ರಾಜಕೀಯ

ಸಿಎಂ ಸಿದ್ದರಾಮಯ್ಯರಿಂದ 418 ಕೋಟಿ ಹಣ ಲೂಟಿ – ದಾಖಲೆ ಬಿಡುಗಡೆ ಮಾಡಿದ ಬಿಎಸ್ ಯಡಿಯೂರಪ್ಪ

ಬೆಂಗಳೂರು: ಕಲ್ಲಿದ್ದಲು ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿಯಾಗಿ ರಾಜ್ಯ ಸರ್ಕಾರದ ಹಣವನ್ನ ಲೂಟಿ ಹೊಡೆದಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಗಂಭೀರ ಆರೋಪ ಮಾಡಿದ್ದಾರೆ.

ಕೆಪಿಸಿಎಲ್ ನ ಅಧ್ಯಕ್ಷರಾಗಿ ಸಿಎಂ ಸಿದ್ದರಾಮಯ್ಯ 11 ಭಾರಿ ಬಜೆಟ್ ಮಂಡಿಸಿದ್ದಾರೆ. ಕೇಂದ್ರ ಮತ್ತು ಸುಪ್ರೀಂಕೋರ್ಟ್ ಆದೇಶವನ್ನು ಉಲ್ಲಂಘಿಸಿ ರಾಜ್ಯ ಸರ್ಕಾರದ ಹಣವನ್ನು ಸಿಎಂ ಲೂಟಿ ಮಾಡಿದ್ದಾರೆ. ಹೀಗಾಗಿ ಕಲ್ಲಿದ್ದಲು ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಬಿಎಸ್ ಯಡಿಯೂರಪ್ಪ ಆಗ್ರಹಿಸಿದ್ದಾರೆ.

ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ತಾವು ಮಾಡಿದ ಆರೋಪ ಕುರಿತು ಬಿಎಸ್ ಯಡಿಯೂರಪ್ಪ ದಾಖಲೆ ಬಿಡುಗಡೆ ಮಾಡಿದರು.

ಬಳಿಕ ಮಾತನಾಡಿದ ಬಿಎಸ್ ಯಡಿಯೂರಪ್ಪ, ಕಲ್ಲಿದ್ದಲು ಗುತ್ತಿಗೆ ರದ್ದು ಕುರಿತಂತೆ ಖಾಸಗಿ ಸಂಸ್ಥ ಪಾವತಿಸಬೇಕಿದ್ದ 418 ಕೋಟಿ ರೂ. ಹಣವನ್ನು ತಾವು ಅಧ್ಯಕ್ಷರಾದ ಕರ್ನಾಟಕ ಪವರ್ ಕಾರ್ಪೊರೇಷನ್ ಲಿಮಿಟೆಡ್ ಮೂಲಕ ಸಿ.ಎಂ.‌ಸಿದ್ದರಾಮಯ್ಯ ಪಾವತಿಸಿದ್ದಾರೆ. ಸಿಎಂ ಹಾಗೂ ಇಂಧನ ಸಚಿವ ಖಾಸಗಿ ಸಂಸ್ಥೆ ಜತೆ ಒಪ್ಪಂದದಿಂದ ಜನರ ಹಣ ಪಾವತಿಸಿ ಭ್ರಷ್ಟಾಚಾರ ಎಸಗಿದ್ದಾರೆ ಎಂದು ದೂರಿದರು.

ಕಲ್ಲಿದ್ದಲು ಪೂರೈಕೆ ಹಗರಣದಲ್ಲಿ 418 ಕೋಟಿ ರೂಪಾಯಿ ಲೂಟಿ ಹೊಡೆಯಲಾಗಿದೆ. ಇದರಲ್ಲಿ ಕೆಪಿಸಿಎಲ್ ಅಧ್ಯಕ್ಷರು, ಸಿಎಂ ಸಿದ್ದರಾಮಯ್ಯ ಅವರು ನೇರವಾಗಿ ಭಾಗಿಯಾಗಿದ್ದಾರೆ. ಕಳೆದ 30ವರ್ಷಗಳಲ್ಲಿ ಕಂಡು ಕೇಳರಿಯದ ಹಗರಣ ಇದಾಗಿದೆ ಎಂದು ಬಿಎಸ್ ಯಡಿಯೂರಪ್ಪ ಹೇಳಿದರು.

ಕೋರ್ಟ್ ಆದೇಶ ಉಲ್ಲಂಘಿಸಿ 24ಗಂಟೆಯೊಳಗೆ ಶೇ.26ರಷ್ಟು ದಂಡವನ್ನು ಕೆಪಿಸಿಎಲ್ ಬದಲು ರಾಜ್ಯ ಸರ್ಕಾರವೇ ಭರಿಸಿದೆ. ಕೆಪಿಸಿಎಲ್ ಜವಾಬ್ದಾರಿ ಶೇ.24ರಷ್ಟು ಮಾತ್ರ ಇದೆ. ಕೋರ್ಟ್ ಆದೇಶ ಉಲ್ಲಂಘಿಸಿ ದಂಡ ಕಟ್ಟಿದ್ದೇಕೆ? ಹಾಗಾದರೆ 24ಗಂಟೆಯೊಳಗೆ ನಡೆದ ಒಳಒಪ್ಪಂದ ಏನು? ಸಿಎಂ ಇದರಲ್ಲಿ ನೇರವಾಗಿ ಭಾಗಿಯಾಗಿದ್ದಾರೆ. ಸಿಎಂ ಹಗಲು ದರೋಡೆಯನ್ನು ಕೇಂದ್ರದ ಗಮನಕ್ಕೆ ತರುತ್ತೇವೆ ಎಂದು ಬಿಎಸ್ ವೈ ತಿಳಿಸಿದರು

About the author

ಕನ್ನಡ ಟುಡೆ

Leave a Comment