ರಾಜ್ಯ ಸುದ್ದಿ

ಸರ್ವೋದಯ ಶಿಕ್ಷಣ ಟ್ರಸ್ಟ್‌ ಆಸ್ತಿ ಕಬಳಿಕೆ: ಹೊರಟ್ಟಿ ವಿರುದ್ಧ ದಾಖಲೆ ಬಿಚ್ಚಿಟ್ಟ ಪ್ರಸನ್ನಾನಂದ ಸ್ವಾಮೀಜಿ

ತುಮಕೂರು: ವಾಲ್ಮೀಕಿ ಸಂಸ್ಥಾನಕ್ಕೆ ಸೇರಿದ ಸರ್ವೋದಯ ಶಿಕ್ಷಣ ಟ್ರಸ್ಟ್‌ನ ಆಸ್ತಿಯನ್ನು ಕಾನೂನು ಬಾಹಿರವಾಗಿ ಕಬಳಿಸಿರುವ ಪರಿಷತ್‌ ಹಂಗಾಮಿ ಸಭಾಪತಿ ಸ್ಥಾನದಿಂದ ಬಸವರಾಜ್‌ ಹೊರಟ್ಟಿ ಅವರನ್ನು ಕೈಬಿಡಬೇಕು ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಧಾರವಾಡ ರಾಜನಹಳ್ಳಿ ಶ್ರೀ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಆಗ್ರಹಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,”ಹೊರಟ್ಟಿ ಅವರು ಅಕ್ರಮವಾಗಿ ಸುಮಾರು 35 ಕೋಟಿ ರೂ. ಮೌಲ್ಯದ 40 ಎಕರೆ ಜಾಗ ಕಬಳಿಸಿರುವುದಕ್ಕೆ ನಮ್ಮ ಬಳಿ ಸಾಕ್ಷಿ ಪುರಾವೆಗಳಿವೆ. ಆದರೆ ಆಸ್ತಿ ಕಬಳಿಸಿಲ್ಲ ಎಂದು ಹೇಳಿಕೆ ನೀಡಿ, ಜನರನ್ನು ದಾರಿ ತಪ್ಪಿಸುತ್ತಿದ್ದಾರೆ,”ಎಂದು ದಾಖಲೆ ಬಿಡುಗಡೆ ಮಾಡಿದರು. ”ಹೊರಟ್ಟಿ ಹೆಸರಿಗೆ 2007ರಲ್ಲಿ ಸೊಸೈಟಿ ಆ್ಯಕ್ಟ್ನಲ್ಲಿ ಪಹಣಿ ಬದಲಾಗಿದೆ. ಜುಲೈ 20, 2007ರಂದು ಹೊರಟ್ಟಿ ಕಬಳಿಸಿರುವ ಆಸ್ತಿ ಮಠಕ್ಕೆ ಸೇರಿದೆ ಎಂದು ಜಿಲ್ಲಾ ನ್ಯಾಯಾಲಯ ಆದೇಶ ನೀಡಿದ್ದರೂ ತಮ್ಮ ಪ್ರಭಾವ ಬಳಸಿ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಂದ ಆದೇಶ ತಂದು ಆಸ್ತಿ ಕಬಳಿಸಿದ್ದಾರೆ,” ಎಂದು ಆರೋಪಿಸಿದರು.

”ಸರ್ವೋದಯ ಶಿಕ್ಷಣ ಟ್ರಸ್ಟ್‌ಗೆ ಅಧ್ಯಕ್ಷ, ಕಾರ್ಯದರ್ಶಿ ಅವರೇ ಆಗಿದ್ದು, ಟ್ರಸ್ಟ್‌ ಕಾನೂನು ಬಾಹಿರವಾಗಿ ನಡೆಯುತ್ತಿದೆ. ಆಸ್ತಿ ಕಬಳಿಕೆ ಸಂಬಂಧ ಸಚಿವ ರಮೇಶ್‌ ಜಾರಕಿಹೊಳಿ ಹಾಗೂ ಶಾಸಕ ಸತೀಶ್‌ ಜಾರಕಿಹೊಳಿ ಅವರು ಸರಕಾರಕ್ಕೆ ಮನವಿ ಮಾಡಿದ್ದಾರೆ. ಶೀಘ್ರದಲ್ಲೇ ಮುಖ್ಯಮಂತ್ರಿಗಳಿಗೂ ದೂರು ನೀಡಲಾಗುವುದು. ಇಲ್ಲೂ ನ್ಯಾಯ ಸಿಗದಿದ್ದರೆ ರಸ್ತೆಗಿಳಿದು ಹೋರಾಟ ಮಾಡಲಾಗುವುದು,” ಎಂದು ಎಚ್ಚರಿಕೆ ನೀಡಿದರು.

ವೇದಿಕೆಗೆ ಸಿದ್ಧ ”ಆಸ್ತಿ ಕಬಳಿಸಿದ ಬಗ್ಗೆ ದಾಖಲೆಗಳೊಂದಿಗೆ ವೇದಿಕೆ ಬರುತ್ತೇವೆ. ಪಾರದರ್ಶಕವಾಗಿ ಚರ್ಚೆಯಾಗಲಿ.ಈ ವಿಚಾರ ಹೊರಟ್ಟಿಗೂ, ಮಠಕ್ಕೂ ಮಾತ್ರ ಸೀಮಿತವಾಗಿದೆ. ಜೆಡಿಎಸ್‌ಗೆ ಸಂಬಂಧವಿಲ್ಲ,” ಎಂದರು. ಸರ್ವೋದಯ ಟ್ರಸ್ಟ್‌ನ ಆಡಳಿತಾಧಿಕಾರಿ ಭರತ್‌ ಮಾತನಾಡಿ, ”ಜಿಲ್ಲಾ ನ್ಯಾಯಾಲಯದ ಆದೇಶದ ಪ್ರಕಾರ ಹೊರಟ್ಟಿ ಅವರಿಗೂ ಸಂಸ್ಥೆಯ ಜಾಗಕ್ಕೂ ಸಂಬಂಧವಿಲ್ಲ. ಸರ್ವೋದಯ ಟ್ರಸ್ಟ್‌ನ ಜಾಗ ಮಠಕ್ಕೆ ಸೇರಿದ್ದು ಎಂದು ಆದೇಶವಾಗಿತ್ತು. ಅವರು ಮಂತ್ರಿಗಳಿದ್ದ ಸಂದರ್ಭದಲ್ಲಿ ಸಂಸ್ಥೆಯ ವ್ಯವಹಾರಗಳನ್ನು ಮಾಡಿರುವ ದಾಖಲೆಗಳು ನಮ್ಮ ಬಳಿ ಇವೆ. ಸಭಾಪತಿಯಾಗಿ ಹೊರಟ್ಟಿ ಸುಳ್ಳು ಹೇಳಬಾರದು,” ಎಂದು ಆಕ್ರೋಶ ವ್ಯಕ್ತಪಡಿಸಿದರು.

About the author

ಕನ್ನಡ ಟುಡೆ

Leave a Comment