ರಾಜಕೀಯ

ಸಿಎಂ ಸಿದ್ದರಾಮಯ್ಯ ಆಹ್ವಾನವನ್ನು ತಿರಸ್ಕರಿಸಿದ ಮರಿಸ್ವಾಮಿಗೆ ಸನ್ಮಾನ ಮಾಡಿದ ಮಾಜಿ ಸಿಎಂ ಎಚ್​ಡಿಕೆ.

ಮೈಸೂರು: ಸಿಎಂ ಸಿದ್ದರಾಮಯ್ಯ ಆಹ್ವಾನವನ್ನು ತಿರಸ್ಕರಿಸಿ ಕಾಂಗ್ರೆಸ್​ಗೆ ಬರುವುದಿಲ್ಲವೆಂದು ಟಾಂಗ್​ ನೀಡಿದ್ದ ಹಳೆಕೆಸರೆ ಗ್ರಾಮ ಪಂಚಾಯಿತಿ ಸದಸ್ಯ ಮರಿಸ್ವಾಮಿಯವರಿಗೆ ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಸನ್ಮಾನ ಮಾಡಿದ್ದಾರೆ.

ಹಳೆಕೆಸರಿಯಲ್ಲಿ ಏ.25ರಂದು ಸಿದ್ದರಾಮಯ್ಯ ಪ್ರಚಾರ ಮಾಡಿದ ಸಂದರ್ಭದಲ್ಲಿ ಮರಿಸ್ವಾಮಿಯನ್ನು ಕಾಂಗ್ರೆಸ್​ಗೆ ಆಹ್ವಾನಿಸಿದ್ದರು. ಆದರೆ ಮರಿಸ್ವಾಮಿ ಒಪ್ಪಿರಲಿಲ್ಲ. ಅದಕ್ಕೆ ಪ್ರತಿಯಾಗಿ ಸಿಎಂ, ಮತವನ್ನಾದ್ರೂ ಹಾಕು ಎಂದು ಸಿಎಂ ಹೇಳಿದ್ದರು. ಆದರೆ ಇದಕ್ಕೆ ಒಪ್ಪದ ಮರಿಸ್ವಾಮಿ, ಜೆಡಿಎಸ್​ನಲ್ಲಿದ್ದೇನೆ ನಿಮ್ಮ ಜತೆ ಬರಲಾಗದು ಎಂದು ಹೇಳಿದ್ದರು. ಇದರಿಂದ ಸಂತಸಗೊಂಡ ಎಚ್​.ಡಿ.ಕುಮಾರಸ್ವಾಮಿ ತಾವು ತಂಗಿದ್ದ ರೆಸಾರ್ಟ್​ಗೆ ಮರಿಸ್ವಾಮಿಯನ್ನು ಕರೆಸಿಕೊಂಡು ಇಂದು ಸನ್ಮಾನ ಮಾಡಿದ್ದಾರೆ. ನಂತರ ಮಾತನಾಡಿ, ಮರಿಸ್ವಾಮಿ ಒಬ್ಬ ನಿಷ್ಠಾವಂತ ಕಾರ್ಯಕರ್ತ. ಇಂಥವರಿಂದಲೇ ನಮ್ಮ ಆತ್ಮಬಲ ಹೆಚ್ಚಿದೆ. ಅಲ್ಲದೆ ಪಕ್ಷವೂ ಸದೃಢವಾಗಿದೆ ಎಂದರು.

ತಿ.ನರಸೀಪುರ, ವರುಣ ಕ್ಷೇತ್ರಗಳಲ್ಲಿ ವ್ಯಾಪಕವಾದ ಮರಳುದಂಧೆ ನಡೆಯುತ್ತಿದೆ. ಸಾರ್ವಜನಿಕರ ಹಣ ಲೂಟಿಯಾಗುತ್ತಿದೆ. ಇದಕ್ಕೆಲ್ಲ ಜೆಡೆಎಸ್ ಬೆಂಬಲ ನೀಡಲು ಸಾಧ್ಯವಿಲ್ಲ. ಇಲ್ಲಿವರೆಗೆ ಜೆಡಿಎಸ್​ ಸ್ಟ್ರ್ಯಾಟಜಿ ಬೇರೆಯಾಗಿತ್ತು. ಇನ್ನು ಮುಂದೆ ಬೇರೆ ತರ ಇರತ್ತೆ ಎಂದು ಹೇಳಿದರು.
ಇನ್ನು ವರುಣದಲ್ಲಿ ವಿಜಯೇಂದ್ರಗೆ ಬಿಜೆಪಿ ಟಿಕೆಟ್​ ಕೈ ತಪ್ಪಿದ ವಿಚಾರದ ಬಗ್ಗೆ ಮಾತನಾಡಿ, ಬಿಜೆಪಿ, ಕಾಂಗ್ರೆಸ್​ ಒಳಒಪ್ಪಂದದಿಂದ ವಿಜಯೇಂದ್ರಗೆ ಟಿಕೆಟ್​ ತಪ್ಪಿದೆ. ಕಳೆದ ಚುನಾವಣೆಯಲ್ಲಿ ವರುಣ ಬಿಜೆಪಿ ಅಭ್ಯರ್ಥಿ ನಾಪತ್ತೆಯಾಗಿದ್ರು ಈ ಬಾರಿ ನಾಮಪತ್ರ ಸಲ್ಲಿಕೆಗಿಂತ ಮುಂಚಿತವಾಗಿಯೇ ಒಪ್ಪಂದ ಆಗಿದೆ. ವಿಜಯೇಂದ್ರಗೆ ಟಿಕೆಟ್​ ತಪ್ಪಿದ್ದರಿಂದ ರಾಜ್ಯದ ಹಲವು ಭಾಗಗಳಲ್ಲಿ ಜೆಡಿಎಸ್​ಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

About the author

ಕನ್ನಡ ಟುಡೆ

Leave a Comment