ರಾಜ್ಯ ಸುದ್ದಿ

ಸಿದ್ಧಗಂಗಾ ಸ್ವಾಮೀಜಿ ಚಿಕಿತ್ಸೆ ಮುಂದುವರಿಕೆ: ಹೊಸದಾಗಿ 2 ಸ್ಟಂಟ್ ಅಳವಡಿಕೆ

ಬೆಂಗಳೂರು: ನಗರದ ಬಿಜಿಎಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವ ತುಮಕೂರು ಶ್ರೀ ಸಿದ್ಧಗಂಗಾ ಮಠದ ಶತಾಯುಷಿ  ಶಿವಕುಮಾರ ಸ್ವಾಮೀಜಿ ಅವರಿಗೆ ಚಿಕಿತ್ಸೆ ಮುಂದುವರಿದಿದ್ದು, ಸೋಮವಾರ ಮಠಕ್ಕೆ ತೆರಳುವ ಸಾಧ್ಯತೆಗಳಿವೆ.

ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಹಾಗೂ ನಿಯಮಿತ ಆರೋಗ್ಯ ತಪಾಸಣೆಗಾಗಿ ಶ್ರೀಗಳನ್ನು ಶನಿವಾರ ಸಂಜೆ ಆಸ್ಪತ್ರೆಗೆ ಕರೆತರಲಾಗಿತ್ತು. ಈ ವೇಳೆ ಶ್ರೀಗಳಿಗೆ ಅಲ್ಟ್ರಾಸೌಂಡ್‌, ಸಿ.ಟಿ. ಸ್ಕ್ಯಾನ್‌ ಹಾಗೂ ರಕ್ತ ಪರೀಕ್ಷೆ ನಡೆಸಲಾಗಿತ್ತು. ವರದಿಯಲ್ಲಿ ಶ್ರೀಗಳಿಗೆ ರಕ್ತ ಹಾಗೂ ಪಿತ್ತನಾಳದಲ್ಲಿ ಸೋಂಕು ಕಂಡು ಬಂದಿದ್ದು, ಆ್ಯಂಟಿ ಬಯೊಟಿಕ್ಸ್‌ ನೀಡಲಾಗಿತ್ತು. ಜ್ವರದೊಂದಿಗೆ ಪಿತ್ತನಾಳದ ಸಮಸ್ಯೆ ಹೊಂದಿದ್ದ ಶ್ರೀಗಳಿಗೆ ಭಾನುವಾರ ಪುನಃ ಎರಡು ಸ್ಟೆಂಟ್‌ಗಳನ್ನು ಅಳವಡಿಸಲಾಗಿತ್ತು. ಈ ಹಿಂದೆ 9 ಸ್ಟೆಂಟ್‌ಗಳನ್ನು ಅಳವಡಿಸಲಾಗಿತ್ತು. ಆದರೆ ಅವುಗಳಲ್ಲಿ ಒಂದು ಬಿದ್ದು ಹೋಗಿದ್ದರಿಂದ ಶ್ರೀಗಳ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ಹೀಗಾಗಿ ಹೊಸದಾಗಿ ಎರಡು ಸ್ಟೆಂಟ್‌ಗಳನ್ನು ಅಳವಡಿಸಲಾಗಿದೆ. 4 ಮೆಟಲ್‌ ಹಾಗೂ 6 ಪ್ಲಾಸ್ಟಿಕ್‌ ಸ್ಟೆಂಟ್‌ಗಳನ್ನು ಶ್ರೀಗಳ ಪಿತ್ತನಾಳದಲ್ಲಿ ಅಳವಡಿಸಲಾಗಿದೆ.

”ಚಿಕಿತ್ಸೆ ಪಡೆದ ಹದಿನೈದು ನಿಮಿಷಗಳಲ್ಲೇ ಶ್ರೀಗಳಿಗೆ ಪ್ರಜ್ಞೆ ಬಂದು, ವಾರ್ಡ್‌ಗೆ ಸ್ಥಳಾಂತರಿಸಲಾಯಿತು. ನಂತರ ಎರಡು ಗಂಟೆಗಳ ಕಾಲ ವಿಶ್ರಾಂತಿ ಪಡೆದ ಶ್ರೀಗಳು ಮಧ್ಯಾಹ್ನ 2 ಗಂಟೆ ಸುಮಾರಿಗೆ ಪೂಜೆ ಮಾಡಿ ಪ್ರಸಾದ ಸ್ವೀಕರಿಸಿದರು. ನಂತರ ಆಸ್ಪತ್ರೆಯಲ್ಲೂ ಭಕ್ತರಿಗೆ ದರ್ಶನ ನೀಡಿದರು. ಸಂಜೆ ಆಗುತ್ತಲೇ ಮಠಕ್ಕೆ ತೆರಳಲು ಹಠ ಹಿಡಿದರು. ಆದರೆ ರಕ್ತದಲ್ಲಿ ಸೋಂಕು ಇದ್ದುದರಿಂದ ಹಾಗೂ ಅವರ ಮೂತ್ರಪಿಂಡಗಳ ಕಾರ್ಯವೈಖರಿಯಲ್ಲಿ ಏರುಪೇರು ಕಾಣಿಸಿದ್ದು, ರಕ್ತದಲ್ಲಿ ಪ್ಲೇಟ್‌ಲೆಟ್‌ ಸಂಖ್ಯೆ 95 ಸಾವಿರ (4.5 ಲಕ್ಷ ಇರಬೇಕು)ಕ್ಕೆ ಇಳಿದಿದೆ. ಹೀಗಾಗಿ ಶ್ರೀಗಳ ಆರೋಗ್ಯದ ಬಗ್ಗೆ ನಿಗಾ ವಹಿಸಲು ಆಸ್ಪತ್ರೆಯಲ್ಲೇ ಉಳಿಸಿಕೊಳ್ಳಲಾಗಿದ್ದು, ಆ್ಯಂಟಿಬಯೊಟಿಕ್‌ ನೀಡಲಾಗುತ್ತಿದೆ. ಸೋಮವಾರ ಬೆಳಗ್ಗೆ ಮತ್ತೊಮ್ಮೆ ಪರೀಕ್ಷೆ ನಡೆಸಿ, ವರದಿ ನೋಡಿದ ಬಳಿಕ ಮಠಕ್ಕೆ ಕಳುಹಿಸುವ ನಿರ್ಧಾರ ಮಾಡಲಾಗುವುದು” ಎಂದು ಆಸ್ಪತ್ರೆಯ ಚೀಫ್‌ ಮೆಡಿಕಲ್‌ ಗ್ಯಾಸ್ಟೋ ಎಂಟರಾಲಜಲಿಸ್ಟ್‌ ಡಾ. ಬಿ.ಎಸ್‌.ರವೀಂದ್ರ ತಿಳಿಸಿದ್ದಾರೆ.

ಶ್ರೀಗಳು ಆಸ್ಪತ್ರೆಗೆ ದಾಖಲಾದಾಗಿನಿಂದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ದೂರವಾಣಿ ಮೂಲಕ ಅವರ ಆರೋಗ್ಯ ಕುರಿತು ವೈದ್ಯರಲ್ಲಿ ಮಾಹಿತಿ ಪಡೆಯುತ್ತಿದ್ದಾರೆ. ಭಾನುವಾರ ಆರೋಗ್ಯ ಸಚಿವ ಶಿವಾನಂದ ಪಾಟೀಲ್‌ ಸಹ ವೈದ್ಯರಿಗೆ ಕರೆ ಮಾಡಿ ಶ್ರೀಗಳ ಆರೋಗ್ಯ ವಿಚಾರಿಸಿದ್ದಾರೆ. ಭಾನುವಾರ ಆದಿಚುಂಚನಗಿರಿ ಮಠದ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಸುತ್ತೂರು ಮಠದ ಶ್ರೀಗಳು, ಮಾಜಿ ಸಚಿವ ವಿ. ಸೋಮಣ್ಣ, ಬಿಬಿಎಂಪಿ ಮೇಯರ್‌ ಗಂಗಾಂಬಿಕೆ ಮಲ್ಲಿಕಾರ್ಜುನ್‌, ಈ ಹಿಂದೆ ಶ್ರೀಗಳ ಆರೋಗ್ಯ ತಪಾಸಣೆ ನಡೆಸಿದ್ದ ಡಾ. ವೆಂಕಟರಮಣ ಮೊದಲಾದವರು ಆಸ್ಪತ್ರೆಗೆ ಭೇಟಿ ನೀಡಿ ಶ್ರೀಗಳ ಆರೋಗ್ಯ ವಿಚಾರಿಸಿದರು.

ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಅವರಿಗೆ ವಿಶ್ರಾಂತಿಯ ಅಗತ್ಯವಿದೆ. ಹೀಗಾಗಿ ಇನ್ನೂ ಒಂದು ದಿನ ಆಸ್ಪತ್ರೆಯಲ್ಲೇ ಉಳಿಯಬೇಕಿದೆ. ಆದರೆ ಶ್ರೀಗಳು ಮಠಕ್ಕೆ ತೆರಳಲು ಹಠ ಹಿಡಿದಿದ್ದಾರೆ. ಆದಾಗಿಯೂ ಅವರ ಆರೋಗ್ಯದ ಕುರಿತು ನಿರಂತರ ನಿಗಾ ವಹಿಸಲು ವೈದ್ಯರು ನಿರ್ಧರಿಸಿದ್ದಾರೆ. 
– ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಆದಿಚುಂಚನಗಿರಿ ಮಠ 

About the author

ಕನ್ನಡ ಟುಡೆ

Leave a Comment