ರಾಷ್ಟ್ರ ಸುದ್ದಿ

ಸಿದ್ದಗಂಗಾ ಸ್ವಾಮೀಜಿ ವಾರ್ಡ್‌ಗೆ ಶಿಫ್ಟ್‌: ಮುಂದಿನ ವಾರ ಮಠಕ್ಕೆ

ತುಮಕೂರು : ಚೆನ್ನೈನ ರೇಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿದ್ಧಗಂಗಾ ಶ್ರೀ ಡಾ.ಶಿವಕುಮಾರಸ್ವಾಮಿ ಅವರನ್ನು ಗುರುವಾರ ಐಸಿಯುನಿಂದ ವಿಶೇಷ ವಾರ್ಡ್‌ಗೆ ಸ್ಥಳಾಂತರ ಮಾಡಲಾಗಿದೆ. ವಿಶೇಷ ವಾರ್ಡ್‌ನಲ್ಲಿರುವ ಶ್ರೀಗಳಿಗೆ ವಿಶ್ರಾಂತಿ ಬೇಕಿರುವುದರಿಂದ ಹಾಗೂ ಸೋಂಕು ತಗುಲದಂತೆ ಎಚ್ಚರಿಕೆ ವಹಿಸಬೇಕಿರುವುದರಿಂದ ಶ್ರೀಗಳ ಭೇಟಿಗೆ ಭಕ್ತರು ಆಸ್ಪತ್ರೆ ಕಡೆಗೆ ಬರಬಾರದು ಎಂದು ಸಿದ್ಧಗಂಗಾ ಮಠದ ಕಿರಿಯ ಶ್ರೀ ಸಿದ್ಧಲಿಂಗಸ್ವಾಮಿ ಮನವಿ ಮಾಡಿದ್ದಾರೆ.

” ಸ್ವಾಮೀಜಿ ಆರೋಗ್ಯವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಇನ್ನೂ ಕೆಲವು ದಿನ ಶ್ರೀಗಳನ್ನು ಸೂಕ್ಷ್ಮವಾಗಿ ನೋಡಿಕೊಳ್ಳಬೇಕು. ವಾರ್ಡ್‌ಗೆ ಭಕ್ತಾದಿಗಳು ಬಂದರೆ ಶ್ರೀಗಳಿಗೆ ಮತ್ತೆ ಮತ್ತೆ ಸೋಂಕು ತಗುಲುವ ಸಾಧ್ಯತೆ ಇರುವುದರಿಂದ ದಯಮಾಡಿ ದರ್ಶನಕ್ಕಾಗಿ ಪದೇ ಪದೆ ಚೆನ್ನೈನ ಆಸ್ಪತ್ರೆಗೆ ಬಂದು ತೊಂದರೆ ಕೊಡಬಾರದೆಂಬುದು ವೈದ್ಯರಾದ ಡಾ.ರೇಲಾರವರ ಕೋರಿಕೆ. ಇನ್ನೇನು ಕೆಲವೇ ದಿನಗಳಲ್ಲಿ ಪೂಜ್ಯರು ಸಿದ್ಧಗಂಗಾ ಮಠಕ್ಕೆ ಹಿಂದಿರುಗುವರು. ಆಗ ದರ್ಶನ ಪಡೆದುಕೊಳ್ಳಬಹುದು,”ಎಂದು ಕಿರಿಯ ಶ್ರೀಗಳು ತಿಳಿಸಿದ್ದಾರೆ.

ಚೆನ್ನೈನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶ್ರೀಗಳ ಆಪ್ತ ವೈದ್ಯ ಡಾ.ಪರಮೇಶ್ವರ್‌, ”ಶ್ರೀಗಳನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಮಾಡುವ ಬಗ್ಗೆ ವೈದ್ಯರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು. ಶ್ರೀಗಳು ಅತೀ ಶೀಘ್ರವಾಗಿ ಚೇತರಿಸಿಕೊಳ್ಳುವಂತೆ ಭಕ್ತರು ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳಿ. ಬೇಗ ಗುಣಮುಖರಾಗಿ ಮಠದಲ್ಲೇ ದರ್ಶನ ನೀಡಲಿದ್ದಾರೆ. ಮುಂದಿನ ವಾರದಿಂದ ಹಿರಿಯ ಶ್ರೀಗಳು ಮಠದಲ್ಲೇ ದರ್ಶನಕ್ಕೆ ಸಿಗಲಿದ್ದಾರೆ. ಅಲ್ಲಿಯವರೆಗೂ ಭಕ್ತರು ಕಾಯಬೇಕು”ಎಂದು ಮನವಿ ಮಾಡಿದ್ದಾರೆ.

ವಾರದ ನಂತರ ವಾರ್ಡ್‌ಗೆ ಶಿಫ್ಟ್‌: ಪಿತ್ತಕೋಶದ ಸಮಸ್ಯೆಯಿಂದ ಬಳಲುತ್ತಿದ್ದ ಸಿದ್ಧಗಂಗಾ ಶ್ರೀಗಳನ್ನು ಡಿ.7ರಂದು ಚೆನ್ನೈನ ರೇಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮರುದಿನ ವೈದ್ಯ ಮಹಮ್ಮದ್‌ ರೇಲಾ ನೇತೃತ್ವದ ತಂಡ ಶ್ರೀಗಳಿಗೆ ಬೈಪಾಸ್‌ ಸರ್ಜರಿ ಮಾಡಿ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಿದ್ದರು. ಶಸ್ತ್ರ ಚಿಕಿತ್ಸೆ ಬಳಿಕ ಶ್ರೀಗಳನ್ನು ಐಸಿಯುನಲ್ಲಿ ಇರಿಸಿ ನಿಗಾವಹಿಸಲಾಗಿತ್ತು. 7 ದಿನಗಳ ಬಳಿಕ ಶ್ರೀಗಳನ್ನು ಗುರುವಾರ ಐಸಿಯುನಿಂದ ವಿಶೇಷ ವಾರ್ಡ್‌ಗೆ ಶಿಫ್ಟ್‌ ಮಾಡಲಾಗಿದೆ. ತಮ್ಮ 111 ವರ್ಷಗಳಲ್ಲಿ ಶ್ರೀಗಳು ಆಸ್ಪತ್ರೆಯಲ್ಲಿ ಒಂದು ವಾರ ಕಳೆದಿದ್ದು ಇದೇ ಮೊದಲು.

ಮೊಬೈಲ್‌ಗೆ ನಿರ್ಬಂಧ: ಶ್ರೀಗಳನ್ನು ಭೇಟಿ ಮಾಡಲು ಬರುತ್ತಿದ್ದ ಭಕ್ತರ ಮೊಬೈಲ್‌ಗಳನ್ನು ಐಸಿಯುಗೆ ಕೊಂಡೊಯ್ಯವುದನ್ನು ಆಸ್ಪತ್ರೆ ನಿಬ್ಬಂದಿ ನಿರ್ಬಂಧಿಸಿದ್ದಾರೆ. ಹೀಗಾಗಿ ಕಳೆದೆರಡು ದಿನಗಳಿಂದ ಶ್ರೀಗಳನ್ನು ಭೇಟಿಯಾದ ಭಕ್ತರು ಹಾಗೂ ಜತೆಗಿರುವ ಶಿಷ್ಯಂದಿರಿಗೆ ಶ್ರೀಗಳ ಫೋಟೋ ತೆಗೆಯಲು ಅವಕಾಶ ಸಿಕ್ಕಿಲ್ಲ. ದೂರದೂರಿನಿಂದ ಕರೆ ಮಾಡುವ ಭಕ್ತರಿಗೆ ಶ್ರೀಗಳ ಫೋಟೋ ಕಳಿಸಿ ಅವರು ಆರೋಗ್ಯವಾಗಿರುವ ಮಾಹಿತಿಯನ್ನು ಭಕ್ತರು ಹಂಚಿಕೊಳ್ಳುತ್ತಿದ್ದರು.

About the author

ಕನ್ನಡ ಟುಡೆ

Leave a Comment