ರಾಜ್ಯ ಸುದ್ದಿ

ಸಮಾಜದಲ್ಲಿ ಅಶಾಂತಿ ವಾತಾವರಣ ಸೃಷ್ಟಿಸುವ ಶಕ್ತಿಗಳನ್ನು ಮಟ್ಟಹಾಕಿ: ಪೊಲೀಸರಿಗೆ ಸಿಎಂ ಕುಮಾರಸ್ವಾಮಿ

ಬೆಂಗಳೂರು: ಸಮಾಜದಲ್ಲಿ ಅಶಾಂತಿ ವಾತಾವರಣ ಸೃಷ್ಟಿಸುವ ಶಕ್ತಿಗಳನ್ನು ಮಟ್ಟಹಾಕಿ ಎಂದು ರಾಜ್ಯ ಪೊಲೀಸರಿಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಭಾನುವಾರ ಸೂಚಿಸಿದ್ದಾರೆ. ಕೋರಮಂಗಲದ ಕೆಎಸ್ಆರ್’ಪಿ ಮೈದಾನದಲ್ಲಿ ಹಮ್ಮಿಕೊಂಡಿದ್ದ ಪೊಲೀಸ್ ಸಂಸ್ಮರಣಾ ದಿನಾಚರಣೆಯಲ್ಲಿ ಹುತಾತ್ಮ ಪೊಲೀಸರಿಗೆ ಗೌರವ ಸಲ್ಲಿಸಿ ಮಾತನಾಡಿರುವ ಅವರು, ಸಮಾಜದಲ್ಲಿ ಅಶಾಂತಿಯ ವಾತಾವರಣ ಉಂಟು ಮಾಡಲು ಕೆಲವರು ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಜಾತಿ, ಧರ್ಮಗಳ ಹೆಸರಿನಲ್ಲಿ ಸಂಘರ್ಷ ಸೃಷ್ಟಿಸಲು ಇವರು ಸಂಚು ರೂಪಿಸುತ್ತಿದ್ದಾರೆ. ಇಂತಹ ಶಕ್ತಿಗಳನ್ನು ಪೊಲೀಸರು ಮಟ್ಟಹಾಕಿ ರಾಜ್ಯದ ಪ್ರತಿ ಪ್ರಜೆಗೂ ರಕ್ಷಣೆ ನೀಡಬೇಕೆಂದು ಸೂಚಿಸಿದ್ದಾರೆ. ಪೊಲೀಸರು ಯಾವುದೇ ಒತ್ತಡಗಳಿಗೂ ಮಣಿಯಬಾರದು. ಪೊಲೀಸರಿಗೆ ನಮ್ಮ ಸರ್ಕಾರದ ಸಂಪೂರ್ಣ ಬೆಂಬಲವಿದೆ. ಪೊಲೀಸರ ಮೇಲೆ ಜನರಿಗೆ ಉತ್ತಮ ಅಭಿಪ್ರಾಯಗಳಿವೆ. ಪೊಲೀಸ್ ಇಲಾಖೆಯ ಘನತೆ, ಗೌರವ ಮತ್ತಷ್ಟು ಹೆಚ್ಚಾಗಬೇಕು. ಪೊಲೀಸರ ಬಳಿಗೆ ಬರಲು ಜನರು ಹಿಂಜರಿಯದಂತಹ ವಾತಾವರಣವನ್ನು ಸೃಷ್ಟಿಮಾಡಬೇಕು ಎಂದು ತಿಳಿಸಿದ್ದಾರೆ. ಇದೇ ವೇಳೆ ಪೊಲೀಸ್ ಸಿಬ್ಬಂದಿ ವೇತನ ಪರಿಷ್ಕರಣೆ ಸಂಬಂಧ ರಾಘವೇಂದ್ರ ಔರಾದ್ಕರ್ ಅವರು ನೀಡಿರುವ ವರದಿ ಜಾರಿಗೆ ಸರ್ಕಾರ ಬದ್ಧವಾಗಿದೆ ಎಂದ ಅವರು, ಪೊಲೀಸರ ವೇತನ ಪರಿಷ್ಕರಿಸಲು ಹಿಂದಿನ ಸರ್ಕಾರದಲ್ಲಿಯೇ ಪರಮೇಶ್ವರ್ ಅವರು ಔರಾದ್ಕರ್ ಸಮಿತಿ ನೇಮಿಸಿದ್ದರು. ಈ ಸಮಿತಿ ನೀಡಿರುವ ವರದಿಯನ್ನು ಎಷ್ಟೇ ಹೊರೆಯಾದರೂ ಜಾರಿ ಮಾಡಲು ಸಿದ್ಧನಿದ್ದೇನೆಂದಿದ್ದಾರೆ.
ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಹಾಗೂ ಗೃಹ ಸಚಿವ ಜಿ.ಪರಮೇಶ್ವರ್, ಡಿಜಿ ಮತ್ತು ಐಜಿಪಿ ನೀಲಮಣಿ ಎನ್ ರಾಜು, ಚಿತ್ರ ನಟ ಸುದೀಪ್ ಸೇರಿದಂತೆ ಇನ್ನಿತರೆ ಹಿರಿಯ ಪೊಲೀಸ್ ಅಧಿಕಾರಿಗಳು ಹಾಜರಿದ್ದರು.

About the author

ಕನ್ನಡ ಟುಡೆ

Leave a Comment