ರಾಜ್ಯ ಸುದ್ದಿ

ಸಿದ್ದಗಂಗಾ ಶ್ರೀಗಳಿಗೆ ಮತ್ತೆ ಐಸಿಯುನಲ್ಲಿ ಚಿಕಿತ್ಸೆ

ತುಮಕೂರು: ಆರೋಗ್ಯದಲ್ಲಿ ಶ್ರೀಗಳಿಗೆ ಚೇತರಿಕೆ ಕಂಡು ಬಂದಿದ್ದ ಹಿನ್ನೆಲೆಯಲ್ಲಿ ಗುರುವಾರ ಐಸಿಯುನಿಂದ ವಿಶೇಷ ವಾರ್ಡ್‌ಗೆ ಸ್ಥಳಾಂತರಿಸಲಾಗಿತ್ತು. ಆದರೆ ಮತ್ತೆ ಕೊಂಚ ಏರುಪೇರಾಗಿದ್ದರಿಂದ ಶುಕ್ರವಾರ ಐಸಿಯುಗೆ ದಾಖಲಿಸಿ ಚಿಕಿತ್ಸೆ ಮುಂದುವರಿಸಲಾಗಿದೆ. ವಾರ್ಡ್‌ನಲ್ಲಿ ಶಿವಪೂಜೆಗಾಗಿ ನೀಡಿರುವ ಪ್ರತ್ಯೇಕ ಸ್ಥಳದಲ್ಲಿ ಶ್ರೀಗಳು ಶುಕ್ರವಾರ ಇಷ್ಟಲಿಂಗ ಪೂಜೆ ಮಾಡಿ, ರುದ್ರಾಭಿಷೇಕ ನೆರವೇರಿಸಿದ್ದಾರೆ.

ಚೆನ್ನೈನ ರೇಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿದ್ಧಗಂಗಾ ಶ್ರೀ ಡಾ.ಶಿವಕುಮಾರಸ್ವಾಮೀಜಿ ಅವರನ್ನು ಶುಕ್ರವಾರ ಸಿಎಂ ಎಚ್‌.ಡಿ.ಕುಮಾರಸ್ವಾಮಿ, ಮಾಜಿ ಸಿಎಂಗಳಾದ ಬಿ.ಎಸ್‌.ಯಡಿಯೂರಪ್ಪ ಹಾಗೂ ಎಸ್‌.ಎಂ.ಕೃಷ್ಣ ಅವರು ಪ್ರತ್ಯೇಕವಾಗಿ ಭೇಟಿಯಾಗಿ ಆರೋಗ್ಯ ವಿಚಾರಿಸಿದರು. ಶ್ರೀಗಳು ಅನಾರೋಗ್ಯಕ್ಕೆ ತುತ್ತಾಗಿ ಚೆನ್ನೈ ಆಸ್ಪತ್ರೆಗೆ ದಾಖಲಾದ ದಿನದಿಂದಲೂ ಎಚ್‌.ಡಿ.ಕುಮಾರಸ್ವಾಮಿ ಅವರು ಶ್ರೀಗಳ ಆರೋಗ್ಯ ಕುರಿತು ಮಾಹಿತಿ ಪಡೆದುಕೊಳ್ಳುತ್ತಿದ್ದರು. ಶುಕ್ರವಾರ ಬೆಳಗಾವಿಯಿಂದ ನೇರವಾಗಿ ಚೆನ್ನೈಗೆ ಆಗಮಿಸಿ, ಶ್ರೀಗಳ ಆರೋಗ್ಯ ವಿಚಾರಿಸಿ ಆಶೀರ್ವಾದ ಪಡೆದುಕೊಂಡರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್‌ಡಿಕೆ, ”ಶ್ರೀಗಳು ಶೀಘ್ರಗುಣಮುಖರಾಗಲಿ. ಅವರು ಮಾಡುತ್ತಿರುವ ತ್ರಿವಿಧ ದಾಸೋಹ ಕೈಂಕರ್ಯ ಇಡೀ ದೇಶಕ್ಕೆ ಮಾದರಿಯಾಗಿದ್ದು, ಅವರ ಆಶೀರ್ವಾದ ಎಲ್ಲರ ಮೇಲೂ ನಿರಂತರವಾಗಿರಲಿ,”ಎಂದು ಪ್ರಾರ್ಥಿಸುವುದಾಗಿ ತಿಳಿಸಿದರು. ಶ್ರೀಗಳ ಭೇಟಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಪ್ರತಿಪಕ್ಷ ನಾಯಕ ಬಿ.ಎಸ್‌.ಯಡಿಯೂರಪ್ಪ,” ಶ್ರೀಗಳಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡಿ ದೊಡ್ಡ ಸಾಧನೆ ಮಾಡಿದ ಡಾ.ಮಹಮ್ಮದ್‌ ರೇಲಾ ಅವರಿಗೆ ರಾಜ್ಯದ ಜನತೆ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಇನ್ನು ಎಂಟತ್ತು ದಿನಗಳಲ್ಲಿ ಪೂರ್ಣ ಆರೋಗ್ಯವಂತರಾಗಿ ಶ್ರೀಗಳು ವಾಪಸ್ಸು ತುಮಕೂರಿಗೆ ಹೋಗಿ ನಮ್ಮೆಲ್ಲರಿಗೂ ದರ್ಶನ ಕೊಡುವ ಸೌಭಾಗ್ಯ ನಮಗೆ ಸಿಗುತ್ತದೆ,” ಎಂದರು. ಬಿಎಸ್‌ವೈ ಜತೆಗೆ ಮಾಜಿ ಸಚಿವ ಸೊಗಡು ಶಿವಣ್ಣ ಇದ್ದರು.

ಮಧ್ಯಾಹ್ನ 12 ಗಂಟೆ ವೇಳೆಗೆ ಮಾಜಿ ಸಿಎಂ ಎಸ್‌.ಎಂ.ಕೃಷ್ಣ ಅವರು ಶ್ರೀಗಳನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಬಳಿಕ ಪ್ರತ್ಯೇಕ ಕೋಣೆಯಲ್ಲಿ ಆಸ್ಪತ್ರೆಯ ವೈದ್ಯರು ಶ್ರೀಗಳ ಆರೋಗ್ಯದ ಕುರಿತು ಮಾಹಿತಿ ನೀಡಿದರು.

About the author

ಕನ್ನಡ ಟುಡೆ

Leave a Comment