ರಾಜಕೀಯ

ಸಿದ್ದರಾಮಯ್ಯನವರೇ ನಿಮ್ಮ ನಡವಳಿಕೆ ನಿಮ್ಮ ಮರ್ಯಾದೆ ಮಟ್ಟವನ್ನು ತೋರಿಸುತ್ತದೆ: ಬಿಜೆಪಿ ಟೀಕೆ

ಬೆಂಗಳೂರು: ಮೈಸೂರು ಜಿಲ್ಲೆಯ ವರುಣಾ ಕ್ಷೇತ್ರದಲ್ಲಿ ಸಮಸ್ಯೆ ಹೇಳಿಕೊಳ್ಳಲು ಬಂದ ಮಹಿಳೆ ಜೊತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆದುಕೊಂಡ ರೀತಿಗೆ ನಾನಾ ಪ್ರತಿಕ್ರಿಯೆಗಳು ಕೇಳಿಬರುತ್ತಿರುವುದರ ಮಧ್ಯೆ ಪ್ರತಿಪಕ್ಷ ಬಿಜೆಪಿ ಅವರನ್ನು ತೀವ್ರವಾಗಿ ಟೀಕಿಸಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ, ಇಂತಹ ನಡವಳಿಕೆ ರಾಜಕೀಯ ನಾಯಕರಿಗೆ ಶೋಭೆ ತರುವಂಥದ್ದಲ್ಲ. ಬಹುಶಃ ಸಿದ್ದರಾಮಯ್ಯನವರು ಜೆಡಿಎಸ್ ಮೇಲಿನ ಸಿಟ್ಟಿನಿಂದ ವರುಣಾ ಕ್ಷೇತ್ರದಲ್ಲಿ ಮಹಿಳೆಯ ಮೇಲೆ ಸಿಟ್ಟು ಮಾಡಿಕೊಂಡಿರಬಹುದು. ರಾಜಕೀಯ ನಾಯಕರು ಸಾರ್ವಜನಿಕ ಜೀವನದಲ್ಲಿ ಸಭ್ಯವಾಗಿ ವರ್ತಿಸಬೇಕು ಎಂದು ಹೇಳಿದರು. ಬಿಜೆಪಿ ನಾಯಕ ಸಿ ಟಿ ರವಿ, ಕಳೆದ ವಾರ ಮರ್ಯಾದೆ ಕೆಟ್ಟವರು ಎಂದು ನಮ್ಮನ್ನು ತಮಾಷೆ ಮಾಡಿದ ಸಿದ್ದರಾಮಯ್ಯನವರೇ ಇಂದು ನಿಮ್ಮ ಮರ್ಯಾದೆಯ ಮಟ್ಟ ಎಷ್ಟು ಎಂದು ತೋರಿಸಿದ್ದೀರಿ. ವೋಟು ಹಾಕಿ ಗೆಲ್ಲಿಸಿದ ಮತದಾರರ ಒಂದು ಪ್ರಶ್ನೆಯನ್ನು ಸಹಿಸಿಕೊಳ್ಳಲಾಗದವರು ನಿಮ್ಮ ಸರ್ವಾಧಿಕಾರದ ಧೋರಣೆಯನ್ನು ತೋರಿಸಿಕೊಟ್ಟಿದ್ದೀರಿ ಎಂದು ಟೀಕಿಸಿದರು.

ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಭಾರತಿ ಶೆಟ್ಟಿ, ರಾಜಕೀಯದಲ್ಲಿರಲಿ ಅಥವಾ ನಿತ್ಯ ಜೀವನದಲ್ಲಿರಲಿ ಪ್ರತಿಯೊಬ್ಬರಿಗೂ ಗುರಿ ಮತ್ತು ಗುರು ಎಂಬುದಿರಬೇಕು. ಸಿದ್ದರಾಮಯ್ಯನವರಿಗೆ ಯಾರೂ ಗುರುಗಳಿರಲಿಲ್ಲ ಎಂಬುದು ಅವರ ವರ್ತನೆಯಿಂದ ಗೊತ್ತಾಗುತ್ತದೆ. ಅವರ ಗುರಿ ಏನಿದೆಯೋ ಯಾರಿಗೆ ಗೊತ್ತು. ಅವರು ಮಾತನಾಡುವಾಗ ಬಳಸುವ ಭಾಷೆ ಮತ್ತು ಅವರ ದೈಹಿಕ ಭಾಷೆ ಶೋಚನೀಯ. ಮಹಿಳೆಯ ಹೆಗಲನ್ನು ತಳ್ಳಿ ಅವರ ಬಟ್ಟೆಯನ್ನು ಎಳೆದ ರೀತಿ ಸರಿಯಲ್ಲ. ಮಹಿಳೆಗೆ ಬಾಯಿ ಮುಚ್ಚಲು ಹೇಳಿ ನೀನು ರಾಜಕೀಯ ನಾಯಕಿಯಾ ಎಂದು ಸಿದ್ದರಾಮಯ್ಯನವರು ಮಹಿಳೆ ಮೇಲೆ ಕಿರುಚುತ್ತಿದ್ದಾರೆ, ಮಹಿಳೆಗೆ ಕ್ಷಮೆ ಕೇಳಲು ಹೇಳುವುದು ನಿಜಕ್ಕೂ ನೋವಿನ ಸಂಗತಿ. ಮಹಿಳಾ ಆಯೋಗಕ್ಕೆ ನಾನು ವಿಷಯ ತಿಳಿಸಿ ಈ ಬಗ್ಗೆ ಗಮನ ಹರಿಸುವಂತೆ ಹೇಳಿದ್ದೇನೆ ಎಂದು ಹೇಳಿದ್ದಾರೆ.

About the author

ಕನ್ನಡ ಟುಡೆ

Leave a Comment