ಅಂಕಣಗಳು ಸುದ್ದಿ

ಸಪ್ತಸ್ವರಗಳ ಜತೆ ಸುಹಾನ ಸಫರ್’: ಪ್ರತಿಭಾ ಕಾರಂಜಿಯಿಂದ ‘ಸರಿಗಮಪ’ ವೇದಿಕೆವರೆಗೆ

Kannadatoday news: ಸಪ್ತಸ್ವರಗಳ ಜತೆ ಸುಹಾನ ಸಫರ್’: ಪ್ರತಿಭಾ ಕಾರಂಜಿಯಿಂದ ‘ಸರಿಗಮಪ’ ವೇದಿಕೆವರೆ

‘ಝೀ ಕನ್ನಡ’ ಮನೋರಂಜನಾ ವಾಹಿನಿಯ ‘ಸರಿಗಮಪ’ ರಿಯಾಲಿಟಿ ಶೋಗೆ ಆಯ್ಕೆಯಾದ ಮೊದಲ ಮುಸ್ಲಿಂ ಸಮುದಾಯದ ಯುವತಿ ಸುಹಾನ. ತಮ್ಮ ಆಯ್ಕೆ ಸುತ್ತಿನಲ್ಲಿಯೇ ಬುರ್ಖಾ ಧರಿಸಿ, ಭಕ್ತಿ ಗೀತೆಯೊಂದನ್ನು ಹಾಡುವ ಮೂಲಕ ‘ಸಂಗೀತಕ್ಕೆ ಧರ್ಮದ ಅಂಚು’ಗಳಿಲ್ಲ ಎಂಬ ಸಂದೇಶವನ್ನು ಸಾರಿದವರು. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನವರು ಸುಹಾನ. ಅವರ ತಂದೆ ಮತ್ತು ತಾಯಿ; ಇಬ್ಬರೂ ಶಿಕ್ಷಕರು. ಚಿಕ್ಕ ವಯಸ್ಸಿನಲ್ಲಿಯೇ ಶಾಲೆಯಲ್ಲಿ ನಡೆಯುವ ಪ್ರತಿಭಾ ಕಾರಂಜಿಯ ಮೂಲಕ ಸಂಗೀತದತ್ತ, ಕಲೆಯತ್ತ ಆಸಕ್ತಿ ಬೆಳೆಸಿಕೊಂಡ ಸುಹಾನ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಹೊಸ ಅಲೆಯ ಚರ್ಚೆಯೊಂದನ್ನು ಹುಟ್ಟು ಹಾಕುವ ಸಾಧ್ಯತೆಗಳು ಕಾಣಿಸುತ್ತಿವೆ.

ಈಗಾಗಲೇ ಅವರು ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸುವಿಕೆಯ ಕುರಿತು ಅಪಸ್ವರಗಳು ಶುರುವಾಗಿವೆ. ಧಾರ್ಮಿಕ ಚೌಕಟ್ಟಿನಲ್ಲಿ ಅವರ ಕಲೆಯ ಆರಾಧನೆಯನ್ನು ಇಟ್ಟು ನೋಡಲಾಗುತ್ತಿದೆ. ವಿಶೇಷವಾಗಿ ಅವರ ಆಯ್ಕೆ ಸಮಯದಲ್ಲಿ ‘ಸರಿಗಮಪ’ ವೇದಿಕೆಯಲ್ಲಿ ಕೇಳಿಬಂದ ಮಾತುಗಳಿಗೆ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಇವೆಲ್ಲವುಗಳ ನಡುವೆಯೇ, ಸುಹಾನ ತಮ್ಮ ಆರಂಭದ ಹಾಡುಗಳ ಮೂಲಕವೇ ದೊಡ್ಡ ಸಂಖ್ಯೆಯ ಜನರ ಮೆಚ್ಚುಗೆಗೂ ಪಾತ್ರವಾಗಿದ್ದಾರೆ.

“ನಮ್ಮಲ್ಲಿ ಮನೆಮನೆಯಲ್ಲಿ ಸರಿಗಮಪ ರೀತಿಯ ಕಾರ್ಯಕ್ರಮಗಳನ್ನು ಜನ ನೋಡುತ್ತಾರೆ. ಚೆನ್ನಾಗಿ ಹಾಡುವವರನ್ನು ಮನಸ್ಸಿನಲ್ಲಿಯೇ ಆರಾಧಿಸುತ್ತಾರೆ ಕೂಡ. ಆದರೆ ನಮ್ಮದೇ ಸಮುದಾಯದ ಹೆಣ್ಣು ಮಕ್ಕಳು ಇಂತಹ ವೇದಿಕೆ ಹತ್ತುತ್ತಿದ್ದಂತೆ ವಿರೋಧಿಸಲು ಶುರುಮಾಡುತ್ತಾರೆ. ಧಾರ್ಮಿಕ ಕಟ್ಟಳೆಗಳನ್ನು ಹೇರಲಾಗುತ್ತಿರುವ ಸಮಯದಲ್ಲಿ ಸುಹಾನ ಅವರ ದಿಟ್ಟ ನಡೆ ಇನ್ನಷ್ಟು ಜನರಿಗೆ ಸ್ಪೂರ್ತಿ ನೀಡಲಿದೆ,” ಎನ್ನುತ್ತಾರೆ ಮಂಗಳೂರು ಮೂಲಕ ಪತ್ರಕರ್ತ ಇರ್ಷಾದ್ ಉಪ್ಪಿನಂಗಡಿ. ಇರ್ಷಾದ್ ಕೂಡ ಇಸ್ಲಾಂ ಧರ್ಮದೊಳಗಿನ ಕಂದಾಚಾರಗಳ ಕುರಿತು ಸಾಕಷ್ಟು ಲೇಖನಗಳನ್ನು ಪ್ರಕಟಿಸಿದ್ದಾರೆ.

ಮನೋರಂಜನಾ ವೇದಿಕೆಯಿಂದ:

ಮನೋರಂಜನಾ ವಾಹಿನಿಗಳ ಪೈಕಿ ಉಳಿದವುಗಳಿಗೆ ಹೋಲಿಸಿದರೆ ‘ಝೀ ಕನ್ನಡ’ ಇರುವುದರಲ್ಲೇ ಕೊಂಚ ಸೆನ್ಸಿಬಲ್ ಅನ್ನಿಸುವಂತ ಕಾರ್ಯಕ್ರಮಗಳನ್ನು ಜನರಿಗೆ ನೀಡುತ್ತಾ ಬಂದಿದೆ. ವಾಹಿನಿ ಆರಂಭಿಸಿರುವ ಸಂಗೀತ ಕಾರ್ಯಕ್ರಮ ‘ಸರಿಗಮಪ’. ಸದ್ಯ ಅದರ 13ನೇ ಅವತರಣಿಕೆಯ ಆಯ್ಕೆ ಸುತ್ತ ಮುಗಿದಿದೆ. ಉತ್ತರ ಕರ್ನಾಟಕ ಮೂಲದ, ವಿಕಲ ಚೇತನ ಮೆಹಬೂಬ್ ಸಾಬ್ ಸೇರಿದಂತೆ ಒಟ್ಟು 17 ಅಭ್ಯರ್ಥಿಗಳಿಗೆ  ಈ ಬಾರಿ ಅವಕಾಶ ನೀಡಲಾಗಿದೆ. ಇದರಲ್ಲಿ ಸುಹಾನ ಕೂಡ ಒಬ್ಬರು.

ಸುಹಾನ ಆಯ್ಕೆಯಾಗುತ್ತಿದ್ದಂತೆ, ಕಾರ್ಯಕ್ರಮದ ತೀರ್ಪುಗಾರರಲ್ಲಿ ಒಬ್ಬರಾದ ವಿಜಯ್ ಪ್ರಕಾಶ್, “ಭೇದ ಭಾವಗಳಿಲ್ಲದೆ ಸಪ್ತ ಸ್ವರಗಳನ್ನು ಮನೆ ಮನೆಗೆ ತಲುಪಿಸುವ ಈ ವೇದಿಕೆಯ ಆಶಯ ಈಡೇರಿದೆ,” ಎಂದರು. ಇನ್ನೊಬ್ಬ ತೀರ್ಪುಗಾರ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಕೂಡ, ‘ಚಾಲೆಂಜ್ ಒಪ್ಪಿಕೊಂಡ’ ಸುಹಾನ ಅವರನ್ನು ಅಭಿನಂದಿಸಿದರು. ಕಾರ್ಯಕ್ರಮದ ನಿರೂಪಕಿ ಅನುಶ್ರೀ ಒಂದು ಹೆಜ್ಜೆ ಮುಂದೆ ಹೋಗಿ, “ಜಾತಿ, ಕೋಮುವಾದ, ಭಯೋತ್ಪಾದನೆ ಹೆಸರಿನಲ್ಲಿ ಸಮಾಜದಲ್ಲಿ ನಡೆಯುತ್ತಿರುವ ಕ್ರೌರ್ಯಕ್ಕೆ ಸಂಗೀತದ ಮೂಲಕವೇ ಶಾಂತಿಯ ಹರಡಲು ಸಾಧ್ಯ,” ಎಂದರು.

ಸಹಜವಾಗಿಯೇ, ಮನೋರಂಜನಾ ಕಾರ್ಯಕ್ರಮವೊಂದರ ವೇದಿಕೆಯಿಂದ ರಾಜಕೀಯ ಸಂದೇಶವೊಂದು ಹೊರಬೀಳುತ್ತಿದ್ದಂತೆ ಸಮಾಜ ಒಂದು ವರ್ಗ ಪ್ರತಿಕ್ರಿಯಿಸಲು ಶುರುಮಾಡಿದೆ. ಮೊದಲ ಹೆಜ್ಜೆಯಾಗಿ ಸಂಗೀತ ಕಾರ್ಯಕ್ರಮದ ವೇದಿಕೆಯನ್ನು ಹತ್ತಿದ ಸುಹಾನ ಸೈಯದ್ ವಿರುದ್ಧ ವಾಟ್ಸಾಪ್, ಫೇಸ್‌ಬುಕ್‌ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಅಕ್ಷರಗಳ ಮಾಲೆಯನ್ನು ಹರಿಯ ಬಿಡಲಾಗುತ್ತಿದೆ.

ಇದೇನು ಹೊಸದಲ್ಲ:

ಹಾಗೆ ನೋಡಿದರೆ, ಇಂತಹ ಪ್ರತಿರೋಧ ಸುಹಾನ ಕುಟುಂಬ ಪಾಲಿಗೆ ಹೊಸದೇನೂ ಅಲ್ಲ. “ಚಿಕ್ಕ ವಯಸ್ಸಿನಿಂದಲೂ ಸುಹಾನ ತಂದೆ ತಾಯಿ ಆಕೆಯ ಸಾಂಸ್ಕೃತಿಕ ಚಟುವಟಿಕೆಗಳನ್ನು ಬೆಂಬಲಿಸಿದ ಹಿನ್ನೆಲೆಯಲ್ಲಿ ವಿರೋಧವನ್ನು ಕೇಳಿಕೊಂಡು ಬಂದಿದ್ದಾರೆ,” ಎನ್ನುತ್ತಾರೆ ಸುಹಾನ ಕುಟುಂಬದ ಸ್ನೇಹಿತರೊಬ್ಬರು.

ಸಾಗರ ಬೀಮನಕೋಣೆ ಎಂಬ ಹಳ್ಳಿಯಿಂದ ಬಂದ ಸುಹಾನ ತಂದೆ ಸೈಯದ್ ಮುನೀರ್ ಹಾಗೂ ನಸ್ರೀನ್ ಪರ್ವೀನ್ ದಂಪತಿಗೆ ಇಬ್ಬರು ಮಕ್ಕಳು. ಮನೆಯಲ್ಲಿ ದೊಡ್ಡವಳಾದ ಸುಹಾನ ಸದ್ಯ ಬೆಂಗಳೂರಿನಲ್ಲಿ ಎಂಬಿಎ ಕಲಿಯುತ್ತಿದ್ದಾರೆ. ತಮ್ಮ ಸಮೀರ್ ಬಿ. ಕಾಂ ಮಾಡುತ್ತಿದ್ದಾರೆ. “ಆಕೆಗೆ ಮೊದಲಿನಿಂದಲೂ ಸಂಗೀತದಲ್ಲಿ ಆಸಕ್ತಿ ಇತ್ತು. ನಾವು ಅದನ್ನು ಪ್ರೋತ್ಸಾಹಿಸುತ್ತ ಬಂದೆವು. ಈ ಬಾರಿ ರಜೆಗೆ ಬಂದಾಗ ಶಿವಮೊಗ್ಗದಲ್ಲಿ ‘ಸರಿಗಮಪ’ ಕಾರ್ಯಕ್ರಮದ ಆಡಿಷನ್ ನಡೆಯುತ್ತಿತ್ತು. ಜನವರಿ 27ರಂದು ನಾನೇ ಅಲ್ಲಿಗೆ ಕಡೆದುಕೊಂಡು ಹೋದೆ. ಶಿವಮೊಗ್ಗದಲ್ಲಿ 2 ಸುತ್ತಿನ ಆಯ್ಕೆ ನಂತರ ಬೆಂಗಳೂರಿನಲ್ಲಿ ನಾಲ್ಕು ಸುತ್ತ ನಡೆಯಿತು. ಆಮೇಲೆ ಆಯ್ಕೆ ಸುತ್ತಿನ ಕಾರಣಕ್ಕೆ ವೇದಿಕೆಯಲ್ಲಿ ಹಾಡು ಹಾಡಿಸಿದರು. ಆಕೆ ಆಯ್ಕೆಗೊಂಡಿದ್ದು ತುಂಬಾನೆ ಸಂತೋಷವಾಗಿದೆ,” ಎಂದರು ಸೈಯದ್ ಮುನೀರ್. ‘ಸಮಾಚಾರ’ ಜತೆ ಮಗಳ ಸಾಂಸ್ಕೃತಿಕ ಅಭಿರುಚಿಗಳ ಕುರಿತು ಮುಕ್ತವಾಗಿ ಮಾತನಾಡಿದ ಅವರು, “ಆಕೆಗೆ ಚಿಕ್ಕವಯಸ್ಸಿನಿಂದಲೂ ಕಲೆಯ ಕುರಿತು ಆಸಕ್ತಿ ಇತ್ತು. ಶಾಲೆಗಳಲ್ಲಿ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಹಾಡಿ ಬಹುಮಾನ ಪಡೆದುಕೊಂಡಿದ್ದರು. ರಾಜ್ಯ ಮಟ್ಟದಲ್ಲಿಯೂ ಆಕೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಈ ಬಾರಿ ದೊಡ್ಡ ವೇದಿಕೆಯೊಂದು ಸಿಕ್ಕಿದೆ,” ಎಂದರು.

ಸುಹಾನ ಅವರ ಕುಟುಂಬದಲ್ಲಿಯೇ ಹೀಗೊಂದು ಸಾಂಸ್ಕೃತಿಕ ಅಭಿರುಚಿ ಬೆಳೆದು ಬಂದಿದೆ ಅನ್ನಿಸುತ್ತದೆ. “ಸುಹಾನ ಅಮ್ಮನ ಅಮ್ಮ, ಫರೀದಾ ಬೇಗಂ ಕೂಡ ಸಂಗೀತದ ಬಗ್ಗೆ ಆಸಕ್ತಿ ಹೊಂದಿದ್ದರು. ಅವರೂ ಕೂಡ ಹಾಡುತ್ತಿದ್ದರು,” ಎನ್ನುತ್ತಾರೆ ಮುನೀರ್.

ಅಲೆಯ ವಿರುದ್ಧ: 

ಸದ್ಯ ಸುಹಾನ ರಿಯಾಲಿಟಿ ಶೋಗೆ ಆಯ್ಕೆಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಅವರ ಹಾಡುಗಳು ರಾಜ್ಯ ಮನೆಮನೆಗೆ ತಲುಪಲಿವೆ. ಸುಹಾನ ಪಾಲಿಗೆ ಇದು ಕೇವಲ ಸ್ಪರ್ಧೆ ಮಾತ್ರವಾಗಿ ಉಳಿಯುವ ಸಾಧ್ಯತೆಗಳು ಕಡಿಮೆ ಎನ್ನಿಸುವಂತಿದೆ ವಾತಾವರಣ. “ಪ್ರಪಂಚದಲ್ಲಿ ಸಾಕಷ್ಟು ಪ್ರತಿಭೆಗಳಿಗೆ ವೇದಿಕೆ, ಪ್ರೋತ್ಸಾಹ ಸಿಗದೇ ಹೋಗುತ್ತಿದೆ. ಅದಕ್ಕೆ ಕಟ್ಟುಪಾಡುಗಳು, ಕೆಲವೊಂದು ಕಾರಣಗಳು ಅಡ್ಡಿಯಾಗಿವೆ. ನನ್ನನ್ನು ನೋಡಿಯಾದರೂ ಪ್ರತಿಭಾ ಪ್ರದರ್ಶನಕ್ಕೆ ಇನ್ನೊಂದಿಷ್ಟು ಜನ ಮನಸ್ಸು ಮಾಡಲಿ,” ಎಂದಿದ್ದಾರೆ ಸುಹಾನ. ಪರಿಪಕ್ವವಾಗಿರುವ ಅವರ ಆಲೋಚನೆಗೆ ದೊಡ್ಡದೊಂದು ವೇದಿಕೆ ಕೂಡ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಸುಹಾನ ವಿರೋಧಗಳನ್ನು ದಾಟಿ ತಮ್ಮ ಗುರಿಯತ್ತ ಮುನ್ನಡೆಯಲಿರುವ ಮುನ್ಸೂಚನೆಯೊಂದು ಸಿಕ್ಕಿದೆ.

ಈ ವರದಿಗಾಗಿ ಸುಹಾನ ಅವರನ್ನು ಸಂಪರ್ಕಿಸಲಾಯಿತಾದರೂ, ‘ಝೀ ಕನ್ನಡ’ ಜತೆಗೆ ಅವರ ಒಪ್ಪಂದದ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ಪಡೆಯಲು ಸಾಧ್ಯವಾಗಲಿಲ್ಲ.

About the author

ಕನ್ನಡ ಟುಡೆ

Leave a Comment