ರಾಷ್ಟ್ರ ಸುದ್ದಿ

ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಅತಿಯಾದ ಪ್ರಚಾರ ಬೇಕಿರಲಿಲ್ಲ: ನಿವೃತ್ತ ಸೇನಾಧಿಕಾರಿ ಹೂಡಾ

ಚಂಡೀಗಢ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಬಳಿಯಿದ್ದ ಉಗ್ರರ ನೆಲೆಗಳ ಮೇಲೆ ಭಾರತೀಯ ಸೇನೆ ನಡೆಸಿದ್ದ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಅತಿಯಾದ ಪ್ರಚಾರ ಅಗತ್ಯವಿರಲಿಲ್ಲ ಎಂದು ನಿವೃತ್ತ ಸೇನಾಧಿಕಾರಿ ಡಿ.ಎಸ್.ಹೂಡಾ ಅವರು ಶುಕ್ರವಾರ ಹೇಳಿದ್ದಾರೆ.
ನಿನ್ನೆ ನಡೆದ ಸೇನಾ ಸಾಹಿತ್ಯ ಉತ್ಸವ 2018ರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಸೇನೆ ನಡೆಸಿದ್ದ ಸೀಮಿತ ದಾಳಿ ಬಗ್ಗೆ ಅತಿಯಾದ ಪ್ರಚಾರ ನಡೆಸಲಾಯಿತು ಎಂದು ನನಗೂ ಅನಿಸಿತ್ತು. ಸೇನಾ ಕಾರ್ಯಾಚರಣೆ ಅತ್ಯಂತ ಮುಖ್ಯವಾದದ್ದು. ಅದನ್ನು ನಾವು ಮಾಡಲೇಬೇಕು. ಅದನ್ನು ಇದೀಗ ಎಷ್ಟರಮಟ್ಟಿಗೆ ರಾಜಕೀಯ ಮಾಡಲಾಗಿದೆ. ಅದು ಒಳ್ಳೆಯದೋ ಅಥವಾ ಕೆಟ್ಟದೋ ಅದನ್ನು ರಾಜಕೀಯ ನಾಯಕರನ್ನು ಕೇಳಬೇಕು ಎಂದು ಹೇಳಿದ್ದಾರೆ. ಗಡಿ ನಿಯಂತ್ರಣ ರೇಖೆ ಬಳಿ ನಡೆಯುತ್ತಿರುವ ಬೆಳವಣಿಗೆಗಳನ್ನು ನೋಡಿದರೆ, ನಾವು ಸಾಕಷ್ಟು ಚತುರತೆಯಿಂದಿರಬೇಕು. ಭಯೋತ್ಪಾದನೆ, ಗಡಿಯಲ್ಲಿ ಅತಿಕ್ರಮಣ ಪ್ರವೇಶಗಳ ವಿರುದ್ದ ಪಾಕಿಸ್ತಾನ ಸೂಕ್ತ ಕ್ರಮಗಳನ್ನು ಕೈಗೊಳ್ಳದೇ ಹೋದಲ್ಲಿ, ನಿರೀಕ್ಷಿಸಲು ಸಾಧ್ಯವಾಗದಷ್ಟು ದಾಳಿ, ಪ್ರತಿದಾಳಿಗಳು ನಡೆಯುತ್ತವೆಂದು ತಿಳಿಸಿದ್ದಾರೆ.
2016ರಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆಸಲು ಭಾರತೀಯ ಸೇನೆ 2015ರಲ್ಲಿ ತಯಾರಿ ನಡೆಸಿತ್ತು. ವೈಫಲ್ಯವನ್ನು ಆಯ್ಕೆಯಾಗಿ ತೆಗೆದುಕೊಳ್ಳಬಾರದು ಎಂದು ಸೇನಾ ಯೋಧರಿಗೆ ತಿಳಿಸಲಾಗಿತ್ತು. ಈಗಲೂ ಅಗತ್ಯಬಿದ್ದರೆ, ಮತ್ತೊಂದು ಸೀಮಿತಿ ದಾಳಿ ನಡೆಸಲು ಸೇನೆ ಸಿದ್ಧವಿದೆ. ನಮ್ಮ ಸಾಮರ್ಥ್ಯವನ್ನು ನಾವು ತೋರಿಸಿದ್ದೇವೆ. ನಮ್ಮ ಯೋಧರು ಸಾಕಷ್ಟು ಪ್ರೇರಿತರಾಗಿದ್ದಾರೆ. ಈಗಾಗಲೇ ತಮ್ಮ ಶಕ್ತಿಯನ್ನು ತೋರಿಸಿದ್ದಾರೆ. ಮತ್ತೊಮ್ಮೆ ಸೀಮಿತ ದಾಳಿ ನಡೆಸಬೇಕೆಂದರೂ ಯೋಧರಲ್ಲಿ ಸಾಕಷ್ಟು ವಿಶ್ವಾಸಗಳಿವೆ. ಒಮ್ಮೆ ಸೀಮತ ದಾಳಿ ನಡೆಸಿದ್ದೇವೆಂದರೆ, ಮತ್ತೊಮ್ಮೆ ದಾಳಿ ನಡೆಸುವ ಬಲ ನಮ್ಮಲ್ಲಿದೆ ಎಂದಿದ್ದಾರೆ.

About the author

ಕನ್ನಡ ಟುಡೆ

Leave a Comment