ರಾಜ್ಯ ಸುದ್ದಿ

ಸಾಲ ಮನ್ನಾದಿಂದ ರೈತರ ಮೇಲಿನ ಭಾರ ಕಡಿಮೆ ಆಗಲ್ಲ: ಕೃಷಿ ಸಚಿವ ಶಿವಶಂಕರರೆಡ್ಡಿ

ಮೈಸೂರು: ಸಾಲ ಮನ್ನಾದಿಂದ ರೈತರ ಮೇಲಿರುವ ಭಾರ ಕಡಿಮೆಯಾಗುವುದಿಲ್ಲ ಎಂಬುದು ನಿಜ. ಆದರೆ, ರೈತರ ಮೇಲಿರುವ ಭಾರವನ್ನು ಕಡಿಮೆ ಮಾಡುವ ಪ್ರಯತ್ನ ಇದಾಗಿದೆ ಎಂದು ರಾಜ್ಯದ ಕೃಷಿ ಸಚಿವ ಎನ್.ಎಚ್.ಶಿವಶಂಕರ ರೆಡ್ಡಿ ಹೇಳಿದರು. ಸುತ್ತೂರಿನಲ್ಲಿ ಸೋಮವಾರ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವದಲ್ಲಿ ‘ರೈತರ ಆದಾಯ ದ್ವಿಗುಣ-ಅವಕಾಶಗಳು ಹಾಗೂ ಸವಾಲುಗಳು’ ಕುರಿತು ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು. ದೇಶದಲ್ಲಿ ಶೇ.60ರಷ್ಟು ರೈತರು ಮಳೆ ಆಧರಿತ ಬೆಳೆ ಬೆಳೆಯುತ್ತಿದ್ದಾರೆ. ನಗರೀಕರಣ ಹೆಚ್ಚಾಗಿ ಕೃಷಿ ಭೂಮಿ ಕಡಿಮೆಯಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳಲ್ಲಿ ಸಮಗ್ರ ಕೃಷಿ ನೀತಿ ಇಲ್ಲ. ಸರಕಾರ ರೈತರಿಗೆ ಸುಸ್ಥಿರ ಮಾರುಕಟ್ಟೆ ವ್ಯವಸ್ಥೆ ಮಾಡಬೇಕಿದೆ ಎಂದು ಅವರು ಹೇಳಿದರು.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಮಾತನಾಡಿ, ಕೇಂದ್ರ ಸರಕಾರದ ಸಲ್ ಭೀಮಾ ಯೋಜನೆಯಿಂದ ರೈತರಿಗೆ ಅನುಕೂಲವಾಗಿಲ್ಲ. ಈ ಯೋಜನೆಯಲ್ಲಿ ಈಗ ಶೇ.40ರಷ್ಟು ಪ್ರೀಮಿಯಂ ಹಣ ವಿಮಾ ಕಂಪನಿಗಳಿಗೆ ಹೋಗುತ್ತಿದೆ. ಈ ಹಿಂದೆ ಇದ್ದ ಯೋಜನೆಯಲ್ಲಿ ಶೇ.12ರಷ್ಟು ಪ್ರೀಮಿಯಂ ಹಣ ವಿಮಾ ಕಂಪನಿಗಳಿಗೆ ಹೋಗುತ್ತಿತ್ತು ಎಂದರು. ಮಾಜಿ ಸಚಿವ ಸಿ.ಎಚ್.ವಿಜಯಶಂಕರ್ ಅವರು ಮಾತನಾಡಿ, ಕೃಷಿ ಹಾಗೂ ಕೃಷಿ ಆಧರಿತ ಕೈಗಾರಿಕೆಗಳು ಇಂದು ವಿನಾಶದ ಅಂಚಿಗೆ ಬಂದಿವೆ. ಕೃಷಿ ಭೂಮಿ ಇವತ್ತು ಬಂಡವಾಳಶಾಹಿಗಳ ಕೈಯಲ್ಲಿವೆ. ಕೃಷಿ ಶಾಪವೆಂದು ಜನರು ಇಂದು ಪರಿಗಣಿಸಿದ್ದಾರೆ. ಕೃಷಿಭೂಮಿಯನ್ನು ಯಾವುದೇ ಕಾರಣಕ್ಕೂ ಅನ್ಯ ಉದ್ದೇಶಗಳಿಗೆ ನೀಡದೇ ಕಾಪಾಡಿಕೊಳ್ಳಬೇಕಾದ ಅಗತ್ಯ ಇಂದು ಹೆಚ್ಚಾಗಿದೆ. ಈ ಕುರಿತು ರಾಜ್ಯ ಸರಕಾರ ಕಾನೂನು ರೂಪಿಸಬೇಕು ಎಂದು ಆಗ್ರಹಿಸಿದರು.

ಪತ್ರಕರ್ತ ಚಿನ್ನಸ್ವಾಮಿ ವಡ್ಡಗೆರೆ ಮಾತನಾಡಿ, ರೈತರಿಗೆ ರಾಜಕಾರಣಿಗಳು, ಅಧಿಕಾರಿಗಳ ಮೇಲೆ ನಂಬಿಕೆ ಹೋಗಿದೆ. ಸಾಲ ಮನ್ನಾ, ರೈತರ ಬ್ಯಾಂಕ್ ಖಾತೆಗೆ ಹಣ ಹಾಕುವುದರಿಂದ ರೈತರ ಆದಾಯ ದ್ವಿಗುಣವಾಗುವುದಿಲ್ಲ. ಕೃಷಿಗೆ ನೀರು ಉಸಿರು ಇದ್ದಂತೆ. ಕೆರೆಕಟ್ಟೆಗಳನ್ನು ತುಂಬಿಸಬೇಕು. ರೈತರ ಜಮೀನುಗಳಲ್ಲೇ ಚೆಕ್‌ಡ್ಯಾಮ್‌ಗಳನ್ನು ನಿರ್ಮಿಸಬೇಕು. ತಾಲೂಕುವಾರು ಅರಣ್ಯ ಆಧರಿತ ನರ್ಸರಿಗಳನ್ನು ತೆರೆಯಬೇಕು. ಈ ಎಲ್ಲದರಿಂದ ರೈತರ ಆದಾಯ ದ್ವಿಗುಣವಾಗಲು ಸಾಧ್ಯ ಎಂದರು.

About the author

ಕನ್ನಡ ಟುಡೆ

Leave a Comment