ರಾಜ್ಯ ಸುದ್ದಿ

ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವರ್ಗ ಮತ್ತೆ ಸ್ಥಗಿತ

ಬೆಂಗಳೂರು: ನಾನಾ ಕಾರಣಗಳಿಂದಾಗಿ ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವರ್ಗಾವಣೆಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತೆ ಅನಿರ್ದಿಷ್ಟಾವಧಿಗೆ ಮುಂದೂಡಿದೆ!

ವರ್ಗಾವಣೆಗೆ ಅನುಸರಿಸಬೇಕಾದ ಮಾನದಂಡಗಳ ಅಸ್ಪಷ್ಟತೆ, ತಂತ್ರಾಂಶದಲ್ಲಿನ ದೋಷ, ಹೆಚ್ಚುವರಿ ಶಿಕ್ಷಕರ ವರ್ಗಾವಣೆಗೆ ವಿರೋಧ, ಚುನಾವಣೆ ಸೇರಿದಂತೆ ಹಲವು ಕಾರಣಗಳಿಂದಾಗಿ ಕಳೆದ ಎರಡು ವರ್ಷಗಳಿಂದ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗಳನ್ನು ಪದೇಪದೆ ಮುಂದೂಡಲಾಗುತ್ತಿದೆ. ಈ ಗೊಂದಲ ಸರಿಪಡಿಸಿ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳಿಸುವಲ್ಲಿ ಶಿಕ್ಷಣ ಇಲಾಖೆ ವಿಫಲವಾಗಿದೆ ಎಂಬ ಟೀಕೆ ಶಿಕ್ಷಕರ ವಲಯದಲ್ಲಿ ಕೇಳಿ ಬಂದಿದೆ. ಅ.6ರಂದು ಮತ್ತೆ ವರ್ಗಾವಣೆ ಅಧಿಸೂಚನೆ ಹೊರಡಿಸಿದ ಶಿಕ್ಷಣ ಇಲಾಖೆ, ಅ.15ರಿಂದ ಎಲ್ಲಾ ಜಿಲ್ಲೆಗಳಲ್ಲಿ ಪ್ರಾಥಮಿಕ ಶಾಲಾ ಹೆಚ್ಚುವರಿ ಶಿಕ್ಷಕರ ಕೌನ್ಸೆಲಿಂಗ್‌ ಪ್ರಕ್ರಿಯೆ ಕೈಗೆತ್ತಿಕೊಂಡಿತ್ತು. ಆದರೆ ಟಿಡಿಎಸ್‌ ತಂತ್ರಾಂಶದಲ್ಲಿನ ದೋಷದಿಂದಾಗಿ ಹಲವು ಜಿಲ್ಲೆಗಳಲ್ಲಿ ಕೌನ್ಸೆಲಿಂಗ್‌ ಪ್ರಕ್ರಿಯೆ ಸ್ಥಗಿತಗೊಂಡಿದ್ದವು. ಇಲಾಖೆಯ ಬೇಜವಾಬ್ದಾರಿ ವಿರುದ್ಧ ಶಿಕ್ಷಕರು ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ, ಈ ಬಾರಿ ಕೂಡ ವರ್ಗಾವಣೆ ಪೂರ್ಣಗೊಳಿಸುವಲ್ಲಿ ಸೋತಿದೆ. 2017ರ ನವೆಂಬರ್‌ನಿಂದೀಚೆಗೆ ಆರನೇ ಬಾರಿಗೆ ಬಾರಿ ವರ್ಗಾವಣೆಯನ್ನು ಮುಂದೂಡಿದೆ.

ಕಾರಣಗಳೇನು? ಟಿಡಿಎಸ್‌ ತಂತ್ರಾಂಶದಲ್ಲಿನ ದೋಷವೇ ಈ ಬಾರಿಯೂ ವರ್ಗಾವಣೆ ಮುಂದೂಡಿಕೆಗೆ ಪ್ರಮುಖ ಕಾರಣ ಎಂಬ ಆರೋಪಗಳು ಕೇಳಿ ಬಂದಿವೆ. ಹೆಚ್ಚುವರಿ ಶಿಕ್ಷಕರ ವರ್ಗಾವಣೆ, ಕಡ್ಡಾಯ ವರ್ಗಾವಣೆ ಹಾಗೂ ಕೋರಿಕೆ ವರ್ಗಾವಣೆ ಸೇರಿದಂತೆ ಮೂರು ಹಂತಗಳಲ್ಲಿ ಈ ಪ್ರಕ್ರಿಯೆಗಳು ನಡೆಯುತ್ತವೆ. ಟಿಡಿಎಸ್‌ ತಂತ್ರಾಂಶದಲ್ಲಿ ಶಿಕ್ಷಕರು ತಮ್ಮ ಸೇವಾ ಮಾಹಿತಿಯನ್ನು ಕ್ರಮಬದ್ಧವಾಗಿ ನಮೂದು ಮಾಡದ ಕಾರಣ, ಹೆಚ್ಚುವರಿ ಶಿಕ್ಷಕರನ್ನು ಗುರುತಿಸುವಲ್ಲಿ ಗೊಂದಲಗಳುಂಟಾಗಿದ್ದವು. ಅಲ್ಲದೆ, ಟಿಡಿಎಸ್‌ ತಂತ್ರಾಂಶದಲ್ಲಿ ನಮೂದಾಗಿದ್ದ ಶಿಕ್ಷಕರಿಗಿಂತ ಹೆಚ್ಚು ಮಂದಿ ಕೌನ್ಸೆಲಿಂಗ್‌ಗೆ ಹಾಜರಾಗಿದ್ದರು. ವಿಷಯವಾರು ಹೆಚ್ಚುವರಿ ಶಿಕ್ಷಕರನ್ನು ಗುರುತಿಸುವಲ್ಲಿ ಇಲಾಖೆ ವಿಫಲವಾದ ಕಾರಣ ಈ ಗೊಂದಲ ಏರ್ಪಟ್ಟಿತ್ತು. ಇಲಾಖೆಯ ಈ ಕ್ರಮಕ್ಕೆ ಶಿಕ್ಷಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಹಾಗಾಗಿ ಹೆಚ್ಚುವರಿ ಶಿಕ್ಷಕರ ಕೌನ್ಸೆಲಿಂಗ್‌ ಪ್ರಕ್ರಿಯೆ ಸಹ ವಿಳಂಬವಾಗಿತ್ತು.

ನಂತರ ಕಡ್ಡಾಯ ವರ್ಗಾವಣೆ ಮತ್ತು ಕೋರಿಕೆ ವರ್ಗಾವಣೆ ಪ್ರಕ್ರಿಯೆಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಸುಮಾರು ಹತ್ತು ವರ್ಷಗಳ ಕಾಲ ‘ಎ’ ವಲಯಗಳಲ್ಲಿ ಸೇವೆ ಸಲ್ಲಿಸಿದ ಶಿಕ್ಷಕರನ್ನು ಕಡ್ಡಾಯವಾಗಿ ‘ಸಿ’ ವಲಯಗಳಿಗೆ ವರ್ಗ ಮಾಡಲು ಕ್ರಮ ಕೈಗೊಳ್ಳಲಾಗಿತ್ತು. ಹಾಗೆಯೇ, ‘ಸಿ’ ಕೇಂದ್ರಗಳಲ್ಲಿ ಕನಿಷ್ಠ 10 ವರ್ಷ ಸೇವೆ ಸಲ್ಲಿಸಿದವರನ್ನು ‘ಎ’ ಮತ್ತು ‘ಬಿ’ ಕೇಂದ್ರಗಳಿಗೆ ವರ್ಗಾಯಿಸಲು ಕ್ರಮ ಕೈಗೊಳ್ಳಲಾಗಿತ್ತು. ಈ ವೇಳೆ ಸೇವಾ ಹಿರಿತನಕ್ಕೆ ‘ವೇಯ್ಟೇಜ್‌’ ನೀಡುವಲ್ಲಿ ಮತ್ತೆ ಗೊಂದಲಗಳುಂಟಾದವು. ಹಾಗಾಗಿ, ‘ಎ’ ವಲಯದಲ್ಲಿ 20 ವರ್ಷಕ್ಕೂ ಹೆಚ್ಚು ಸೇವೆ ಸಲ್ಲಿಸಿದ ಶಿಕ್ಷಕರಿಗೆ ಕಡಿಮೆ ವೇಯ್ಟೇಜ್‌ ಸಿಕ್ಕರೆ, ‘ಸಿ’ ಕೇಂದ್ರದಲ್ಲಿ 10 ವರ್ಷ ಕಾರ್ಯನಿರ್ವಹಿಸಿದ ಶಿಕ್ಷಕರಿಗೆ ಹೆಚ್ಚು ‘ವೇಯ್ಟೇಜ್‌’ ನೀಡಲಾಗಿತ್ತು. ಇದರಿಂದಾಗಿ ಸೇವಾ ಹಿರಿತನವಿದ್ದರೂ, ಹಿರಿಯ ಶಿಕ್ಷಕರನ್ನು ಕೌನ್ಸೆಲಿಂಗ್‌ನಲ್ಲಿ ತೀರಾ ಹಿಂದಕ್ಕೆ ತಳ್ಳಲಾಗಿತ್ತು.

ಬಳಿಕ ಕೋರಿಕೆ ವರ್ಗಾವಣೆ ವೇಳೆ ಹೊರ ಜಿಲ್ಲೆಯ ಶಿಕ್ಷಕರಿಗೆ, ಅವರು ಇಚ್ಛಿಸಿದ ಶಾಲೆಯಲ್ಲಿ ಇರುವ ಖಾಲಿ ಹುದ್ದೆಗಳ ಬಗ್ಗೆ ಪಾರದರ್ಶಕವಾಗಿ ಮಾಹಿತಿ ನೀಡುವಲ್ಲಿ ವಿಫಲವಾಗಿತ್ತು. ಹಾಗಾಗಿ ಕೋರಿಕೆ ವರ್ಗಾವಣೆ ಶಿಕ್ಷಕರಿಗೆ ಸೂಕ್ತ ಸ್ಥಳ ಸಿಗದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಗಂಭೀರ ಕಾಯಿಲೆ ಉಳ್ಳವರು, ವಿಶೇಷ ಚೇತನರು ಇತರೆ ಅಪರೂಪದ ಪ್ರಕರಣಗಳ ವರ್ಗಾವಣೆಗೆ ಸಂಬಂಧಿಸಿದಂತೆ ಸಲ್ಲಿಸಿದ ಮೇಲ್ಮನವಿಯನ್ನು ಅಧಿಕಾರಿಗಳು ಸಮಗ್ರವಾಗಿ ಪರಿಶೀಲಿಸದೆ ನಿರ್ಲಕ್ಷಿಸಿದ ಘಟನೆಗಳೂ ನಡೆದಿದ್ದವು.

58 ವರ್ಷದವರೂ ಪಟ್ಟಿಯಲ್ಲಿದ್ದರು! ಕಾಯಿದೆ ಪ್ರಕಾರ 58 ವರ್ಷವಾದ ಶಿಕ್ಷಕರನ್ನು ಯಾವುದೇ ಕಾರಣಕ್ಕೂ ವರ್ಗಾವಣೆ ಮಾಡುವಂತಿಲ್ಲ. ಜತೆಗೆ, ವಿಧವೆಯರಿಗೆ ವರ್ಗಾವಣೆಯಿಂದ ವಿನಾಯಿತಿ ನೀಡಲಾಗಿದೆ. ಆದರೆ, ಟಿಡಿಎಸ್‌ ತಂತ್ರಾಂಶದಲ್ಲಿ ಇಂತಹ ಪ್ರಕರಣಗಳನ್ನು ನಮೂದಿಸಲು ಸ್ಥಳಾವಕಾಶ ಕಲ್ಪಿಸಲಾಗಿಲ್ಲ. ಹಾಗಾಗಿ ಹಲವು ಮಂದಿ 58 ವರ್ಷ ತುಂಬಿದ ಶಿಕ್ಷಕರು ಹಾಗೂ ವಿಧವೆಯರು ವರ್ಗಾವಣೆ ಪಟ್ಟಿಯಲ್ಲಿದ್ದರು. ಈ ಬಗ್ಗೆ ಪರಿಶೀಲಿಸುವಂತೆ ಮೇಲ್ಮನವಿ ಸಲ್ಲಿಸಿದರೂ ಇಲಾಖೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಹಾಗಾಗಿ ಶಿಕ್ಷಣ ಇಲಾಖೆ ಮತ್ತು ಅಧಿಕಾರಿಗಳ ವಿರುದ್ಧ ಶಿಕ್ಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

ಈಗಾಗಲೇ ಶಾಲೆಗಳು ಪ್ರಾರಂಭವಾಗಿ ಅರ್ಧ ವರ್ಷ ಕಳೆದಿದ್ದು, ಶಿಕ್ಷಕರು ತಮ್ಮ ಕುಟುಂಬಗಳನ್ನು ಬಿಟ್ಟು ಬೇರೆಡೆಗೆ ತೆರಳು ಸಿದ್ಧರಿಲ್ಲ. ಆದ್ದರಿಂದ ವರ್ಗಾವಣೆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸುವಂತೆ ಇಲಾಖೆ ಮೇಲೆ ಒತ್ತಡ ಹಾಕಿದ್ದರು ಎನ್ನಲಾಗಿದೆ. ಈ ಎಲ್ಲಾ ಕಾರಣಗಳಿಂದಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವರ್ಗಾವಣೆಯನ್ನು ಮತ್ತೆ ಮುಂದೂಡಿದೆ.

About the author

ಕನ್ನಡ ಟುಡೆ

Leave a Comment