ರಾಜ್ಯ ಸುದ್ದಿ

ಸಾಲದ ಅಸಲು ಶೇ.100ರಷ್ಟು ಮರುಪಾವತಿಸುತ್ತೇನೆ ಎಂದ ಮಲ್ಯ

ಬೆಂಗಳೂರು: ದೇಶದ ವಿವಿಧ ಬ್ಯಾಂಕ್​ಗಳಿಗೆ ಸಾವಿರಾರು ಕೋಟಿ ರೂ. ವಂಚಿಸಿ ದೇಶ ತೊರೆದಿದ್ದ ಮದ್ಯದ ದೊರೆ ವಿಜಯ್​ ಮಲ್ಯ ಸರಣಿ ಟ್ವೀಟ್​ ಮಾಡುವ ಮೂಲಕ, ತನ್ನ ಸಾಲದ ಅಸಲನ್ನು ಶೇ. 100 ರಷ್ಟು ಮರುಪಾವತಿ ಮಾಡುತ್ತೇನೆ ಎಂದಿದ್ದಾರೆ. ಸರಣಿ ಟ್ವೀಟ್​ನಲ್ಲಿ ತಮ್ಮ ಏರ್​ಲೈನ್ಸ್​ ನಷ್ಟ ಹೊಂದಿದ ಬಗ್ಗೆ ಮತ್ತು ಮಾಧ್ಯಮಗಳು ತಮ್ಮ ಬಗ್ಗೆ ಪ್ರಸಾರ ಮಾಡುತ್ತಿರುವ ಸುದ್ದಿಗಳು ಸುಳ್ಳು ಎಂಬುದರ ಬಗ್ಗೆ ಪ್ರಸ್ತಾಪಿಸಿದ್ದಾರೆ.

ನಾನು ಸಾವಿರಾರು ಕೋಟಿ ಹಣ ವಂಚಿಸಿ ದೇಶ ತೊರೆದೆ ಎಂದು ರಾಜಕಾರಣಿಗಳು ಮತ್ತು ಮಾಧ್ಯಮಗಳು ನಿರಂತರವಾಗಿ ಮಾತನಾಡುತ್ತಿದ್ದಾರೆ. ಆದರೆ, ಇವೆಲ್ಲಾ ಸುಳ್ಳು. ಕರ್ನಾಟಕ ಹೈಕೋರ್ಟ್​ ಸಾಲ ಮರುಪಾವತಿ ಮಾಡುವಂತೆ ಸೂಚಿಸುವುದಕ್ಕಿಂತ ಮುಂಚಿನಿಂದಲೂ ನಾನು ಹಣ ಪಾವತಿಸುವುದಾಗಿ ಹೇಳುತ್ತಿದ್ದೇನೆ. ಈ ಕುರಿತು ಏಕೆ ಮಾಧ್ಯಮಗಳು ಏನೂ ಮಾತನಾಡುವುದಿಲ್ಲ ಎಂದು ಮೊದಲ ಟ್ವೀಟ್​ನಲ್ಲಿ ಪ್ರಶ್ನಿಸಿದ್ದಾರೆ.

ಮತ್ತೊಂದು ಟ್ವೀಟ್​ನಲ್ಲಿ, “ವಿಮಾನದ ಇಂಧನ ದರ (ಏವಿಯೇಷನ್ ಟರ್ಬೈನ್ ಫುಯೆಲ್​-ಎಟಿಎಫ್​) ಹೆಚ್ಚಾದ ಕಾರಣ ನಮ್ಮ ಏರ್​ಲೈನ್ಸ್​ ಆರ್ಥಿಕ ಬಿಕ್ಕಟ್ಟಿಗೆ ಸಿಲುಕುವಂತಾಯಿತು. ಕಿಂಗ್​ಫಿಷರ್​ ಅತಿ ಹೆಚ್ಚು ಅಂದರೆ ಬ್ಯಾರೆಲ್​ಗೆ 140 ಡಾಲರ್​ ನೀಡಿ ಇಂಧನ ಖರೀದಿಸುವಂತಾಗಿತ್ತು. ಈ ಸಂದರ್ಭದಲ್ಲಿ ನಮ್ಮ ಏರ್​ಲೈನ್ಸ್​ ನಷ್ಟ ನೋಡುವಂತಾಯಿತು. ನಾನು ಬ್ಯಾಂಕುಗಳಿಗೆ ಶೇ.100ರಷ್ಟು ಸಾಲದ ಅಸಲನ್ನು ಮರುಪಾವತಿ ಮಾಡುತ್ತೇನೆ ಎಂದು ಹೇಳಿದ್ದೇನೆ. ದಯವಿಟ್ಟೂ ಪಡೆಯಿರಿ” ಎಂದಿದ್ದಾರೆ.

ಮತ್ತೊಂದು ಟ್ವೀಟ್​ನಲ್ಲಿ, ಮಾಧ್ಯಮಗಳು ನನ್ನ ಹಸ್ತಾಂತರ ಬಗ್ಗೆ ಸುದ್ದಿ ಬಿತ್ತರಿಸುತ್ತಿವೆ. ಇದರ ಬಗ್ಗೆ ನಾನು ಕಾನೂನು ಹೋರಾಟಕ್ಕೆ ಮುಂದಾಗುತ್ತೇನೆ. ಅಲ್ಲದೆ, ನಾನು ಮಾಡಿರುವ ಸಾಲವನ್ನು 2016ರಿಂದಲೂ ಮಾರುಪಾವತಿ ಮಾಡಲು ಸಿದ್ಧವಿದ್ದರೂ ಬ್ಯಾಂಕ್​ಗಳು ಮತ್ತು ಭಾರತ ಸರ್ಕಾರ ನಿರಾಕರಣೆ ಮಾಡುತ್ತಿರುವುದೇಕೆ ಎಂದು ಪ್ರಶ್ನಿಸಿದ್ದಾರೆ.

About the author

ಕನ್ನಡ ಟುಡೆ

Leave a Comment