ರಾಜಕೀಯ

ಸಿದ್ದರಾಮಯ್ಯನವರ ಸೋಲಿಗೆ ಜನರೇ ಕಾರಣ ಹೊರತು ಜಿ ಟಿ ದೇವೇಗೌಡ ಅಲ್ಲ: ಎಚ್​.ಡಿ ದೇವೇಗೌಡರು

ಹಾಸನ: ಮೈಸೂರಿನಲ್ಲಿ ಕಳೆದ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯನವರ ಸೋಲಿಗೆ ಅಲ್ಲಿನ ಜನರು ಕಾರಣವೇ ಹೊರತು ಜೆಡಿಎಸ್ ಆಗಲಿ, ಜಿ.ಟಿ. ದೇವೇಗೌಡರಾಗಲಿ ಕಾರಣವಲ್ಲ ಎಂದು ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡರು ಪ್ರತಿಕ್ರಿಯಿಸಿದ್ದಾರೆ. ಹಾಸನದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಕೂಡ ಚುನಾವಣೆಯಲ್ಲಿ ಸೋತಿದ್ದೇನೆ. ಅವತ್ತಿನ ರಾಜಕೀಯ ಸನ್ನಿವೇಶದಲ್ಲಿ ಜನತಾದಳದಲ್ಲಿ ಜೆ ಹೆಚ್ ಪಟೇಲರು ಹಿರಿಯ ನಾಯಕರಿದ್ದರು, ಡೆಪ್ಯುಟಿ ಸಿಎಂ ಆಗಿದ್ದರು, ಅವರನ್ನು ಮುಖ್ಯಮಂತ್ರಿಯಾಗಿ ಮಾಡುವುದು ಒಳ್ಳೆಯದು ಎಂದು ತೀರ್ಮಾನಿಸಿ ಸಿದ್ದರಾಮಯ್ಯನವರನ್ನು ಉಪ ಮುಖ್ಯಮಂತ್ರಿಯಾಗಿ ಮಾಡಲಾಯಿತು.

ಅವರಿಗೆ ಮುಖ್ಯಮಂತ್ರಿಯಾಗಲಿಲ್ಲ ಎಂಬ ನೋವಿದ್ದಿರಬಹುದು. ಮುಂದೆ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಗೆ ಹೋದರು. ಮುಖ್ಯಮಂತ್ರಿಯಾಗಿ 5 ವರ್ಷ ಅಧಿಕಾರ ನಡೆಸಿದರು. ಈ ಮಧ್ಯೆದಲ್ಲಿ ಎಸ್ ಎಂ ಕೃಷ್ಣ ಅವರ ಪಾತ್ರವೇನು ಎಲ್ಲ ನನಗೆ ಗೊತ್ತಿದೆ. ಈಗ ನನಗೆ ಅಗ್ನಿಪರೀಕ್ಷೆ. ಸಿದ್ದರಾಮಯ್ಯನವರನ್ನು ಕಳೆದ ಬಾರಿ ಮೈಸೂರಿನಲ್ಲಿ ಸೋಲಿಸಿದ್ದು ಅವರಿಗೆ ತುಂಬಾ ನೋವಿದೆ, ಅದು ನನಗೆ ಅರ್ಥವಾಗುತ್ತದೆ. ನಾನು ಚುನಾವಣೆ ಪ್ರಚಾರಕ್ಕೆ ಹೋಗಲಿಲ್ಲ. ಅವರ ಸೋಲಿಗೆ ಜಿ ಟಿ ದೇವೇಗೌಡ ಕಾರಣವಲ್ಲ, ಜನ ಕೊಟ್ಟ ತೀರ್ಮಾನ ಈ ವಿಷಯದಲ್ಲಿ ನಾನು ಯಾರನ್ನೂ ನಿಂದನೆ ಮಾಡಲು ಹೋಗುವುದಿಲ್ಲ ಎಂದು ದೇವೇಗೌಡ ಮಾರ್ಮಿಕವಾಗಿ ಮಾತನಾಡಿದರು. ಮೈತ್ರಿ ಪಕ್ಷದಲ್ಲಿ ಒಡಕಿಲ್ಲವೇ? ಎಂದು ನೀವು ಪ್ರಶ್ನಿಸಬಹುದು. ಈಗಾಗಲೇ ಸಿದ್ದರಾಮಯ್ಯನವರೇ ಒಡಕು ಸರಿ ಮಾಡುತ್ತೇವೆ ಅಂತ ಹೇಳಿದ್ದಾರೆ. ಸದ್ಯಕ್ಕೆ ಲೋಕಸಭಾ ಚುನಾವಣೆಯತ್ತ ನಮ್ಮೆಲ್ಲರ ಗಮನವಿದೆ. ಬಿಜೆಪಿಯನ್ನು ಸೋಲಿಸುವುದು ನಮ್ಮ ಗುರಿ ಎಂದಿದ್ದಾರೆ.

ಬಿಜೆಪಿಯವರು ಐಟಿ ದಾಳಿಯನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ. ಕಳೆದ 5 ವರ್ಷಗಳಿಂದ ನೋಡುತ್ತಾ ಬಂದಿದ್ದೇನೆ, ಮಾತೆತ್ತಿದರೆ ಪ್ರಧಾನಿ ನರೇಂದ್ರ ಮೋದಿ, ಕೆಲವರು ದೇಶದ ಹಣವನ್ನು ಲೂಟಿ ಹೊಡೆದಿದ್ದಾರೆ ಎಂದು ಹೇಳುತ್ತಾರೆ. ಅವರ ಬಗ್ಗೆ ಯಾರೂ ನಿಂದಿಸುವ ರೀತಿ ಮಾತನಾಡುತ್ತಿಲ್ಲ, ಆದರೂ ಅವರು ಟೀಕೆ ಮಾಡುತ್ತಾ ಬರುತ್ತಿರುವುದು ಮೋದಿಯವರ ಈ ಹೇಳಿಕೆಯಿಂದ ನನ್ನ ಮನಸ್ಸಿಗೆ ನೋವಾಗಿದೆ. ನಾವು ಹಿಂದುಸ್ಥಾನದಲ್ಲಿ ಮೊದಲ ಬಾರಿಗೆ ಮಹಿಳಾ ಮೀಸಲಾತಿ ಮತ್ತು ಶೈಕ್ಷಣಿಕ ಮೀಸಲಾತಿ ಜಾರಿಗೆ ತಂದೆವು. ನನ್ನನ್ನು ಒಕ್ಕಲಿಗ, ಲಿಂಗಾಯತರ ಪಾರ್ಟಿ ಅಂತ ಕೆಲವರು ದೂರಿದರು. ಆದರೆ, ನಾನು ವಿಚಲಿತನಾಗಲಿಲ್ಲ, ನಾನು ಯಾರ ಬಗ್ಗೆಯೂ ನಿಂದಿಸುವ ಮಟ್ಟಕ್ಕೆ ಕೆಳಗಿಳಿಯುವುದಿಲ್ಲ ಎಂದು ಮೋದಿಯವರ ವಿರುದ್ಧ ಟೀಕಿಸಿದರು.

About the author

ಕನ್ನಡ ಟುಡೆ

Leave a Comment