ರಾಜಕೀಯ

ಸಿದ್ದರಾಮಯ್ಯ ಸೋಲಿಸಿದ ರಾಹು-ಕೇತು ಜೆಡಿಎಸ್‌ನವರೇ: ಬಿ.ಎಸ್‌.ಯಡಿಯೂರಪ್ಪ

ಬೆಂಗಳೂರು:ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸಿದ ರಾಹು-ಕೇತು ಜೆಡಿಎಸ್‌ನವರೇ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಆರೋಪಿಸಿದ್ದಾರೆ. ನನ್ನನ್ನು ಸೋಲಿಸಲು ಶನಿ, ರಾಹು-ಕೇತು ಎಲ್ಲರೂ ಒಂದಾಗಿ ಕಾಲೆಳೆದರು ಎಂದು ಸಿದ್ದರಾಮಯ್ಯ ಅವರು ಶನಿವಾರ ಮೈಸೂರಿನಲ್ಲಿ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಹೌದು ಸಿದ್ದರಾಮಯ್ಯ ಅವರನ್ನು ಸೋಲಿಸಿದ್ದು ಜೆಡಿಎಸ್‌ ರಾಹು-ಕೇತುಗಳೇ ಎಂದರು.

ಸಿದ್ದರಾಮಯ್ಯ ಹೇಳಿದ ರಾಹು-ಕೇತು ಬಿಜೆಪಿಯಲ್ಲ. ಜೆಡಿಎಸ್‌ ಬಗ್ಗೆಯೇ ಅವರು ಹೇಳಿದ್ದರು. ಚಾಮುಂಡೇಶ್ವರಿಯಲ್ಲಿ ಜಿ.ಟಿ.ದೇವೇಗೌಡರನ್ನು ನಿಲ್ಲಿಸಿ ಸೋಲಿಸಲಾಗಿದೆ. ಈ ಎಲ್ಲ ನೋವು ಸಹಿಸಿಕೊಂಡು ಸಿದ್ದರಾಮಯ್ಯ ಇರೋದೆ ಆಶ್ಚರ್ಯ ಎಂದು ಹೇಳಿದರು. ಇದೇ ವೇಳೆ, ಅವರ ಪರ ಬ್ಯಾಟಿಂಗ್‌ ಮಾಡಿದ ಯಡಿಯೂರಪ್ಪ, ಸಿದ್ದರಾಮಯ್ಯ ಅವರನ್ನು ರಾಜಕೀಯದಿಂದ ದೂರವಿರಿಸಲು ಪಿತೂರಿ ನಡೆದಿದೆ ಎಂದು ಹೊಸ ಬಾಂಬ್‌ ಸಿಡಿಸಿದರು. ಎಲ್ಲರೂ ಸೇರಿ ಸಿದ್ದರಾಮಯ್ಯ ಅವರಿಗೆ ಅಪಮಾನ ಮಾಡಿದ್ದಾರೆ. ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ನಡೆಯುತ್ತಿರುವ ಎಲ್ಲ ಬೆಳವಣಿಗೆಗಳನ್ನು ಗಮನಿಸುತ್ತಿದ್ದು, ಸೂಕ್ತ ಕಾಲದಲ್ಲಿ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು.

ಸಿಎಂ ಆಗಲಿ ಎಂದು ಹಾರೈಕೆ : ವಿಶ್ವಕರ್ಮ ಯಜ್ಞ ಮಹೋತ್ಸವದಲ್ಲಿ ಬಿ.ಎಸ್‌.ಯಡಿಯೂರಪ್ಪ ಅವರ ಬಗ್ಗೆ  ಜ್ಯೋತಿಷಿ ದ್ವಾರಕಾನಾಥ್‌ ಗುರೂಜಿ ಮೆಚ್ಚುಗೆಯ ಮಾತು ಆಡಿದರು. ಯಡಿಯೂರಪ್ಪ ಅವರಿಗೆ ಮತ್ತೂಮ್ಮೆ ರಾಜ್ಯವನ್ನಾಳುವ ಶಕ್ತಿ ದೇವರು ನೀಡಲಿ. ಯಡಿಯೂರಪ್ಪ ಮುಖ್ಯಮಂತ್ರಿ ಆಗಲಿ ಎಂದು ನೀವು ಬ್ರಹ್ಮನನ್ನು ಕೇಳಿ, ಈಡೇರುತ್ತದೆ ಎಂದು ಸಮಾರಂಭದಲ್ಲಿ ಪಾಲ್ಗೊಂಡಿದ್ದವರಿಗೆ ಹೇಳಿದರು.

ಪ್ರತಿಕ್ರಿಯಿಸುವುದಿಲ್ಲ : ಸಿದ್ದರಾಮಯ್ಯ ಅವರು ಯಾವ ಅರ್ಥದಲ್ಲಿ ರಾಹು-ಕೇತು  ಎಲ್ಲ ಸೇರಿ ನನ್ನ ಸೋಲಿಸಿದರು ಎಂದು ಹೇಳಿದ್ದಾರೋ ಗೊತ್ತಿಲ್ಲ. ಅದಕ್ಕೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ
– ಎಚ್‌.ಡಿ.ಕುಮಾರಸ್ವಾಮಿ

 

About the author

ಕನ್ನಡ ಟುಡೆ

Leave a Comment