ರಾಜಕೀಯ

ಸಿದ್ದು- ಜನಾರ್ದನ ರೆಡ್ಡಿ ಟ್ವೀಟ್ ವಾರ್: ಮಕ್ಕಳಿಗೆ ಪಾಪದ ಶಾಪ ತಟ್ಟದಿರಲಿ

ಬಳ್ಳಾರಿ : ಗಣಿ ಅಕ್ರಮದ ವಿಷಯದಲ್ಲಿ ಶುರುವಾದ ಮಾಜಿ ಸಚಿವ ಜಿ. ಜನಾರ್ದನ ರೆಡ್ಡಿ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಅವರ ನಡುವಿನ ವಾಕ್ಸಮರ ಮಂಗಳವಾರ ವೈಯಕ್ತಿಕ ಹಂತಕ್ಕೆ ತಲುಪಿದೆ. ಸಿದ್ದರಾಮಯ್ಯ ಅವರ ಮಗನ ಸಾವಿಗೆ ಅವರ ಅಪ್ಪ ಮಾಡಿದ ಪಾಪ ಕಾರಣ ಎಂದು ರೆಡ್ಡಿ ನೀಡಿರುವ ಹೇಳಿಕೆ ಮತ್ತು ಇದಕ್ಕೆ ಸಿದ್ದರಾಮಯ್ಯ ನೀಡಿರುವ ತಿರುಗೇಟು ತೀವ್ರ ಸಾರ್ವಜನಿಕ ಚರ್ಚೆಗೆ ಕಾರಣವಾಗಿದೆ. ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದ ವೇಳೆ ಸಿದ್ದರಾಮಯ್ಯ ವಿರುದ್ಧ ರೆಡ್ಡಿ ಕಿಡಿ ಕಾರಿದ್ದರು. ಗಣಿ ಅಕ್ರಮ, ಜೈಲ್‌, ಬೇಲ್‌, ಡೀಲ್‌ನಂತಹ ವಿಷಯಗಳ ಮೂಲಕ ಆರಂಭವಾದ ವಾಗ್ದಾಳಿಯಲ್ಲಿ ಈಗ ಮಕ್ಕಳನ್ನು ಎಳೆದುತರಲಾಗಿದೆ. ಟ್ವಿಟರ್‌ನಲ್ಲಿ ಸರಣಿ ವಾಗ್ದಾಳಿ ಆರಂಭಿಸಿದ್ದ ಸಿದ್ದರಾಮಯ್ಯ ಅವರಿಗೆ ರೆಡ್ಡಿ ಕೂಡ ಅದೇ ಮಾರ್ಗದಲ್ಲಿ ಟ್ವೀಟ್‌ ಮಾಡಿ ಪ್ರತ್ಯುತ್ತರ ನೀಡಿದ್ದಾರೆ. ಅಂದ ಹಾಗೆ ಜನಾರ್ದನ ರೆಡ್ಡಿ ಈವರೆಗೆ ಮಾಡಿರುವುದು ಎರಡೇ ಟ್ವೀಟ್‌. ಅದರಲ್ಲೊಂದು ಸಿದ್ದರಾಮಯ್ಯ ವಿರುದ್ಧದಾಗಿದೆ.

ಮೊದಲ ದಿನ ಜೈಲ್‌, ಬೇಲ್‌, ಗಣಿ 

ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ಹಾನಗಲ್‌ ಕ್ರಾಸ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಮಾಜಿ ಸಚಿವ ರೆಡ್ಡಿ ”ಮಾಜಿ ಸಿಎಂ ಸಿದ್ದರಾಮಯ್ಯ ನನ್ನನ್ನು ಜೈಲಿಗೆ ಕಳಿಸಿ, ಬಳ್ಳಾರಿ ಅಭಿವೃದ್ಧಿ ನಾಶ ಮಾಡಿದರು. ನಮ್ಮ ಅವಧಿ ಹಾಗೂ ಅವರ ಅವಧಿಯಲ್ಲಾದ ಅಭಿವೃದ್ಧಿಯ ಬಗ್ಗೆ ಬೇಕಾದರೆ ಬಹಿರಂಗ ಚರ್ಚೆಗೆ ಬರಲಿ,” ಎಂದು ಪಂಥಾಹ್ವಾನ ನೀಡಿದ್ದರು. ಜೈಲಿಗೆ ಕಳುಹಿಸಲು ತಾವೇ ಕಾರಣವೆಂದು ಹೇಳಿದ್ದಕ್ಕೆ ತಿರುಗೇಟು ನೀಡಿದ ಸಿದ್ದರಾಮಯ್ಯ ”ಸಿದ್ದರಾಮಯ್ಯ ಅನ್ಯಾಯವಾಗಿ ನನ್ನನ್ನು ಜೈಲಿಗೆ ಹಾಕಿಸಿದ್ದರು ಎಂದು ಕಣ್ಣೀರು ಹಾಕುವ ಜನಾರ್ದನರೆಡ್ಡಿ ಅವರೇ, ದಯವಿಟ್ಟು ನಿಮ್ಮ ಪಕ್ಷದ ಸಂಸದರೇ ಬರೆದ ಈ ಪುಸ್ತಕವನ್ನೊಮ್ಮೆ ಓದಿ. ಜೈಲಿಗೆ ಹೋಗುವ ಪಾಪ ಏನು ಮಾಡಿದ್ದೀರೆಂಬುದು ತಿಳಿಯುತ್ತದೆ,” ಎಂದು ಗಣಿಗಾರಿಕೆಗೆ ಸಂಬಂಧಿಸಿ ಪ್ರತಾಪ್‌ ಸಿಂಹ ಅವರ ಪುಸ್ತಕದ ಮುಖಪುಟ ಟ್ವೀಟ್‌ ಮಾಡಿದ್ದರು. ಬಳಿಕ ಸರಣಿ ಟ್ವೀಟ್‌ನ ಮೂಲಕ ಮಾಜಿ ಸಿಎಂ ವಾಗ್ದಾಳಿ ನಡೆಸಿದ್ದರು. ”ಪಾದಯಾತ್ರೆ ದಿನದಿಂದಲೇ ರೆಡ್ಡಿ ಗ್ಯಾಂಗ್‌ ಕಟ್ಟಿದ್ದ ರಿಪಬ್ಲಿಕ್‌ ಬಳ್ಳಾರಿ ಕುಸಿಯಲಾರಂಭಿಸಿತ್ತು. ಅದರ ನಂತರ ಜನಾರ್ದನ ರೆಡ್ಡಿ ಜೈಲು ಪಾಲಾಗಿ ಹೋದರು. ನಮ್ಮನ್ನು ಮತ್ತೆ ಕೆಣಕಲು ಬರಬೇಡಿ. ಬೇಲ್‌ ರದ್ದಾಗಿ ಮತ್ತೆ ಜೈಲಿಗೆ ಹೋಗಬೇಕಾಗಿ ಬಂದೀತು,” ಎಂದು ಎಚ್ಚರಿಸಿದ್ದರು.

ಎರಡನೇ ದಿನ ಮಕ್ಕಳು, ದೇವರ ಪ್ರಸ್ತಾಪ, ಖಾಸಗಿ ಟಿವಿಯೊಂದಿಗೆ ಮಾತನಾಡಿದ ಜನಾರ್ದನ ರೆಡ್ಡಿ ಅವರು ಸಿದ್ದರಾಮಯ್ಯ ವಿರುದ್ಧ ಮಂಗಳವಾರ ಮತ್ತೆ ಹರಿಹಾಯ್ದರು. ”ನನಗೆ ಸಿದ್ದರಾಮಯ್ಯ ಅನ್ಯಾಯ ಮಾಡಿ, ಜೈಲಿಗೆ ಹಾಕಿಸಿದರು. ಆ ಅನ್ಯಾಯಕ್ಕೆ ದೇವರು ಅವರ ಮಗನನ್ನು ದೂರ ಮಾಡಿದ್ದಾನೆ. ನಾನು ಕಣ್ಣೀರು ಹಾಕುವುದಿಲ್ಲ. ಹೋರಾಟ ಮಾಡುತ್ತೇನೆ,” ಎಂದಿದ್ದರು. ಇದಾದ ಕೆಲ ಹೊತ್ತಿನಲ್ಲಿಯೇ ”ನನ್ನ ಮಗನ ಸಾವು ನನಗೆ ದೇವರು ಕೊಟ್ಟ ಶಿಕ್ಷೆ ಎಂದು ಮಾಜಿ ಸಚಿವ ಜನಾರ್ದನರೆಡ್ಡಿ ಹೇಳಿದ್ದಾರೆ. ನಿಮ್ಮ ಪಾಪಗಳಿಗಾಗಿ ದೇವರು ನಿಮ್ಮ ಮಕ್ಕಳಿಗೆ ಶಿಕ್ಷೆ ನೀಡದಿರಲೆಂದು ಬೇಡಿಕೊಳ್ಳುತ್ತೇನೆ,” ಎಂದು ಸಿದ್ದರಾಮಯ್ಯ ಟಾಂಗ್‌ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯವಾಗಿರದ ಮಾಜಿ ಸಚಿವ ರೆಡ್ಡಿ, ಮಾಜಿ ಸಿಎಂಗೆ ಟ್ವಿಟರ್‌ ಮೂಲಕವೇ ಎದುರೇಟು ಕೊಟ್ಟಿದ್ದಾರೆ. ”ಹಿಂದೂ ವಿರೋಧಿ ಮತ್ತು ನಾಸ್ತಿಕರಾಗಿದ್ದ ನೀವು ಇತ್ತೀಚಿನ ದಿನಗಳಲ್ಲಿ ದೇವರನ್ನು ನಂಬುತ್ತಿರುವುದು ನನಗೆ ಖುಷಿ ಕೊಟ್ಟಿದೆ. ನಿಮಗೆ ಸದ್ಬುದ್ಧಿ ಕೊಡಲೆಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ,” ಎಂದು ಟ್ವೀಟ್‌ ಮಾಡುವ ಮೂಲಕ ರೆಡ್ಡಿ, ಮಾಜಿ ಸಿಎಂರನ್ನು ತಿವಿದಿದ್ದಾರೆ.

About the author

ಕನ್ನಡ ಟುಡೆ

Leave a Comment