ರಾಜ್ಯ ಸುದ್ದಿ

ಸಿದ್ಧಗಂಗಾ ಶ್ರೀ ನಿಧನಕ್ಕೆ ನರೇಂದ್ರ ಮೋದಿ ಸಂತಾಪ, ನಾಳೆ ತುಮಕೂರಿಗೆ ಆಗಮನ

ತುಮಕೂರು: ನಡೆದಾಡುವ ದೇವರು, ಶತಾಯುಷಿ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ತೀವ್ರ ಸಂತಾಪ ಸೂಚಿಸಿದ್ದು, ಮಂಗಳವಾರ ತುಮಕೂರಿಗೆ ಆಗಮಿಸಿ, ಶ್ರೀಗಳ ಅಂತಿಮ ದರ್ಶನ ಪಡೆಯಲುತ್ತಿದ್ದಾರೆ.
ಶ್ರೀಗಳ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಸರಣಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಡಾ. ಶ್ರೀ ಶಿವಕುಮಾರಸ್ವಾಮೀಜಿಗಳು ಬಡವರು, ದೀನ ದಲಿತರು ಮತ್ತು ದುರ್ಬಲ ವರ್ಗಗಳ ಶಿಕ್ಷಣ ಮತ್ತು ಆರೋಗ್ಯ ಆರೈಕೆಗೆ ಮುಂಚೂಣಿಯಲ್ಲಿದ್ದ ಮಹಾ ಸಂತರು ಎಂದು ಗುಣಗಾನ ಮಾಡಿದ್ದಾರೆ.
ಸಮಾಜ ಸೇವೆ, ಆಧ್ಯಾತ್ಮಿಕ, ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಹಾಗೂ ಸೌಲಭ್ಯ ವಂಚಿತರ ಹಕ್ಕುಗಳ ರಕ್ಷಣೆಗಾಗಿ ಉದ್ಧಾತ ಸೇವೆ ಸಲ್ಲಿಸುತ್ತಾ ನಮ್ಮ ಸಂಪ್ರದಾಯದ ಮೌಲ್ಯಗಳನ್ನು ಎತ್ತಿಹಿಡಿದ ಮಹಾಪುರುಷರು ಇವರು ಎಂದು ಪ್ರಧಾನಿ ಬಣ್ಣಿಸಿದ್ದಾರೆ. ಶ್ರೀಗಳ ನಿಧನದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ನಾಳಿನ ಎಲ್ಲ ಕಾರ್ಯಕ್ರಮಗಳನ್ನು ರದ್ದು ಮಾಡಿದ್ದು, ಮಠಕ್ಕೆ ಆಗಮಿಸಿ, ಶ್ರೀಗಳ ಅಂತಿಮ ದರ್ಶನ ಪಡೆಯಲಿದ್ದಾರೆ ಎಂದು ಬಿಜೆಪಿ ತಿಳಿಸಿದೆ.
ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಇಂದು ಸಂಜೆ ವೇಳೆಗೆ ತುಮಕೂರಿಗೆ ಆಗಮಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ವಯೋಸಹಜ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದ ಶಿವಕುಮಾರ ಸ್ವಾಮಿಜಿ ಅವರು ಇಂದು ಬೆಳಗ್ಗೆ 11.45ಕ್ಕೆ ಲಿಂಗೈಕ್ಯರಾಗಿದ್ದಾರೆ. ನಾಳೆ ಸಂಜೆ 3.30ರವರೆಗೆ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಸಂಜೆ 4.30ರ ನಂತರ ಅಂತ್ಯ ಸಂಸ್ಕಾರ ನೆರವೇರಲಿದೆ.

About the author

ಕನ್ನಡ ಟುಡೆ

Leave a Comment