ರಾಜ್ಯ ಸುದ್ದಿ

ಸಿದ್ದರಾಮಯ್ಯನವರು ಎಚ್​.ಡಿ.ಕುಮಾರಸ್ವಾಮಿ ಅವರಿಗೆ, ಅವರಪ್ಪನಾಣೆ ಸಿಎಂ ಆಗಲ್ಲ ಎಂದು ಅವರಪ್ಪನ ಬುಡಕ್ಕೆ ಹೋಗಿದ್ದಾರೆ: ಪ್ರತಾಪ್​ ಸಿಂಹ

ಶಿವಮೊಗ್ಗ: ಮಾಜಿ ಸಿಎಂ ಸಿದ್ದರಾಮಯ್ಯನವರು ಎಚ್​.ಡಿ.ಕುಮಾರಸ್ವಾಮಿ ಅವರಿಗೆ ಅವರಪ್ಪನಾಣೆ ಸಿಎಂ ಆಗಲ್ಲ ಎಂದಿದ್ದರು. ಆದರೆ, ಈಗ ಅವರಪ್ಪನ ಬುಡಕ್ಕೇ ಹೋಗಿದ್ದಾರೆ ಎಂದು ಸಂಸದ ಪ್ರತಾಪ್​ ಸಿಂಹ ವಾಗ್ದಾಳಿ ನಡೆಸಿದ್ದಾರೆ.

ಜನಾರ್ದನ ರೆಡ್ಡಿ ಬಗ್ಗೆ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ತಿರುಗೇಟು ನೀಡಿದ ಪ್ರತಾಪ್​ ಸಿಂಹ, ಸಿದ್ದರಾಮಯ್ಯ ನಡವಳಿಕೆ ಅಪ್ಪಟ್ಟವಾಗಿದ್ರೆ ನಾನು ಅವರಿಗೆ ಉತ್ತರ ಕೊಡುತ್ತಿದ್ದೆ. ನಾನು ‘ಮೈನಿಂಗ್​ ಮಾಫಿಯಾ’ ಪುಸ್ತಕ ಬರೆದಿದ್ದು 2010ರಲ್ಲಿ. ಆದರೆ, ಸಿದ್ದರಾಮಯ್ಯ ಅವರು ಮಾತಾಡಿ ಎಂಟು ತಿಂಗಳು ಕೂಡ ಆಗಿಲ್ಲ. ನೀಚ, ಅವನನ್ನು ಬೆಳಸಿಬಿಟ್ಟೆ ಅಂದವರು ಕೂಡ ಒಂದೇ ವೇದಿಕೆಯಲ್ಲಿ ಪ್ರಚಾರ ಮಾಡುತ್ತಿದ್ದಾರೆ ಎಂದರು.

ಸೋನಿಯಾ ಗಾಂಧಿಯನ್ನು ಟೀಕಿಸಿದ್ದರು, 2006ರ ಮೊದಲು ಸೋನಿಯಾ ಗಾಂಧಿಯನ್ನು ಏಕವಚನದಲ್ಲಿ ಟೀಕಿಸಿದವರು ಈಗ ಅವರ ಬಳಿಯೇ ಹೋಗಿ ಕೈಮುಗಿದು ನಿಲ್ಲುತ್ತಾರೆ. ಇದಕ್ಕೆಲ್ಲ ಸಿದ್ದರಾಮಯ್ಯ ಉತ್ತರ ಕೊಟ್ಟರೆ, ನಾನು ನನ್ನ ಪುಸ್ತಕದ ಬಗ್ಗೆ ಆಡಿದ ಮಾತುಗಳಿಗೆ ಉತ್ತರ ಕೊಡುತ್ತೀನಿ ಎಂದರು.

ನ. 3ರಂದು ನಡೆಯಲಿರುವ ಚುನಾವಣೆ ಕರ್ನಾಟಕದ ಮುಂದಿನ ಬದಲಾವಣೆಗೆ ನಾಂದಿಯಾಗಲಿದೆ ಎಂದ ಅವರು, ಬಳ್ಳಾರಿಯಲ್ಲಿ ಹತ್ತು ಸಚಿವರು, ಎಂಟು ಮಂದಿ ಸಂಸದರು ಹಾಗೂ ಮೂರು ಡಜನ್ ಶಾಸಕರು ಬೀಡು ಬಿಟ್ಟಿದ್ದಾರೆ. ಇಷ್ಟು ಜನ ಸೇರಿ ರಾಮುಲು ಅವರ ಗೆಲುವನ್ನು ತಡೆಯಲು ಯತ್ನಿಸುತ್ತಿದ್ದಾರೆ ಎಂದರು.

ಇನ್ನು ಶಿವಮೊಗ್ಗದಲ್ಲಿ ಮುಖ್ಯಮಂತ್ರಿ ಹಾಗೂ ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಪ್ರಧಾನಿ ಬೀಡು ಬಿಟ್ಟು ವೈಯಕ್ತಿಕ ಟೀಕೆ ಮಾಡುತ್ತಿದ್ದಾರೆ. ಎಲ್ಲರಿಗೂ ಚುನಾವಣೆ ಭಯ ತಂದಿದೆ. ಬಿಜೆಪಿ ಬಗ್ಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಅಧೀರಗೊಂಡಿದೆ. ಬಿಜೆಪಿ ಗೆದ್ದರೆ ರಾಜ್ಯ ಸರ್ಕಾರ ಬಿದ್ದು ಹೋಗುತ್ತದೆ ಎಂಬ ಭಯ ಕಾಂಗ್ರೆಸ್ ಜೆಡಿಎಸ್ ಗೆ ಆವರಿಸಿದೆ ಎಂದರು.

ಬಿಎಸ್​ವೈಯಿಂದ ಶಿವಮೊಗ್ಗ ಸಮಗ್ರ ಅಭಿವೃದ್ಧಿ, ಬಿಎಸ್​ವೈ ಸಂಸದರಾದ ಬಳಿಕ ಶಿವಮೊಗ್ಗ ಜಿಲ್ಲೆ ಸಮಗ್ರವಾಗಿ ಅಭಿವೃದ್ಧಿಯಾಗಿದೆ. ಅತಿ ಹೆಚ್ಚು ಅನುದಾನವನ್ನು ತನ್ನ ಕ್ಷೇತ್ರಕ್ಕೆ ತಂದವರು ಬಿ.ಎಸ್.ಯಡಿಯೂರಪ್ಪ. ನಾವು ಈ ಬಾರಿ ಚುನಾವಣೆ ಎದುರಿಸುತ್ತಿರುವುದು ಯಡಿಯೂರಪ್ಪ ಅವರು ಜಿಲ್ಲೆಗೆ ನೀಡಿರುವ ಕೊಡುಗೆಗಳ ಆಧಾರದ ಮೇಲೆ ಎಂದರು.

ಮುಖ್ಯಮಂತ್ರಿ ಮಾಡುತ್ತೇನೆ ಎಂದರೆ ಯಡಿಯೂರಪ್ಪ ಹೋಗಿ ದೇವೇಗೌಡರ ತೊಡೆ ಮೇಲೆ ಕೂರುತ್ತಾರೆ ಎಂದು ಟೀಕೆ ಮಾಡಲಾಗುತ್ತಿದೆ. ಆದರೆ, ‌ಕಳೆದ ವಿಧಾನಸಭಾ ಚುನಾವಣೆಯಲ್ಲಿ ಫಲಿತಾಂಶ ಬರುವುದಕ್ಕೆ ಮುನ್ನವೇ ದೇವೇಗೌಡರ ಮನೆಗೆ ತೆರಳಿ ಅವರ ಕಾಲ ಬಳಿ ಕುಳಿತು ನಿಮ್ಮ ಮಗನನ್ನು ಸಿಎಂ‌ ಮಾಡುತ್ತೇನೆ ಎಂದು ಕಾಂಗ್ರೆಸಿಗರು ಹೇಳಿದ್ದರು. ಕಾಂಗ್ರೆಸಿಗರ ಬೆಲೆ ಕಾಲ ಬಳಿ, ಯಡಿಯೂರಪ್ಪ ಅವರ ಬೆಲೆ ಅವರ ಮಟ್ಟಕ್ಕೆ ಎಂದರು.

ಅನಿತಾ ಕುಮಾರಸ್ವಾಮಿ ಆಸ್ತಿ ವಿವರ ಸಲ್ಲಿಸುವಾಗ 167 ಕೋಟಿ ರೂ. ಆಸ್ತಿ ತೋರಿಸಿದ್ದಾರೆ. ಅನಿತಾ ಕುಮಾರ ಸ್ವಾಮಿ ಹೊಳೆ ನರಸಿಪುರದಲ್ಲಿ ಚಿನ್ನದ ಆಲೂಗಡ್ಡೆ, ಚಿನ್ನದ ಭತ್ತ ಬೆಳೆದಿದ್ದರೇ ಎಂಬುದನ್ನು ಸ್ಪಷ್ಟಪಡಿಸಲಿ. ಈ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಲ್ಲಿ ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲುತ್ತೇವೆ. ಶಿವಮೊಗ್ಗದಲ್ಲಿ ಗೆದ್ದ ಬಳಿಕ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದರು.

About the author

ಕನ್ನಡ ಟುಡೆ

Leave a Comment