ರಾಜಕೀಯ

ಸಿಎಂ ಕುಮಾರಸ್ವಾಮಿ ಕೆಳಗಿಳಿಸುವ ತನಕ ಹೋರಾಟ: ಬಿ.ಎಸ್‌.ಯಡಿಯೂರಪ್ಪ ಘೋಷಣೆ

ಬೆಂಗಳೂರು: ಮುಖ್ಯಮಂತ್ರಿ ಸ್ಥಾನದಿಂದ ಎಚ್‌.ಡಿ.ಕುಮಾರಸ್ವಾಮಿಯವರನ್ನು ಕಿತ್ತೊಗೆದು ನಾಡಿನ 6.5 ಕೋಟಿ ಜನರಿಗೆ ನ್ಯಾಯ ದೊರಕಿಸಿ ಕೊಡುವವರೆಗೂ ಸರಕಾರದ ವಿರುದ್ಧ ನಿರಂತರ ಹೋರಾಟ ನಡೆಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ  ಬಿ.ಎಸ್‌.ಯಡಿಯೂರಪ್ಪ ಗುಡುಗಿದ್ದಾರೆ.

ಮೈಸೂರು ಬ್ಯಾಂಕ್‌ ವೃತ್ತದಲ್ಲಿ ಬಿಜೆಪಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ”ರೈತರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ. ಸಂಪನ್ಮೂಲ ಕ್ರೋಢೀಕರಣ ಒಂದು ಕುಟುಂಬಕ್ಕೆ ಸೀಮಿತವಾಗಿದೆ. ಬರ ಪೀಡಿತ ಪ್ರದೇಶಗಳಿಗೆ ಪರಿಹಾರ ಕಾರ್ಯ ತಲುಪಿಸುವಲ್ಲಿ ಮೈತ್ರಿ ಸರಕಾರ ವಿಫಲವಾಗಿದೆ. ಹೀಗಾಗಿ ಕುಮಾರಸ್ವಾಮಿಯವರನ್ನು ಅಧಿಕಾರದಿಂದ ಕೆಳಗಿಳಿಸುವವರೆಗೂ ನಿರಂತರ ಹೋರಾಟ ನಡೆಸಲಾಗುವುದು,” ಎಂದು ಹೇಳಿದರು. ‘ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿದ ರೈತ ಮಹಿಳೆ ವಿರುದ್ಧ ಅವಮಾನಕಾರಿ ಹೇಳಿಕೆ ನೀಡುವ ಮೂಲಕ ರಾಜ್ಯದ ಎಲ್ಲಾ ಹೆಣ್ಣು ಮಕ್ಕಳಿಗೆ ಕುಮಾರಸ್ವಾಮಿ ಅಪಮಾನ ಮಾಡಿದ್ದಾರೆ. ಈ ಬಗ್ಗೆ ಕ್ಷಮೆ ಕೇಳಿ ಎಂದರೆ ಕುಮಾರಸ್ವಾಮಿ ಸ್ಪಂದಿಸಲು ಸಿದ್ಧರಿಲ್ಲ. ನೈತಿಕವಾಗಿ ದಿವಾಳಿಗೊಂಡಿರುವ ಅವರಿಗೆ ಅಧಿಕಾರದಲ್ಲಿ ಮುಂದುವರಿಯುವ ಹಕ್ಕಿಲ್ಲ ,”ಎಂದು ಆಕ್ರೋಶ ವ್ಯಕ್ತಪಡಿಸಿದರು.

”ಕಳೆದ ಚುನಾವಣೆಯಲ್ಲಿ ಕೇವಲ 38 ಸ್ಥಾನ ಗೆದ್ದಿರುವುದು ನೀವು ಬಿಜೆಪಿಗೆ ಅಧಿಕಾರ ನೀಡಬಾರದೆಂಬ ಕಾರಣಕ್ಕೆ ಕಾಂಗ್ರೆಸ್‌ ಬೆಂಬಲದೊಂದಿಗೆ ಮುಖ್ಯಮಂತ್ರಿಯಾಗಿದ್ದೀರಿ. ಆದರೆ ಅಧಿಕಾರ ಸಿಕ್ಕ ತಕ್ಷಣ ಜನಹಿತ ಮರೆತಿದ್ದೀರಿ. ರಾಜ್ಯದ 100 ತಾಲೂಕುಗಳಲ್ಲಿ ಬರ ಇದ್ದರೂ ಸಚಿವರು ಜಿಲ್ಲಾ ಪ್ರವಾಸ ಮಾಡುತ್ತಿಲ್ಲ. ಶಾಸಕರ ನಿಧಿಗೆ ನೀಡಿದ 2 ಕೋಟಿ ರೂ.ಗಳ ಪೈಕಿ ಒಂದು ಪೈಸೆಯೂ ಬಿಡುಗಡೆಯಾಗಿಲ್ಲ. ಆದರೆ 104 ಸ್ಥಾನಗಳನ್ನು ಗೆದ್ದಿರುವ ಪ್ರಮುಖ ಪ್ರತಿಪಕ್ಷ ಬಿಜೆಪಿ ವಿರುದ್ಧ ಹಗುರವಾಗಿ ಮಾತನಾಡಿದ್ದಲ್ಲದೇ ನಮಗೆ ಧಮಕಿ ಹಾಕುತ್ತೀರಾ ? ನಿಮ್ಮ ಈ ಬೆದರಿಕೆಗಳಿಗೆ ಬಗ್ಗುವುದಿಲ್ಲ ,”ಎಂದು ವಾಗ್ದಾಳಿ ನಡೆಸಿದರು.

”ಬೆಳಗಾವಿಯಲ್ಲಿ ಡಿಸೆಂಬರ್‌ 10 ರಿಂದ ಆರಂಭವಾಗುವ ವಿಧಾನಸಭೆ ಅಧಿವೇಶನದ ಆರಂಭದ ದಿನ 1 ಲಕ್ಷ ರೈತರನ್ನು ಸೇರಿಸಿ ಹೋರಾಟ ನಡೆಸುತ್ತೇವೆ. ಈಗಷ್ಟೇ ಅಧಿಕಾರಕ್ಕೆ ಬಂದಿದ್ದೀರಿ ಎಂದು ಇಷ್ಟು ದಿನ ಸುಮ್ಮನಿದ್ದೆವು. ಆದರೆ ಇನ್ನು ಮುಂದೆ ಸುಮ್ಮನೆ ಕೂರಲು ಸಾಧ್ಯವಿಲ್ಲ. ನಿಮಗೆ ಸಾಕಷ್ಟು ಸಮಯ ಕೊಟ್ಟಾಗಿದೆ. ಆದರೆ ಕಬ್ಬು ಬೆಳೆಗಾರರಿಗೆ ನ್ಯಾಯಯುತ ಬೆಲೆ ನೀಡುವುದಕ್ಕೆ ನಿಮಗೆ ಸಾಧ್ಯವಾಗಿಲ್ಲ. ಕಬ್ಬಿನ ಬಾಕಿ ಹಣ ನೀಡಿಲ್ಲ. ಸಾಲ ಮನ್ನಾ ಮಾಡಿದ್ದೇನೆ ಎಂದು ಕಳೆದ 6 ತಿಂಗಳಿಂದ ಹೇಳುತ್ತಾ ಇದ್ದೀರಿ. ಆದರೆ ರಾಷ್ಟ್ರೀಕೃತ ಬ್ಯಾಂಕ್‌ಗಳು ರೈತರಿಗೆ ನೋಟಿಸ್‌ ನೀಡುವುದನ್ನು ನಿಲ್ಲಿಸಿಲ್ಲ. ಆದರೆ ಇದಕ್ಕೆ ನೀವು ಪ್ರಧಾನಿ ನರೇಂದ್ರ ಮೋದಿಯವರನ್ನು ದೂರುತ್ತಿದ್ದೀರಿ. ನಿಮ್ಮ ಈ ಲಜ್ಜೆಗೆಟ್ಟ ವರ್ತನೆಗೆ ಧಿಕ್ಕಾರ ಎನ್ನದೆ ಇನ್ನೇನು ಹೇಳಲು ಸಾಧ್ಯ,” ಎಂದು ಪ್ರಶ್ನಿಸಿದರು.

ಮಾಜಿ ಡಿಸಿಎಂ ಆರ್‌.ಅಶೋಕ ಮಾತನಾಡಿ, ”ಸೊಕ್ಕಿನಿಂದ ಮೀಸೆ ತಿರುವಿದ ಎಂತೆಂಥÜವರೋ ಮಣ್ಣಾಗಿ ಹೋಗಿದ್ದಾರೆ. ನಿಮ್ಮ ಅಹಂಕಾರದ ಮಾತುಗಳು ಬಹಳ ಕಾಲ ನಡೆಯುವುದಿಲ್ಲ ,”ಎಂದು ಕಿವಿ ಮಾತು ಹೇಳಿದರು. ಸಂಸದ ಪಿ.ಸಿ.ಮೋಹನ್‌, ಶಾಸಕರಾದ ಡಾ.ಅಶ್ವತ್ಥನಾರಾಯಣ, ಉದಯ ಗರುಡಾಚಾರ್‌, ವಿಧಾನ ಪರಿಷತ್‌ ಸದಸ್ಯ ಎನ್‌.ರವಿಕುಮಾರ್‌ ಮತ್ತಿತರ ಮುಖಂಡರು ಭಾಗವಹಿಸಿದ್ದರು.

About the author

ಕನ್ನಡ ಟುಡೆ

Leave a Comment