ರಾಜ್ಯ ಸುದ್ದಿ

ಸರ್ಕಾರಿ ಸೇವೆಗಳ ಆನ್​ಲೈನ್ ಶುಲ್ಕ ಹೆಚ್ಚಳ

ಬೆಂಗಳೂರು: ರಾಜ್ಯ ಸರ್ಕಾರದ ವತಿಯಿಂದ ರಾಜ್ಯಾದ್ಯಂತ ಬಾಪೂಜಿ ಕೇಂದ್ರ ಹಾಗೂ ನೆಮ್ಮದಿ ಕೇಂದ್ರಗಳ ಮೂಲಕ ಒದಗಿಸುವ ನಾಗರಿಕ ಸೇವೆಗಳ ದರದಲ್ಲಿ 5-10 ರೂ. ವರೆಗೆ ದರ ಹೆಚ್ಚಳ ಮಾಡಲಾಗಿದೆ. ಪಹಣಿ, ಋಣಭಾರ ಪ್ರಮಾಣಪತ್ರ ಸೇರಿ ಅನೇಕ ಸೇವೆಗಳನ್ನು ನೀಡುತ್ತಿದ್ದು, ಸೇವೆಗಳ ಗುಣಮಟ್ಟ ಹೆಚ್ಚಳವಾಗಿದ್ದರೂ ಅನೇಕ ವರ್ಷಗಳ ಹಿಂದೆ ನಿಗದಿಯಾಗಿರುವ ದರ ಹೆಚ್ಚಿಸುವ ನಿರ್ಧಾರವನ್ನು ರಾಜ್ಯ ಸಚಿವ ಸಂಪುಟ ಸೋಮವಾರ ತೆಗೆದುಕೊಂಡಿದೆ. ಈ ಕುರಿತು ಮಾಹಿತಿ ನೀಡಿದ ಕಾನೂನು ಮತ್ತು ಸಂಸದೀಯ ಸಚಿವ ಕೃಷ್ಣಬೈರೇಗೌಡ, ಆನ್​ಲೈನ್ ಸೇವೆಗಳನ್ನು ಅಂಚೆ ಮೂಲಕ ಕಳಿಸುವ ಪ್ರಸ್ತಾವನೆಯೂ ಇರುವುದರಿಂದ ದರ ಹೆಚ್ಚಳಕ್ಕೆ ಒಪ್ಪಿಗೆ ನೀಡಲಾಗಿದೆ. ಸದ್ಯ 10 ರೂ. ಇರುವ ಸೇವೆಗಳು 15 ರೂ.ಗೆ, 15 ರೂ. ಇರುವ ಸೇವೆಗಳು 25 ರೂ.ಗೆ ಹೆಚ್ಚಳವಾಗಲಿವೆ ಎಂದರು.

ರಾಜ್ಯದಲ್ಲಿ 100 ಬಾಪೂಜಿ ಕೇಂದ್ರಗಳು ಹಾಗೂ ನೆಮ್ಮದಿ ಕೇಂದ್ರಗಳ ಮೂಲಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ 43, ಕಂದಾಯ ಇಲಾಖೆಯ 40 ಸೇವೆಗಳನ್ನು ನೀಡಲಾಗುತ್ತದೆ. ವಿದ್ಯುತ್ ಬಿಲ್, ಮೊಬೈಲ್ ಕರೆನ್ಸಿ ಪಾವತಿ, ವಿಮಾ ಕಂತು ಪಾವತಿ ಸೇರಿ ಇತರೆ ಇಲಾಖೆಗಳ 17 ಸೇವೆಗಳನ್ನೂ ನಿರ್ದಿಷ್ಟ ದರದಲ್ಲಿ ನೀಡಲಾಗುತ್ತಿದೆ. ಬೋರ್​ವೆಲ್ ಕೊರೆಸಲು ಅನುಮತಿ ಪತ್ರ, ಬೆಸ್ಕಾಂನಿಂದ ನಿರಾಕ್ಷೇಪಣಾ ಪತ್ರ, ಬಯೋಗ್ಯಾಸ್ ಅರ್ಜಿ, ಭೂ ಪರಿವರ್ತನೆಗೆ ನಿರಾಕ್ಷೇಪಣಾ ಪತ್ರ ಸೇರಿ ಅನೇಕ ಸೇವೆಗಳು ಸದ್ಯ ತಲಾ 10 ರೂ. ದರಪಟ್ಟಿಯಲ್ಲಿವೆ. ಜನಸಂಖ್ಯಾ ಪ್ರಮಾಣಪತ್ರ, ಆದಾಯ ಪ್ರಮಾಣ ಪತ್ರ, ವಾಸಸ್ಥಳ ದೃಢೀಕರಣ ಪತ್ರ, ಭೂರಹಿತ ಪ್ರಮಾಣ ಪತ್ರ ಸೇರಿ ಅನೇಕ ಯೋಜನೆಗಳು ತಲಾ 15 ರೂ. ದರಪಟ್ಟಿಯಲ್ಲಿವೆ.

ಸರ್ಕಾರಿ ರಜಾ ದಿನಗಳಿಗೆ ಒಪ್ಪಿಗೆ: ಒಟ್ಟು 21 ಸರ್ಕಾರಿ ರಜಾದಿನಗಳ ಪಟ್ಟಿಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಅದೇ ರೀತಿ ಸರ್ಕಾರಿ ರಜಾದಿನಗಳಲ್ಲಿ ಬದಲಾವಣೆ ಕುರಿತು ಶಿಫಾರಸು ನೀಡಲು ಸಚಿವ ಸಂಪುಟ ಉಪ ಸಮಿತಿ ರಚಿಸಲಾಗಿದೆ.

 

About the author

ಕನ್ನಡ ಟುಡೆ

Leave a Comment