ಕಳೆದುಕೊಂಡೆವು ಎಂಬ ಭಾವನೆ ಆಗಾಗ ಕಾಡುತ್ತಿದೆ.

ರಚನೆ – ಕಿರಣ್ ಕರಲಟ್ಟಿ ಬನಹಟ್ಟಿ

7411158297

About the author

ಕನ್ನಡ ಟುಡೆ

1 Comment

  • ಡಾ ಸ ಜ ನಾಗಲೋಟಿಮಠ ಅವರನ್ನು ನಾನು ಬೆಳಗಾವಿ ಬಸವ ಕಾಲನಿಯಲ್ಲಿನ ನಮ್ಮ ಮಾವ ಪ್ರೊ ಸಿ ವಿ ಮಠದ ಅವರ ಮನೆಯಲ್ಲಿ.ಮೊದಲು ಅವರ ಬಗ್ಗೆ ಬಹಳಷ್ಟು ಕೇಳಿದ್ದೆ.ಅವರನ್ನು ಖುದ್ದಾಗಿ ಕಂಡಾಗ ಖುಷಿಗೊಂಡೆ. ಅವರ ಸರಳತೆ ನನ್ನನು ಸೆಳೆಯಿತು. ಅವರು ಶರಣ ತತ್ವಗಳನ್ನು ಅರಿತು ಆಚರಿಸುತ್ತಿದ್ದರು.ಅವರ ‘ಬಿಚ್ಚಿದ ಜೋಳಿಗೆ’ ಆಗಲೇ ಪ್ರಸಿದ್ದಿ ಪಡೆದಿತ್ತು.ಅವರೊಂದಿಗೆ ಎರಡು ಮಾತನಾಡಿರುವ ಖುಷಿಯೇ ನನಗೆ ಬಹುದೊಡ್ಡ ಮಹದಾನಂದ.

Leave a Comment